CJP ಪ್ರತಿಭಟನೆಯ ವೇಳೆ ಹಲ್ಲೆ ನಡೆಸಿದ್ದೇನೆಂದು ಹೇಳಿಕೊಂಡ ಗೂಂಡಾ ಸ್ವತಂತ್ರ ಭಾರದ್ವಾಜ್ ಪೊಲೀಸ್ ವಶಕ್ಕೆ
ಪಾಡ್ ಕಾಸ್ಟ್ ನಲ್ಲಿ ‘ತಲೆಬುರುಡೆ ಒಡೆದಿದ್ದೇನೆ’ ಎಂದಿದ್ದ ಸ್ವಯಂಘೋಷಿತ ಗೋರಕ್ಷಕನ ವೀಡಿಯೋ ವೈರಲ್

ಸ್ವತಂತ್ರ ಭಾರದ್ವಾಜ್ | Photo Credit : PTI
ಹೊಸದಿಲ್ಲಿ: ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯ ವೇಳೆ ವಿದ್ಯಾರ್ಥಿ ನಿಶು ಆಝಾದ್ ಅವರ ತಂದೆ ಸಂಜಯ್ ಕುಮಾರ್ ಮೇಲೆ ಹಲ್ಲೆ ನಡೆಸಿದ ಆರೋಪದ ಪ್ರಕರಣದಲ್ಲಿ ಸ್ವಯಂಘೋಷಿತ ಗೋರಕ್ಷಕ ಸ್ವತಂತ್ರ ಭಾರದ್ವಾಜ್ ನನ್ನು ಶುಕ್ರವಾರ ಉತ್ತರ ಪ್ರದೇಶದ ಬುಲಂದ್ಶಹರ್ ನಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.
ಭಾರದ್ವಾಜ್ ನನ್ನು ವಶಕ್ಕೆ ಪಡೆಯಲು ದಿಲ್ಲಿ ಪೊಲೀಸರು ತಂಡಗಳನ್ನು ಉತ್ತರ ಪ್ರದೇಶಕ್ಕೆ ಕಳುಹಿಸಿದ್ದರು. ಪೊಲೀಸರು ಬುಲಂದ್ ಶಹರ್ ತಲುಪುವ ವೇಳೆಗೆ ಭಾರದ್ವಾಜ್ ಅಲ್ಲಿಂದ ಪರಾರಿಯಾಗಿದ್ದ ಎನ್ನಲಾಗಿದೆ.
ನೈತ್ಲಾ ಗ್ರಾಮದಿಂದ ಬುಲೆಟ್ ಮೋಟಾರ್ ಸೈಕಲ್ ನಲ್ಲಿ ಖುರ್ಜಾ ಕಡೆಗೆ ತೆರಳಿದ್ದ ಭಾರದ್ವಾಜ್, ಗುರುತು ಮರೆಮಾಚಲು ಹೆಲ್ಮೆಟ್ ಧರಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆತನನ್ನು ಪತ್ತೆಹಚ್ಚಲು ಹಲವು ತಂಡಗಳನ್ನು ಮಫ್ತಿಯಲ್ಲಿ ನಿಯೋಜಿಸಲಾಗಿತ್ತು ಎಂದು ತಿಳಿದು ಬಂದಿದೆ.
ಕೊನೆಗೆ ಬುಲಂದ್ಶಹರ್ನ ಧಮ್ರಾ ನಾರಾ ಗ್ರಾಮದ ಬಳಿ ಭಾರದ್ವಾಜ್ ನನ್ನು ಶುಕ್ರವಾರ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣವೇನು?
ಸಂಜಯ್ ಕುಮಾರ್ ಅವರು ಜಂತರ್ ಮಂತರ್ ನಲ್ಲಿ ನಡೆದ ಕಾಕ್ರೋಚ್ ಜನತಾ ಪಾರ್ಟಿ(CJP)ಯ ಪ್ರತಿಭಟನೆಯನ್ನು ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದರು. ಈ ವೇಳೆ ಚಿತ್ರೀಕರಣದ ವಿಚಾರವಾಗಿ ವಾಗ್ವಾದ ನಡೆದಿದೆ. ಬಳಿಕ ಇಬ್ಬರು ಅಥವಾ ಮೂವರು ವ್ಯಕ್ತಿಗಳು ಸೇರಿಕೊಂಡು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಎಫ್ಐಆರ್ ನಲ್ಲಿ ಆರೋಪಿಸಲಾಗಿದೆ.
