ಸುವೇಂದು ಆಪ್ತ ಸಹಾಯಕನ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಉತ್ತರಪ್ರದೇಶದಲ್ಲಿ ಬಂಧನ

Photo: PTI
ಹೊಸದಿಲ್ಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಾಥ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ರಾಜ್ ಕುಮಾರ್ ಸಿಂಗ್ ಎಂಬಾತನನ್ನು ಸಿಬಿಐ ಅಧಿಕಾರಿಗಳು ಸೋಮವಾರ ಉತ್ತರ ಪ್ರದೇಶದ ಮುಝಫರ್ ನಗರದಲ್ಲಿ ಬಂಧಿಸಿದ್ದಾರೆ.
ವಿಶೇಷ ತನಿಖಾ ತಂಡ ಈ ಪ್ರಕರಣದ ತನಿಖೆಯನ್ನು ಹಲವು ರಾಜ್ಯಗಳಿಗೆ ವಿಸ್ತರಿಸುವ ಮುನ್ನ ಮೇ 11ರಂದು ಮೂವರನ್ನು ಈ ಸಂಬಂಧ ಬಂಧಿಸಿತ್ತು. ಮಿಲಿಟರಿ ಶೈಲಿಯ ನಿಖರತೆಯೊಂದಿಗೆ ಹತ್ಯೆ ಮಾಡಲು ಹೊರ ರಾಜ್ಯದಿಂದ ಶಾರ್ಪ್ಶೂಟರ್ಗಳನ್ನು ಕರೆ ತಂದಿರಬೇಕು ಎಂದು ಎಸ್ಐಟಿ ಶಂಕಿಸಿತ್ತು.
ಚಂದ್ರನಾಥ್ ರಾಥ್ ಅವರನ್ನು ಉತ್ತರ 24 ಪರಗಣ ಜಿಲ್ಲೆಯ ಮಾಧ್ಯಮ ಗ್ರಾಮದ ದೊಹಾರಿಯಾ ಕ್ರಾಸ್ ನಲ್ಲಿ ಮೇ 6ರಂದು ರಾತ್ರಿ ಅವರ ನಿವಾಸದಿಂದ ಕೇವಲ 170 ಮೀಟರ್ ದೂರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಅವರ ಚಾಲಕ ಬುದ್ಧಸಾಹೇಬ್ ಬೇರಾ ಕೂಡಾ ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಂತಕರು ಕೇವಲ 50 ಸೆಕೆಂಡ್ ನಲ್ಲಿ ಈ ಕಾರ್ಯಾಚರಣೆ ಪೂರ್ಣಗೊಳಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಮೋಟರ್ ಬೈಕ್ಗಳನ್ನು ಎಸ್ಐಟಿ ವಶಪಡಿಸಿಕೊಂಡಿತ್ತು. ಆದರೆ ವಾಹನಗಳನ್ನು ಕದ್ದು ನಕಲಿ ನಂಬರ್ ಪ್ಲೇಟ್ಗಳನ್ನು ಅಳವಡಿಸಲಾಗಿತ್ತು ಎನ್ನುವುದು ತನಿಖೆಯಿಂದ ತಿಳಿದುಬಂದಿದೆ.
ನಿವೇದಿತ ಸೇತು ಟೋಲ್ ಪ್ಲಾಝಾದಲ್ಲಿ ಮೇ 6ರಂದು ಮಾಡಿದ ಯುಪಿಐ ಪಾವತಿಯು ತನಿಖಾಧಿಕಾರಿಗಳಿಗೆ ಮಹತ್ವದ ಸುಳಿವು ನೀಡಿತ್ತು. ಡಿಜಿಟಲ್ ವಿಚಾರಣೆ ನಡೆಸಿದಾಗ ಜಾರ್ಖಂಡ್ ಸಂಪರ್ಕ ಇದ್ದು, ಸಿಲ್ವರ್ ಬಣ್ಣದ ಹ್ಯಾಚ್ಬ್ಯಾಕ್ ಅನ್ನು ಅಲ್ಲಿಂದ ಪಡೆಯಲಾಗಿದೆ ಎನ್ನುವ ಅಂಶ ತಿಳಿದುಬಂದಿತ್ತು.






