E20 ವಿವಾದ | ಕರ್ನಾಟಕ ಸರಕಾರದ ಇ20 ಪರೀಕ್ಷಾ ವಿಧಾನದ ಕುರಿತು ಕೇಂದ್ರ ಸಚಿವ ಸುರೇಶ್ ಗೋಪಿ ಪ್ರಶ್ನೆ

ಸುರೇಶ್ ಗೋಪಿ | Photo Credit : PTI
ತಿರುವನಂತಪುರಂ: ಇ20 ಇಂಧನದ ಕುರಿತ ಕಳವಳವನ್ನು ತಳ್ಳಿ ಹಾಕಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವ ಸುರೇಶ್ ಗೋಪಿ, ಪೆಟ್ರೋಲ್ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಅಂಶವನ್ನು ಪತ್ತೆ ಹಚ್ಚಲು ಕರ್ನಾಟಕ ಸರಕಾರ ಬಳಸಿರುವ ಪರೀಕ್ಷಾ ವಿಧಾನಗಳನ್ನು ಸೋಮವಾರ ಪ್ರಶ್ನಿಸಿದ್ದಾರೆ.
ಕರ್ನಾಟಕ ಸರಕಾರ ಪರೀಕ್ಷೆ ನಡೆಸಿದ ಪೆಟ್ರೋಲ್ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಅಂಶ (ಶೇ. 27 ಮತ್ತು ಶೇ. 28ರಷ್ಟು) ಪತ್ತೆಯಾಗಿದೆ ಎಂಬ ವರದಿಗಳ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸುರೇಶ್ ಗೋಪಿ, ಈ ವರದಿಗಳು ‘‘ಅಂಗೀಕರಿಸಲು ಸಾಧ್ಯವಿಲ್ಲದ್ದು’’ ಎಂದು ಹೇಳಿದರು. ಅಲ್ಲದೆ, ಈ ಮಾದರಿಗಳನ್ನು ನೇರವಾಗಿ ಸಂಸ್ಕರಣಾಗಾರಗಳಿಂದ ಸಂಗ್ರಹಿಸಲಾಗಿದೆಯೇ ಎಂದು ಪ್ರಶ್ನಿಸಿದರು.
ಇಂಧನವು ಗ್ರಾಹಕರನ್ನು ತಲುಪುವ ಮೊದಲು ಸಾರಿಗೆ ಮತ್ತು ಚಿಲ್ಲರೆ ಮಾರಾಟ ಮಳಿಗೆಗಳ ಭೂಗತ ಟ್ಯಾಂಕ್ಗಳಲ್ಲಿ ಸಂಗ್ರಹಣೆ ಸೇರಿದಂತೆ ಹಲವು ಹಂತಗಳನ್ನು ಹಾದು ಹೋಗುತ್ತದೆ ಎಂದು ಅವರು ಹೇಳಿದರು.
‘‘ನಾವು ಇತರ ವ್ಯವಸ್ಥೆಗಳನ್ನು ಪರಿಶೀಲಿಸುವ ಸಾಧ್ಯತೆಯನ್ನು ತಳ್ಳಿ ಹಾಕುತ್ತಿಲ್ಲ. ಇಂಧನವನ್ನು ಸಾಗಿಸಲಾಗುತ್ತದೆ ಮತ್ತು ಚಿಲ್ಲರೆ ಮಾರಾಟ ಮಳಿಗೆಗಳ ಭೂಗತ ಟ್ಯಾಂಕ್ಗಳಲ್ಲಿ ಸಂಗ್ರಹಿಸಲಾಗುತ್ತದೆ. ನಾವು ಅಲ್ಲಿ ಕ್ಯಾಮೆರಾಗಳನ್ನು ಅಳವಡಿಸಿಲ್ಲ ಅಥವಾ ಆ ಸೌಲಭ್ಯಗಳನ್ನು ಮೊಹರು ಮಾಡಿಲ್ಲ’’ ಎಂದು ಅವರು ಹೇಳಿದರು.
ಕೇಂದ್ರ ಸರಕಾರದ ನಿಯಮಗಳು ಮತ್ತು ನೀತಿಗಳನ್ನು ಅನುಸರಿಸುವ ಜವಾಬ್ದಾರಿ ತೈಲ ಕಂಪೆನಿಗಳ ಮೇಲಿದೆ. ನಿಗದಿತ ಮಾನದಂಡಗಳ ಪಾಲನೆಯನ್ನು ಖಚಿತಪಡಿಸಿಕೊಳ್ಳಲು ಕಾಲ ಕಾಲಕ್ಕೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಸುರೇಶ್ ಗೋಪಿ ಹೇಳಿದರು.
ಈ ವಿಷಯವನ್ನು ರಾಜಕೀಯಗೊಳಿಸಬಾರದು ಎಂದು ಹೇಳಿದ ಅವರು, ಪರಿಸರ ಬದ್ಧತೆಗಳನ್ನು ಈಡೇರಿಸಲು ಮತ್ತು ಸ್ವಚ್ಛ ಇಂಧನ ಮೂಲಗಳತ್ತ ಸಾಗಲು ದೇಶಕ್ಕೆ ಅಂತಾರಾಷ್ಟ್ರೀಯ ಜವಾಬ್ದಾರಿಯಿದೆ ಎಂದು ಹೇಳಿದರು.
ಇದನ್ನು ಈಗ ಏಕೆ ಮುನ್ನೆಲೆಗೆ ತರಲಾಗುತ್ತಿದೆ ? ನಾವು ಈಗಾಗಲೇ ಹೈಡ್ರೋಜನ್ ಚಾಲಿತ ರೈಲನ್ನು ಚಲಾಯಿಸಲು ಪ್ರಾರಂಭಿಸಿದ್ದೇವೆ. ಪಳೆಯುಳಿಕೆ ಇಂಧನಗಳಿಂದ ಹೈಡ್ರೋಜನ್ ಸೇರಿದಂತೆ ಹೊಸ ಇಂಧನ ಮೂಲಗಳಿಗೆ ವರ್ಗಾವಣೆಯಾಗುವುದು ವಿಜ್ಞಾನದ ಅಗತ್ಯವಾಗಿದೆ ಎಂದು ಹೇಳಿದರು.
ವಾತಾವರಣದ ಮೇಲೆ ಪಳೆಯುಳಿಕೆ ಇಂಧನ ದಹನದ ಪ್ರಭಾವವನ್ನು ಕಡಿಮೆ ಮಾಡಲು ಮತ್ತು ಪರಿಸರ ಸುಸ್ಥಿರತೆಯನ್ನು ಸುಧಾರಿಸಲು ಎಥನಾಲ್ ಅನ್ನು ಬಳಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.






