ಮೇಕೆದಾಟು ಯೋಜನೆ: ಕರ್ನಾಟಕ ಸರಕಾರದ ಕ್ರಮ ಪ್ರಶ್ನಿಸಿ ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

Photo credit: PTI
ಹೊಸದಿಲ್ಲಿ,ನ. 13: ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಪ್ರಸ್ತಾವಕ್ಕೆ ಆಕ್ಷೇಪ ವ್ಯಕ್ತಪಡಿಸಿ ತಮಿಳುನಾಡು ಸರಕಾರ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ. ಸಿದ್ಧತಾ ಪ್ರಕ್ರಿಯೆಯನ್ನು ಈ ಹಂತದಲ್ಲಿ ವಿರೋಧಿಸುವುದು ‘‘ಅಪಕ್ವವಾಗುತ್ತದೆ’’ ಎಂದು ಸರ್ವೋಚ್ಛ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅಣೆಕಟ್ಟು ಯೋಜನೆಯ ಕರಡು ಪೂರ್ವ-ಸಾಧ್ಯತಾ ವರದಿ (ಡಿಪಿಆರ್)ಯು ಈಗ ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ)ದ ಅಂಗಳದಲ್ಲಿದೆ. ಮುಂದಕ್ಕೆ, ಈ ವರದಿಯನ್ನು ಎರಡು ಪರಿಣತ ಸಂಸ್ಥೆಗಳಾದ ಕಾವೇರಿ ಜಲ ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್ಸಿ) ಮತ್ತು ಕಾವೇರಿ ಜಲ ನಿರ್ವಹಣೆ ಪ್ರಾಧಿಕಾರ (ಸಿಡಬ್ಲ್ಯುಎಮ್ಎ) ಪರಿಶೀಲಿಸಿ ಅಂಗೀಕಾರ ನೀಡಬೇಕಾಗಿದೆ ಎಂದು ಮುಖ್ಯ ನ್ಯಾಯಾಧೀಶ ಭೂಶಣ್ ಆರ್. ಗವಾಯಿ ಹಾಗೂ ನ್ಯಾಯಮೂರ್ತಿಗಳಾದ ಕೆ. ವಿನೋದ್ ಚಂದ್ರನ್ ಮತ್ತು ಎನ್.ವಿ.ಅಂಜಾರಿಯ ಅವರನ್ನೊಳಗೊಂಡ ನ್ಯಾಯಪೀಠವೊಂದು ಹೇಳಿತು.
‘‘ಈ ಹಂತದಲ್ಲಿ, ಕೇಂದ್ರ ಜಲ ಆಯೋಗದ ಆದೇಶದಂತೆ, ಕರಡು ಪೂರ್ವ-ಸಾಧ್ಯತಾ ವರದಿಯನ್ನು ಮಾತ್ರ ಸಿದ್ಧಪಡಿಸಲಾಗುತ್ತಿದೆ, ವರದಿಯ ತಯಾರಿಕೆಯಲ್ಲಿ, ತಮಿಳುನಾಡು ರಾಜ್ಯ ಹಾಗೂ ಸಿಡಬ್ಲ್ಯುಆರ್ಸಿ ಮತ್ತು ಸಿಡಬ್ಲ್ಯುಎಮ್ಎಯ ಪರಿಣತರ ಆಕ್ಷೇಪಗಳನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ’’ ಎಂದು ನ್ಯಾಯಪೀಠ ಹೇಳಿತು. ಅದೂ ಅಲ್ಲದೆ, ಕರಡು ಪೂರ್ವ-ಸಾಧ್ಯತಾ ವರದಿಯನ್ನು ಪರಿಶೀಲನೆಗೆ ಎತ್ತಿಕೊಳ್ಳಲು ಸಿಡಬ್ಲ್ಯುಸಿಗೆ ಈ ಎರಡು ಪ್ರಾಧಿಕಾರಗಳ ಪೂರ್ವಾನುಮತಿ ಅಗತ್ಯವಾಗಿದೆ. ಪರಿಸ್ಥಿತಿ ಹೀಗಿರುವಾಗ, ತಮಿಳುನಾಡು ರಾಜ್ಯದ ಈ ಅರ್ಜಿ ಅಪಕ್ವ ಎಂಬುದಾಗಿ ನಮಗೆ ಅನಿಸುತ್ತದೆ’’ ಎಂದು ನ್ಯಾಯಾಲಯ ಹೇಳಿತು.
