ಸುಪ್ರೀಂ ಕೋರ್ಟ್ ನೂತನ ನ್ಯಾಯಮೂರ್ತಿಗಳಾಗಿ ಮೂವರು ನ್ಯಾಯಾಧೀಶರು ಪ್ರಮಾಣವಚನ ಸ್ವೀಕಾರ
ಪೂರ್ಣ ಬಲ ಮರಳಿ ಪಡೆದ ಸುಪ್ರೀಂ ಕೋರ್ಟ್

Photo credit: PTI
ಹೊಸದಿಲ್ಲಿ : ಸುಪ್ರೀಂ ಕೋರ್ಟ್ನ ನೂತನ ನ್ಯಾಯಮೂರ್ತಿಗಳಾಗಿ ಮೂವರು ನ್ಯಾಯಾಧೀಶರು ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು. ಇದರಿಂದಾಗಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಬಲ 34ಕ್ಕೆ ಏರಿಕೆಯಗಿದೆ. ಪೂರ್ಣ ಬಲ ಮರಳಿ ಬಂದಂತಾಗಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಎನ್.ವಿ. ಅಂಜಾರಿಯಾ, ವಿಜಯ್ ಬಿಷ್ಣೋಯ್ ಮತ್ತು ಎ.ಎಸ್. ಚಂಡೂರ್ಕರ್ ಪ್ರಮಾಣವಚನ ಸ್ವೀಕರಿಸಿದರು. ಇವರಿಗೆ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಪ್ರಮಾಣ ವಚನ ಬೋಧಿಸಿದರು.
ಪ್ರಮಾಣವಚನ ಸ್ವೀಕರಿಸಿದ ನಂತರ, ನ್ಯಾಯಮೂರ್ತಿಗಳಾದ ಅಂಜಾರಿಯಾ, ಬಿಷ್ಣೋಯ್ ಮತ್ತು ಚಂಡೂರ್ಕರ್ ಅವರನ್ನು ಮುಖ್ಯ ನ್ಯಾಯಮೂರ್ತಿ ಗವಾಯಿ ಅವರು ಸ್ವಾಗತಿಸಿದರು.
ಮೇ 26ರಂದು ನಡೆದ ಸಭೆಯಲ್ಲಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ನ್ಯಾಯಮೂರ್ತಿ ಅಂಜಾರಿಯಾ, ಗುವಾಹಟಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ನ್ಯಾಯಮೂರ್ತಿ ವಿಜಯ್ ಬಿಷ್ಣೋಯ್ ಮತ್ತು ಬಾಂಬೆ ಹೈಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ಚಂಡೂರ್ಕರ್ ಅವರನ್ನು ಸುಪ್ರೀಂ ಕೋರ್ಟ್ಗೆ ಶಿಫಾರಸು ಮಾಡಲಾಗಿತ್ತು. ಮೇ 29ರಂದು ಸರಕಾರ ಈ ಕುರಿತು ಅನುಮೋದನೆ ನೀಡಿತ್ತು.
ಮಾಜಿ ಸಿಜೆಐ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಹೃಷಿಕೇಶ್ ರಾಯ್ ಅವರ ನಿವೃತ್ತಿಯ ನಂತರ ಸುಪ್ರೀಂ ಕೋರ್ಟ್ನಲ್ಲಿ ಖಾಲಿ ಇರುವ ಮೂವರು ನ್ಯಾಯಾಧೀಶರ ಹುದ್ದೆಗಳಿಗೆ ಅವರ ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತು.







