Lakshadweep | ಗಂಭೀರವಾಗಿ ಅಸ್ವಸ್ಥರಾಗಿದ್ದ ಇಬ್ಬರು ರೋಗಿಗಳನ್ನು ಏರ್ಲಿಫ್ಟ್ ಮಾಡಿ ಜೀವ ಉಳಿಸಿದ ಇಂಡಿಯನ್ ಕೋಸ್ಟ್ ಗಾರ್ಡ್

Photo | Indian Coast Guard handout
ಕೊಚ್ಚಿ, ಜೂ.27: ಲಕ್ಷದ್ವೀಪದ ಅಗಟ್ಟಿ ದ್ವೀಪದಲ್ಲಿ ಗಂಭೀರವಾಗಿ ಅಸ್ವಸ್ಥರಾಗಿದ್ದ ಇಬ್ಬರು ರೋಗಿಗಳನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ (ICG) ಪ್ರತಿಕೂಲ ಹವಾಮಾನ ಪರಿಸ್ಥಿತಿಯ ನಡುವೆಯೂ ವಿಶೇಷ ಏರ್ಲಿಫ್ಟ್ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಕೊಚ್ಚಿಗೆ ಕರೆದೊಯ್ದಿದೆ.
ಕೋಸ್ಟ್ ಗಾರ್ಡ್ ಜಿಲ್ಲಾ ಪ್ರಧಾನ ಕಚೇರಿ, ಕವರತ್ತಿ ಹಾಗೂ ಕೊಚ್ಚಿಯ ಕೋಸ್ಟ್ ಗಾರ್ಡ್ ಏರ್ ಎನ್ಕ್ಲೇವ್, ಲಕ್ಷದ್ವೀಪ ಆಡಳಿತದ ಸಹಯೋಗದೊಂದಿಗೆ ಶನಿವಾರ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿವೆ. ಕಾರ್ಯಾಚರಣೆಯಡಿ 60 ಮತ್ತು 66 ವರ್ಷ ವಯಸ್ಸಿನ ಇಬ್ಬರು ಗಂಭೀರ ರೋಗಿಗಳನ್ನು ಉನ್ನತ ವೈದ್ಯಕೀಯ ಚಿಕಿತ್ಸೆಗೆ ಸ್ಥಳಾಂತರಿಸಲಾಗಿದೆ.
ಜೂನ್ 27ರಂದು ಲಕ್ಷದ್ವೀಪ ಆಡಳಿತವು ಕವರತ್ತಿಯ ಕೋಸ್ಟ್ ಗಾರ್ಡ್ ಜಿಲ್ಲಾ ಪ್ರಧಾನ ಕಚೇರಿಗೆ ತುರ್ತು ಮನವಿ ಸಲ್ಲಿಸಿತ್ತು. 60 ವರ್ಷದ ರೋಗಿಗೆ ತೀವ್ರ ರಕ್ತಸ್ರಾವದಿಂದ ಪಾರ್ಶ್ವವಾಯು (ಹೆಮರೇಜಿಕ್ ಸ್ಟ್ರೋಕ್) ಉಂಟಾಗಿರುವುದು ದೃಢಪಟ್ಟಿದ್ದರೆ, 66 ವರ್ಷದ ರೋಗಿಗೆ ರಕ್ತದೊತ್ತಡ ಕುಸಿತದೊಂದಿಗೆ ತೀವ್ರ ಹೃದಯಾಘಾತ ಉಂಟಾಗಿರುವುದು ಪತ್ತೆಯಾಗಿತ್ತು. ಇಬ್ಬರಿಗೂ ತಕ್ಷಣದ ವೈದ್ಯಕೀಯ ಚಿಕಿತ್ಸೆ ಅಗತ್ಯವಿತ್ತು.
ರೋಗಿಗಳ ಜೀವಕ್ಕೆ ಅಪಾಯವಿರುವುದನ್ನು ಮನಗಂಡ ಭಾರತೀಯ ಕರಾವಳಿ ರಕ್ಷಣಾ ಪಡೆ ತಕ್ಷಣ ಕಾರ್ಯಪ್ರವೃತ್ತವಾಯಿತು. ಕೊಚ್ಚಿಯ ಕೋಸ್ಟ್ ಗಾರ್ಡ್ ಏರ್ ಎನ್ಕ್ಲೇವ್ನಿಂದ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದ್ದ ಡೋರ್ನಿಯರ್ ವಿಮಾನವನ್ನು ಕಡಿಮೆ ಅವಧಿಯ ಸೂಚನೆಯಲ್ಲೇ ಕಾರ್ಯಾಚರಣೆಗೆ ನಿಯೋಜಿಸಲಾಯಿತು. ಪ್ರದೇಶದಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿ ಇದ್ದರೂ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
ಕೋಸ್ಟ್ ಗಾರ್ಡ್ ಜಿಲ್ಲಾ ಪ್ರಧಾನ ಕಚೇರಿ, ಕವರತ್ತಿ ಮತ್ತು ಲಕ್ಷದ್ವೀಪ ಆಡಳಿತದ ಸಮನ್ವಯದೊಂದಿಗೆ ಜೀವ ರಕ್ಷಕ ಉಪಕರಣಗಳು ಹಾಗೂ ವೈದ್ಯಕೀಯ ಸಿಬ್ಬಂದಿಯ ನೆರವಿನಿಂದ ಇಬ್ಬರು ರೋಗಿಗಳನ್ನು ಸುರಕ್ಷಿತವಾಗಿ ವಿಮಾನದಲ್ಲಿ ಸಾಗಿಸಲಾಯಿತು. ಬಳಿಕ ಅವರನ್ನು ಕೊಚ್ಚಿಗೆ ಕರೆತಂದು, ಹೆಚ್ಚಿನ ಚಿಕಿತ್ಸೆಗೆ ಕ್ರಮವಾಗಿ ಮೆಡಿಕಲ್ ಟ್ರಸ್ಟ್ ಆಸ್ಪತ್ರೆಗೆ ಮತ್ತು ಐಎನ್ಎಚ್ಎಸ್ ಸಂಜೀವಿನಿಗೆ ದಾಖಲಿಸಲಾಯಿತು.
ಲಕ್ಷದ್ವೀಪ ಆಡಳಿತದ ಸಹಯೋಗದೊಂದಿಗೆ ಭಾರತೀಯ ಕರಾವಳಿ ರಕ್ಷಣಾ ಪಡೆ ಈ ವರ್ಷ ಕೈಗೊಂಡ ನಾಲ್ಕನೇ ವೈದ್ಯಕೀಯ ಏರ್ಲಿಫ್ಟ್ ಕಾರ್ಯಾಚರಣೆ ಇದಾಗಿದ್ದು, ಇದರೊಂದಿಗೆ ಒಟ್ಟು ಐವರು ದ್ವೀಪವಾಸಿಗಳಿಗೆ ಜೀವ ರಕ್ಷಕ ನೆರವು ಒದಗಿಸಲಾಗಿದೆ ಎಂದು ಇಂಡಿಯನ್ ಕೋಸ್ಟ್ ಗಾರ್ಡ್ ಪ್ರಕಟನೆ ತಿಳಿಸಿದೆ.
Photo | Indian Coast Guard handout
Photo | Indian Coast Guard handou