ತಾಂತ್ರಿಕ ಪರಿಣತಿ ಅಗತ್ಯವಾಗಿರುವ ವಿಷಯಗಳಲ್ಲಿ ಹಸ್ತಕ್ಷೇಪ ನಡೆಸದಿರುವ ತನ್ನ ನಿಲುವನ್ನು ಪುನರುಚ್ಚರಿಸಿದ ಸುಪ್ರೀಂ ಕೋರ್ಟ್, ತನ್ನ 2023 ಆಗಸ್ಟ್ 25ರ ಆದೇಶವನ್ನು ಸ್ಮರಿಸಿತು. ಆ ಆದೇಶದಲ್ಲಿ, ಕಾವೇರಿ ನೀರು ಬಿಡುಗಡೆ ವಿಷಯದಲ್ಲಿ ಮಧ್ಯಪ್ರವೇಶಿಸಲು ನ್ಯಾಯಾಲಯ ನಿರಾಕರಿಸಿತ್ತು ಹಾಗೂ ಸುರಿದ ಮಳೆ ಮತ್ತು ನೀರಿನ ಸಂಗ್ರಹವನ್ನು ಅಂದಾಜಿಸುವ ಕೆಲಸವನ್ನು ಸಿಡಬ್ಲ್ಯುಎಮ್ಎಗೆ ಬಿಟ್ಟಿತ್ತು.
‘‘2023 ಆಗಸ್ಟ್ 25ರಂದು ನಾವು ನೀಡಿರುವ ಆದೇಶವನ್ನು ನಾವು ಪುನರುಚ್ಚರಿಸುತ್ತೇವೆ. ಈ ನ್ಯಾಯಾಲಯಕ್ಕೆ ಈ ವಿಷಯದಲ್ಲಿ ಪರಿಣತಿಯಿಲ್ಲ. ಹಾಗಾಗಿ ಪರಿಣತರು ಮಾಡಬೇಕಾದ ಕೆಲಸವನ್ನು ನಾವು ಮಾಡಲು ಹೋಗುವುದಿಲ್ಲ’’ ಎಂದು ಸುಪ್ರೀಂ ಕೋರ್ಟ್ ಹೇಳಿತು.
‘‘ಈ ವಿಷಯವು ಪರಿಣತ ಸಂಸ್ಥೆಯ ಪರಿಶೀಲನೆಯಲ್ಲಿರುವಾಗ, ಈ ಅರ್ಜಿಯು ಅಪಕ್ವವಾಗಿದೆ. ಕೇಂದ್ರ ಸರಕಾರ ಮತ್ತು ಕೇಂದ್ರ ಜಲ ಆಯೋಗವು ಈ ವಿಷಯದಲ್ಲಿ ಪಕ್ಷಪಾತವಾಗಿ ವರ್ತಿಸುತ್ತದೆ ಎಂಬ ನಿಮ್ಮ ಹೆದರಿಕೆಗೆ ಕಾರಣವಿಲ್ಲ ಅನಿಸುತ್ತದೆ’’ ಎಂದು ನ್ಯಾಯಪೀಠವು ತಮಿಳುನಾಡು ಸರಕಾರದ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟ್ಗಿಯನ್ನು ಉದ್ದೇಶಿಸಿ ಹೇಳಿದೆ.
ಕರಡು ಪೂರ್ವ-ಸಾಧ್ಯತಾ ವರದಿಗೆ ಕೇಂದ್ರ ಜಲ ಆಯೋಗ ಅನುಮೋದನೆ ನೀಡಿದರೆ ತಮಿಳುನಾಡು ಸೂಕ್ತ ಕಾನೂನು ಪರಿಹಾರಗಳನ್ನು ಕೋರಲು ಸ್ವತಂತ್ರವಾಗಿದೆ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.







