ಪಶ್ಚಿಮ ಬಂಗಾಳ ಹಿಂಸಾಚಾರ | ಜನರ ಕೈಗೆ ಶಸ್ತ್ರಾಸ್ತ್ರಗಳನ್ನು ನೀಡಬೇಕು ಎಂದ ಬಿಜೆಪಿ ನಾಯಕ ಸುವೇಂದು ಅಧಿಕಾರಿ

ಸುವೇಂದು ಅಧಿಕಾರಿ (Photo: PTI)
ಲಕ್ನೋ: ಜನರ ಕೈಗೆ ಶಸ್ತ್ರಾಸ್ತ್ರಗಳನ್ನು ನೀಡಬೇಕು ಎಂದು ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಹೇಳಿಕೆಯನ್ನು ನೀಡಿ ವಿವಾದವನ್ನು ಸೃಷ್ಟಿಸಿದ್ದಾರೆ.
ಮುರ್ಷಿದಾಬಾದ್ನಲ್ಲಿ ವಕ್ಫ್ ವಿರುದ್ಧದ ಪ್ರತಿಭಟನೆಯ ವೇಳೆ ಹಿಂಸಾಚಾರ ಖಂಡಿಸಿ 'ಬಂಗಾಳಿ ಹಿಂದೂಗಳನ್ನು ಉಳಿಸಿ' ಎಂದು ಬಿಜೆಪಿ ಮೆರವಣಿಗೆಯನ್ನು ಆಯೋಜಿಸಿತ್ತು. ಈ ವೇಳೆ ಮಾತನಾಡಿದ ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದಲ್ಲಿ ಗ್ರಾಮ ರಕ್ಷಣಾ ಸಮಿತಿ ರಚಿಸಬೇಕು ಮತ್ತು ಸ್ಥಳೀಯರಿಗೆ ಅವರ ಸುರಕ್ಷತೆಗಾಗಿ ಶಸ್ತ್ರಾಸ್ತ್ರಗಳನ್ನು ಒದಗಿಸಬೇಕು ಎಂದು ಹೇಳಿದರು.
ಮಮತಾ ಬ್ಯಾನರ್ಜಿ ಮತ್ತು ಅವರ ಪೊಲೀಸರು ಬಂಗಾಳದಲ್ಲಿ ಪರಿಸ್ಥಿತಿಯನ್ನು ನಿಭಾಯಿಸುವವರೆಗೆ ಹಿಂದೂಗಳು ತಮ್ಮ ಮನೆಗಳನ್ನು ಬಿಟ್ಟು ಪಲಾಯನ ಮಾಡಬೇಕಾಗುತ್ತದೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮತ್ತು ಇತರ ಸಾಂವಿಧಾನಿಕ ಸಂಸ್ಥೆಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸುವೇಂದು ಅಧಿಕಾರಿ ಆಗ್ರಹಿಸಿದರು.
ತೃಣಮೂಲ ಕಾಂಗ್ರೆಸ್ ಸರಕಾರ ಮುರ್ಷಿದಾಬಾದ್ ಮತ್ತು ಗಲಭೆ ಪೀಡಿತ ಇತರ ಪ್ರದೇಶಗಳಿಗೆ ಭೇಟಿ ನೀಡದಂತೆ ನಮ್ಮನ್ನು ತಡೆಯುತ್ತಿದೆ. ಉಳಿದವರೆಲ್ಲರಿಗೂ ಮುರ್ಷಿದಾಬಾದ್ಗೆ ತೆರಳಲು ಅವಕಾಶ ನೀಡಲಾಗುತ್ತಿದೆ. ನನಗೆ ವಾಸ್ತವ ತಿಳಿದಿದೆ. ಸರಕಾರದ ಈ ನಡೆಯನ್ನು ನಾನು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದೇನೆ ಎಂದು ಸುವೇಂದು ಅಧಿಕಾರಿ ಹೇಳಿದರು.