ಸಂಜಯ್ ಕುಮಾರ್ ಅವರ ತಲೆಗೆ ಹಲ್ಲೆ ಮಾಡಲಾಗಿದೆ. ಕಬ್ಬಿಣದ ಬಳೆಯನ್ನು ಹೋಲುವ ಗಟ್ಟಿಯಾದ ವಸ್ತುವಿನಿಂದಲೂ ಹೊಡೆದಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಬಳಿಕ ಅವರನ್ನು ರಾಮ್ ಮನೋಹರ್ ಲೋಹಿಯಾ (RML) ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿ ಅವರ ತಲೆಯ ಮೇಲೆ ಎರಡು ಸೀಳಿದ ಗಾಯಗಳು ಪತ್ತೆಯಾಗಿದ್ದವು.
ಈ ಸಂಬಂಧ ದಿಲ್ಲಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 115(2), 126(2) ಮತ್ತು 3(5) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣದಲ್ಲಿ ಭಾರದ್ವಾಜ್ ಮತ್ತು ಸೂರಜ್ ಕುಮಾರ್ ಎಂಬ ಮತ್ತೊಬ್ಬ ಆರೋಪಿಯನ್ನು ಸ್ಥಳದಲ್ಲೇ ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಬಳಿಕ ನೋಟಿಸ್ ನೀಡಲಾಗಿತ್ತು. ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸುವುದಾಗಿ ಪೊಲೀಸರು ತಿಳಿಸಿದ್ದರು. ಸಂಜಯ್ ಕುಮಾರ್ ಅವರ ತಲೆಗೆ ಸರಳ ಸ್ವರೂಪದ ಗಾಯವಾಗಿದೆ ಎಂದು ಪೊಲೀಸರು ಹೇಳಿದ್ದರು. ಅವರ ತಲೆಬುರುಡೆಯಲ್ಲಿ ಮುರಿದ ಗಾಯಗಳಿವೆ ಎಂಬ ಹೇಳಿಕೆಗಳನ್ನೂ ಪೊಲೀಸರು ತಳ್ಳಿಹಾಕಿದ್ದರು.
►ಪಾಡ್ ಕಾಸ್ಟ್ನಿಂದ ಮುನ್ನೆಲೆಗೆ ಬಂದ ವಿವಾದ
ಇತ್ತೀಚೆಗೆ ಭಾರದ್ವಾಜ್ ಭಾಗವಹಿಸಿದ್ದ ಪಾಡ್ ಕಾಸ್ಟ್ ನ ವೀಡಿಯೋ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಅದರಲ್ಲಿ ಸಂಜಯ್ ಕುಮಾರ್ ಅವರ ‘ತಲೆಬುರುಡೆಯನ್ನು ಒಡೆದಿದ್ದೇನೆ’ ಎಂದು ಭಾರದ್ವಾಜ್ ಹೇಳಿಕೊಂಡಿರುವುದು ಕಂಡುಬಂದಿತ್ತು. ಹಲ್ಲೆ ಪ್ರಕರಣದ ಹೊರತಾಗಿಯೂ ತಾನು ಜೈಲಿಗೆ ಹೋಗಿಲ್ಲ ಎಂಬುದನ್ನೂ ಆತ ಹೇಳಿಕೊಂಡಿದ್ದನು.
ಬಳಿಕ ಭಾರದ್ವಾಜ್ ಆತ್ಮರಕ್ಷಣೆಗಾಗಿ ಸಂಜಯ್ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾಗಿ ಹೇಳಿದ್ದನು. ತನ್ನ ಹೇಳಿಕೆಯನ್ನು ಸಮರ್ಥಿಸುವ ವೀಡಿಯೋ ಸಾಕ್ಷ್ಯಗಳು ತನ್ನ ಬಳಿ ಇವೆ ಎಂದೂ ತಿಳಿಸಿದ್ದನು.
ಈ ವೀಡಿಯೋ ವೈರಲ್ ಆದ ಬಳಿಕ ಪ್ರಕರಣ ಮತ್ತೆ ಚರ್ಚೆಗೆ ಬಂದಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರದ್ವಾಜ್ ಇನ್ನೂ ಜೈಲಿನಲ್ಲಿ ಏಕೆ ಇಲ್ಲ ಎಂದು ಪ್ರಶ್ನಿಸಿದ್ದರು. ಆತನಿಗೆ ರಾಜಕೀಯ ರಕ್ಷಣೆ ನೀಡಲಾಗುತ್ತಿದೆ ಎಂದೂ ಆರೋಪಿಸಿದ್ದರು.
