ರಾಜ್ಯಪಾಲರು ಮಸೂದೆಗಳಿಗೆ ಒಪ್ಪಿಗೆ ನೀಡದೆ ಅನಿರ್ದಿಷ್ಟಾವಧಿಗೆ ವಿಳಂಬ ಮಾಡುವಂತಿಲ್ಲ : ಸುಪ್ರೀಂ ಕೋರ್ಟ್

Photo credit: PTI
ಹೊಸದಿಲ್ಲಿ: ರಾಜ್ಯ ಶಾಸಕಾಂಗಗಳು ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಅನಿರ್ದಿಷ್ಟಾವಧಿಗೆ ಸಹಿ ಹಾಕದೆ ವಿಳಂಬ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ, ನ್ಯಾಯಮೂರ್ತಿ ವಿಕ್ರಮ್ ನಾಥ್, ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರ ಪೀಠವು, ರಾಜ್ಯಪಾಲರು ಸರಿಯಾದ ಸಮಯದೊಳಗೆ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ಶಾಸಕಾಂಗ ಪ್ರಕ್ರಿಯೆಗೆ ಅಡ್ಡಿಪಡಿಸುವಂತಿಲ್ಲ ಎಂದು ಹೇಳಿದರು.
"ರಾಜ್ಯಪಾಲರು ಶಾಸಕಾಂಗದ ನಿರ್ಧಾರವನ್ನು ಅನಿರ್ದಿಷ್ಠಾವಧಿಗೆ ವಿಳಂಬ ಮಾಡುವಂತಿಲ್ಲ. ಸಂವಿಧಾನದ ಕಾರ್ಯಕ್ಕೆ ಯಾವುದೇ ಸಂಸ್ಥೆಯು ಅಡ್ಡಿಯಾಗಬಾರದು” ಎಂದು ನ್ಯಾಯಮೂರ್ತಿ ನರಸಿಂಹ ಹೇಳಿದರು.
ಮಸೂದೆಗಳಿಗೆ ಒಪ್ಪಿಗೆ ನೀಡುವಲ್ಲಿ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳ ಪಾತ್ರಗಳಿಗೆ ಸಂಬಂಧಿಸಿದ ಸಾಂವಿಧಾನಿಕ ನಿಬಂಧನೆಗಳು, ವಿಶೇಷವಾಗಿ ತಮಿಳುನಾಡು ರಾಜ್ಯ ಮತ್ತು ತಮಿಳುನಾಡು ರಾಜ್ಯಪಾಲರ ಪ್ರಕರಣದಲ್ಲಿ ನ್ಯಾಯಾಲಯದ ಅಭಿಪ್ರಾಯವನ್ನು ರಾಷ್ಟ್ರಪತಿಗಳು ಕೋರಿದ್ದರು. ಮೇ 2025ರಲ್ಲಿ ಸುಪ್ರೀಂ ಕೋರ್ಟ್ಗೆ ಕಳುಹಿಸಿರುವ 14 ಅಂಶಗಳ ರಾಷ್ಟ್ರಪತಿಗಳ ಉಲ್ಲೇಖದ ಬಗೆಗಿನ ವಿಚಾರಣೆಯ ಸಂದರ್ಭದಲ್ಲಿ ಈ ಹೇಳಿಕೆಗಳು ಹೊರಬಿದ್ದಿದೆ.
ಸಂವಿಧಾನವು ರಾಜ್ಯಪಾಲರು ಮಸೂದೆಗಳ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟವಾಗಿ ಹೇಳರುವಾಗ ಅವರು ಮಸೂದೆಗಳನ್ನು ಏಕೆ ತಡೆಹಿಡಿಯಬೇಕು? ರಾಜ್ಯಪಾಲರು ತುರ್ತಾಗಿ ಅಂಕಿತ ಹಾಕಬೇಕು ಎಂದು ಕಪಿಲ್ ಸಿಬಲ್ ನ್ಯಾಯಾಲಯದಲ್ಲಿ ವಾದಿಸಿದರು.







