ಅನುಮಾನಾಸ್ಪದ ಬೋಟ್ ಪತ್ತೆ: ಮಹಾರಾಷ್ಟ್ರ ಕರಾವಳಿಯಲ್ಲಿ ಬಿಗಿ ಬಂದೋಬಸ್ತ್

Photo | PTI
ಮುಂಬೈ: ಸೋಮವಾರ ರೇವದಂಡ ಕರಾವಳಿಯ ಬಳಿ ಅನುಮಾನಾಸ್ಪದ ಬೋಟ್ ಕಂಡುಬಂದ ನಂತರ ಮಹಾರಾಷ್ಟ್ರದ ರಾಯಗಢ ಕರಾವಳಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಪೊಲೀಸ್ ತುಕಡಿಯನ್ನು ಈ ಪ್ರದೇಶದಲ್ಲಿ ನಿಯೋಜಿಸಲಾಗಿದೆ. ಮುನ್ನೆಚ್ಚರಿಕೆಯಾಗಿ ಜಿಲ್ಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರವಿವಾರ, ರಾತ್ರಿ ಭಾರತೀಯ ನೌಕಾಪಡೆಯ ರಾಡಾರ್ನಿಂದ ಪತ್ತೆಯಾದ ದೋಣಿ ಪಾಕಿಸ್ತಾನದ ಮೀನುಗಾರಿಕಾ ಹಡಗು ಆಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದೋಣಿಯು ರೇವದಂಡದ ಕೊರ್ಲೈ ಕರಾವಳಿಯಿಂದ ಎರಡು ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಕಂಡುಬಂದಿತ್ತು.
ರಾಯಗಢ ಪೊಲೀಸ್, ತುರ್ತು ಪ್ರತಿಕ್ರಿಯೆ ತಂಡ (QRT), ಬಾಂಬ್ ಪತ್ತೆ ಮತ್ತು ವಿಲೇವಾರಿ ದಳ (BDDS), ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆಯ ಸಿಬ್ಬಂದಿ ದೋಣಿಗಾಗಿ ಹುಡುಕಾಟವನ್ನು ಪ್ರಾರಂಭಿಸಿದ್ದಾರೆ. ಬೋಟ್ ಅನ್ನು ತಲುಪಲು ಪ್ರಯತ್ನಿಸಿದ್ದರಾದರೂ, ಹವಾಮಾನ ವೈಪರೀತ್ಯದಿಂದಾಗಿ ಹಿಂತಿರುಗಬೇಕಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರೀ ಮಳೆ ಮತ್ತು ಬಲವಾದ ಗಾಳಿಯಿಂದಾಗಿ ಬೋಟ್ ಅನ್ನು ಪತ್ತೆಹಚ್ಚುವ ಪ್ರಯತ್ನಗಳಿಗೆ ಅಡ್ಡಿಯಾಗಿದೆ ಎಂದು ವರದಿಯಾಗಿದೆ.