►72 ಗಂಟೆಯೊಳಗೆ ಬಂಧಿಸುವುದಾಗಿ ಭರವಸೆ ನೀಡಿದ್ದ ಪೊಲೀಸರು
ಈ ಬೆಳವಣಿಗೆಗಳ ಬಳಿಕ ಶುಕ್ರವಾರ CJP ಸಹ–ಸಂಚಾಲಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರು ಸಂಸದರಾದ ಚಂದ್ರಶೇಖರ್ ಆಝಾದ್ ಮತ್ತು ಪಪ್ಪು ಯಾದವ್ ಅವರೊಂದಿಗೆ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆರಳಿದರು.
ಭಾರದ್ವಾಜ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರನ್ನು ಒತ್ತಾಯಿಸಿದರು. ಪ್ರಕರಣಕ್ಕೆ ಕೊಲೆ ಯತ್ನದ ನಿಬಂಧನೆಗಳನ್ನು ಸೇರಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ನಿಬಂಧನೆಗಳನ್ನು ಅನ್ವಯಿಸಬೇಕು. ಕ್ರಿಮಿನಲ್ ಬೆದರಿಕೆಯ ಆರೋಪಗಳನ್ನೂ ಸೇರಿಸಬೇಕು ಎಂದು ಅವರು ಆಗ್ರಹಿಸಿದರು.
ಹೆಚ್ಚುವರಿ ನಿಬಂಧನೆಗಳನ್ನು ಪರಿಗಣಿಸುವುದಾಗಿ ಪೊಲೀಸರು ತಿಳಿಸಿದರು. ಭಾರದ್ವಾಜ್ ನನ್ನು 72 ಗಂಟೆಯೊಳಗೆ ಬಂಧಿಸುವುದಾಗಿ ನಿಯೋಗಕ್ಕೆ ಭರವಸೆ ನೀಡಿದರು.
►ನಿಶುಗೆ ಬೆದರಿಕೆ
ನಿಶು ಆಝಾದ್ ಅವರನ್ನು ಗುರಿಯಾಗಿಸಿಕೊಂಡು ಆನ್ ಲೈನ್ ನಲ್ಲಿ ನಿಂದನೆ, ಬೆದರಿಕೆಗಳು ಮತ್ತು ಆಕ್ಷೇಪಾರ್ಹ ಚಿತ್ರಗಳನ್ನು ಹಂಚಿಕೊಂಡಿರುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ನಿಯೋಗ ಒತ್ತಾಯಿಸಿತು. ಈ ಸಂಬಂಧ ಪ್ರತ್ಯೇಕ FIR ದಾಖಲಿಸುವುದಾಗಿ ಪೊಲೀಸರು ಭರವಸೆ ನೀಡಿದರು.
ಘಟನೆಯ ಬಳಿಕ ತನಗೆ ಮೌಖಿಕ ನಿಂದನೆ ಮತ್ತು ಅತ್ಯಾಚಾರದ ಬೆದರಿಕೆಗಳು ಬಂದಿವೆ ಎಂದು ನಿಶು ಹೇಳಿದ್ದಾರೆ. ಈ ಕಿರುಕುಳದಿಂದಾಗಿ ಅಪ್ರಾಪ್ತೆಯಾಗಿರುವ ನಿಶುಗೆ ಶಾಲೆಗೆ ತೆರಳಲು ತೊಂದರೆಯಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ.
►ರಾಜಕೀಯ ಸಂಪರ್ಕದ ಆರೋಪ
ತನಗಿರುವ ರಾಜಕೀಯ ಸಂಪರ್ಕಗಳಿಂದಾಗಿ ಬಂಧನದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು ಎಂದು ಭಾರದ್ವಾಜ್ ಪಾಡ್ ಕಾಸ್ಟ್ ನಲ್ಲಿ ಹೇಳಿಕೊಂಡಿದ್ದ ಎಂದು CJP ಆರೋಪಿಸಿದೆ. ಈ ಸಂದರ್ಭದಲ್ಲಿ ದಿಲ್ಲಿ ಸಚಿವ ಕಪಿಲ್ ಮಿಶ್ರಾ ಮತ್ತು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರ ಹೆಸರುಗಳನ್ನು ಭಾರದ್ವಾಜ್ ಉಲ್ಲೇಖಿಸಿದ್ದಾನೆ ಎಂದು CJP ಹೇಳಿದೆ.
ಭಾರದ್ವಾಜ್ ಅವರ ಈ ಹೇಳಿಕೆ ಕುರಿತು ಬಿಜೆಪಿ ನಾಯಕರು ಸ್ಪಷ್ಟೀಕರಣ ನೀಡಬೇಕು ಎಂದು CJP ಒತ್ತಾಯಿಸಿದೆ.






