ಉತ್ತರ ಪ್ರದೇಶ | ಧಾರ್ಮಿಕ ಮತಾಂತರ ಕಾಯ್ದೆಯಡಿ ದಾಖಲಾದ ಹಲವು ಎಫ್ಐಆರ್ಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಸುಪ್ರೀಂಕೋರ್ಟ್ | PC : PTI
ಹೊಸದಿಲ್ಲಿ,ಅ.18: ಉತ್ತರ ಪ್ರದೇಶ ಧಾರ್ಮಿಕ ಮತಾಂತರ ಕಾಯ್ದೆ, 2021ರ ಅಡಿಯಲ್ಲಿ ದಾಖಲಾಗಿದ್ದ ಹಲವಾರು ಎಫ್ಐಆರ್ಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಕ್ರಿಮಿನಲ್ ಕಾನೂನು ಅಮಾಯಕ ನಾಗರಿಕರಿಗೆ ಕಿರುಕುಳ ನೀಡುವ ಸಾಧನವಾಗಬಾರದು ಎಂದು ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠ ಮಹತ್ವದ ತೀರ್ಪು ನೀಡಿದೆ.
ಈ ಪ್ರಕರಣಗಳು ಫತೇಪುರ ಜಿಲ್ಲೆಯಲ್ಲಿನ “ಸಾಮೂಹಿಕ ಧಾರ್ಮಿಕ ಮತಾಂತರ” ಆರೋಪಗಳಿಗೆ ಸಂಬಂಧಿಸಿದ್ದು, ಸ್ಯಾಮ್ ಹಿಗ್ಗಿನ್ಬಾಟಮ್ ಕೃಷಿ, ತಂತ್ರಜ್ಞಾನ ಮತ್ತು ವಿಜ್ಞಾನ ವಿಶ್ವವಿದ್ಯಾಲಯದ (SHUATS) ಉಪಕುಲಪತಿ ರಾಜೇಂದ್ರ ಬಿಹಾರಿ ಲಾಲ್ ಸೇರಿದಂತೆ ಹಲವರ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು.
158 ಪುಟಗಳ ವಿಶ್ಲೇಷಣಾತ್ಮಕ ತೀರ್ಪು ನೀಡಿದ ನ್ಯಾಯಮೂರ್ತಿ ಪಾರ್ದಿವಾಲಾ, “ಕಾನೂನು ಪ್ರಕ್ರಿಯೆಯ ದೌರ್ಬಲ್ಯಗಳು, ತನಿಖಾ ಲೋಪಗಳು ಹಾಗೂ ವಿಶ್ವಾಸಾರ್ಹ ಸಾಕ್ಷ್ಯಾಧಾರಗಳ ಕೊರತೆಯಿಂದ ಈ ಎಫ್ಐಆರ್ಗಳು ಅಸ್ತಿತ್ವವನ್ನು ಕಳೆದುಕೊಂಡಿವೆ. ಅಂತಹ ವಿಚಾರಣೆ ಮುಂದುವರಿಸುವುದು ನ್ಯಾಯದ ಅಣಕ” ಎಂದು ಅಭಿಪ್ರಾಯಪಟ್ಟರು.
ತೀರ್ಪಿನಲ್ಲಿ, “ಕ್ರಿಮಿನಲ್ ಕಾನೂನು ಅಮಾಯಕ ವ್ಯಕ್ತಿಗಳ ಕಿರುಕುಳಕ್ಕೆ ಉಪಯೋಗವಾಗಬಾರದು. ನಂಬಲಾಗದ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮೊಕದ್ದಮೆ ಹೂಡುವುದು ಕಾನೂನಿನ ದುರುಪಯೋಗವಾಗಿದೆ” ಎಂದು ಪೀಠವು ಸ್ಪಷ್ಟವಾಗಿ ಹೇಳಿದೆ.
ಒಂದೇ ಘಟನೆಯ ಬಗ್ಗೆ ಪದೇ ಪದೇ ಎಫ್ಐಆರ್ಗಳನ್ನು ಮಾಡುವುದು ತನಿಖಾ ಪ್ರಕ್ರಿಯೆಯ ನೈತಿಕತೆಯನ್ನು ಹಾಳುಮಾಡುತ್ತದೆ ಮತ್ತು ಆರೋಪಿಗಳಿಗೆ ಅನಗತ್ಯ ಕಿರುಕುಳ ಉಂಟುಮಾಡುತ್ತದೆ ಎಂದು ನ್ಯಾಯಾಲಯವು ಉಲ್ಲೇಖಿಸಿದೆ.
