ಗೋಧ್ರಾ ರೈಲು ದಹನ ಪ್ರಕರಣ: 17 ವರ್ಷಗಳ ಬಂಧನದ ಬಳಿಕ ಅಪರಾಧಿಗೆ ವೈದ್ಯಕೀಯ ಜಾಮೀನು ಮಂಜೂರು ಮಾಡಿದ ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ (Photo: PTI)
ಹೊಸದಿಲ್ಲಿ,ನ.23: 2002ರ ಗೋಧ್ರಾ ರೈಲು ದಹನ ಪ್ರಕರಣದ ಅಪರಾಧಿಗೆ ಇರ್ಫಾನ್ ಸಿರಾಜ್ ಪಾದಾ ತೀವ್ರ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವುದನ್ನು ಹಾಗೂ 17 ವರ್ಷಗಳಿಗೂ ಹೆಚ್ಚಿನ ಜೈಲುವಾಸ ಅನುಭವಿಸಿರುವುದನ್ನು ಪರಿಗಣಿಸಿದ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಆತನ ಶಿಕ್ಷೆಯನ್ನು ಅಮಾನತುಗೊಳಿಸಿ ವೈದ್ಯಕೀಯ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ್ ಮತ್ತು ಪಿ.ಬಿ.ವರಾಳೆ ಅವರ ಪೀಠವು ಈ ಆದೇಶವನ್ನು ಹೊರಡಿಸಿದ್ದು, ಇರ್ಫಾನ್ ಅನಾರೋಗ್ಯದ ಕುರಿತು ಗುಜರಾತ್ ಸರಕಾರ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ. ಶಿಕ್ಷೆಯ ವಿರುದ್ಧ ಇರ್ಫಾನ್ ಸಲ್ಲಿಸಿರುವ ಮೇಲ್ಮನವಿ ಸುಪ್ರೀಂ ಕೋರ್ಟ್ನಲ್ಲಿ ಬಾಕಿಯಿದೆ.
2002, ಫೆಬ್ರವರಿ 27ರಂದು ಅಯೋಧ್ಯೆಯಿಂದ ಮರಳುತ್ತಿದ್ದ ಸಾಬರಮತಿ ಎಕ್ಸ್ಪ್ರೆಸ್ ರೈಲಿನ ಎಸ್-6 ಬೋಗಿಗೆ ಬೆಂಕಿ ಹಚ್ಚಿದ ಘಟನೆಯಲ್ಲಿ 58 ಜನರು ಮೃತಪಟ್ಟಿದ್ದರು, ಇದು ಗುಜರಾತ್ನಾದ್ಯಂತ ಕೋಮುಗಲಭೆಗೆ ಕಾರಣವಾಗಿತ್ತು.
2011ರ ಮಾರ್ಚ್ನಲ್ಲಿ ವಿಚಾರಣಾ ನ್ಯಾಯಾಲಯವು ಪ್ರಕರಣದಲ್ಲಿ 31 ಜನರನ್ನು ದೋಷಿಗಳೆಂದು ತೀರ್ಪು ನೀಡಿ, 11 ಮಂದಿಗೆ ಮರಣದಂಡನೆ ಹಾಗೂ 20 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. 2017ರಲ್ಲಿ ಗುಜರಾತ್ ಉಚ್ಚ ನ್ಯಾಯಾಲಯವು 11 ಅಪರಾಧಿಗಳ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿ, ಉಳಿದ 20 ಮಂದಿಯ ಶಿಕ್ಷೆಯನ್ನು ಎತ್ತಿಹಿಡಿದಿತ್ತು.
ಈ ತೀರ್ಪುಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಗಳು 2018ರಿಂದ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇವೆ.
ರಾಜ್ಯ ಸರಕಾರವು ಅವಧಿಪೂರ್ವ ಬಿಡುಗಡೆಯ ಮನವಿಯನ್ನು ಪರಿಗಣಿಸಲು ಅನುವಾಗುವಂತೆ 2025ರಲ್ಲಿ ಇರ್ಫಾನ್ಗೆ ಮಧ್ಯಂತರ ಪೆರೋಲ್ ನೀಡಲಾಗಿತ್ತು.
ಗುಜರಾತ್ ಗಲಭೆಗೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಇಬ್ಬರು ಅಪರಾಧಿಗಳ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಕೆಲವೇ ದಿನಗಳಲ್ಲಿ ಈ ಆದೇಶ ಹೊರಬಿದ್ದಿದೆ.
ಕಳೆದ ಮಂಗಳವಾರ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಏಳು ಸದಸ್ಯರ ಹತ್ಯೆ ಪ್ರಕರಣದ ಅಪರಾಧಿಗಳಾದ ಬಿಪಿನ್ ಚಂದ್ರ ಜೋಶಿ ಮತ್ತು ಪ್ರದೀಪ್ ಮೊರ್ಧಿಯಾ ಅವರಿಗೆ ನ್ಯಾಯಾಲಯ ಜಾಮೀನು ನೀಡಿತ್ತು.