ಸಂವಿಧಾನದ 32ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್ ತನ್ನ ಅಧಿಕಾರವನ್ನು ಬಳಸಿಕೊಂಡು, ಮೂಲಭೂತ ಹಕ್ಕುಗಳ ಉಲ್ಲಂಘನೆಯ ವಿರುದ್ಧ ನೇರ ಪರಿಹಾರ ನೀಡುವ ಹಕ್ಕು ಹೊಂದಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. “ಸಂವಿಧಾನವು ಈ ನ್ಯಾಯಾಲಯವನ್ನು ಮೂಲಭೂತ ಹಕ್ಕುಗಳ ಅಂತಿಮ ರಕ್ಷಕನಾಗಿ ನೇಮಿಸಿದೆ. ಇಂತಹ ಸಂದರ್ಭಗಳಲ್ಲಿ ಅರ್ಜಿದಾರರನ್ನು ಪರ್ಯಾಯ ಪರಿಹಾರಗಳತ್ತ ಕಳುಹಿಸುವ ಅಗತ್ಯವಿಲ್ಲ,” ಎಂದು ಪೀಠವು ಹೇಳಿದೆ.
ಆರು ಎಫ್ಐಆರ್ಗಳಲ್ಲಿ ಒಂದನ್ನು ಮಾತ್ರ ಪ್ರತ್ಯೇಕವಾಗಿಸಿ ಮುಂದಿನ ವಿಚಾರಣೆಗೆ ತೆಗೆದುಕೊಂಡು, ಆರೋಪಿಗಳಿಗೆ ಈ ಹಿಂದೆ ನೀಡಲಾದ ಮಧ್ಯಂತರ ರಕ್ಷಣೆಯನ್ನು ಮುಂದುವರಿಸಲಾಗಿದೆ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.
ಫತೇಪುರ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 15, 2022 ರಂದು ವಿಶ್ವ ಹಿಂದೂ ಪರಿಷತ್ತಿನ ಉಪಾಧ್ಯಕ್ಷ ಹಿಮಾಂಶು ದೀಕ್ಷಿತ್ ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಾಗಿತ್ತು. ದೂರಿನಲ್ಲಿ, ಇವಾಂಜೆಲಿಕಲ್ ಚರ್ಚ್ ಆಫ್ ಇಂಡಿಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ 90 ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಲಾಗಿದೆ ಎಂದು ಆರೋಪಿಸಲಾಗಿತ್ತು.
ಹೆಸರಿಸಲಾದ 35 ವ್ಯಕ್ತಿಗಳು ಹಾಗೂ 20 ಅಪರಿಚಿತರ ವಿರುದ್ಧ ಐಪಿಸಿ ಸೆಕ್ಷನ್ಗಳು 307 (ಕೊಲೆ ಪ್ರಯತ್ನ), 386 (ಸುಲಿಗೆ), 504 (ಅವಮಾನ) ಹಾಗೂ ಉತ್ತರ ಪ್ರದೇಶ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಆದರೆ, ಸಾಕ್ಷಿಗಳ ಹೇಳಿಕೆಗಳ ಪ್ರಕಾರ ಅವರು ಯಾವುದೇ ಬಲವಂತ, ಪ್ರಭಾವ ಅಥವಾ ಆಮಿಷದ ಮೂಲಕ ಮತಾಂತರಗೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ. “ಸಾಕ್ಷಿಗಳು ಆರೋಪಿತ ಘಟನೆಯ ಸ್ಥಳದಲ್ಲಿರಲಿಲ್ಲ, ಮತಾಂತರ ನಡೆದಿಲ್ಲ” ಎಂದು ನ್ಯಾಯಾಲಯವು ತೀರ್ಪಿನಲ್ಲಿ ಉಲ್ಲೇಖಿಸಿದೆ.
“ಉತ್ತರ ಪ್ರದೇಶ ಧಾರ್ಮಿಕ ಮತಾಂತರ ಕಾಯ್ದೆಯು ಧಾರ್ಮಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಅಮಾಯಕರ ಕಿರುಕುಳಕ್ಕೆ ಉಪಯೋಗವಾಗಬಾರದು. ಕಾನೂನಿನ ನಿಜವಾದ ಉದ್ದೇಶ ನ್ಯಾಯವನ್ನು ನೀಡುವುದು, ಭಯ ಹುಟ್ಟಿಸುವುದಲ್ಲ", ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ.







