ಮಧುರೈ ಬೀದಿಯಲ್ಲಿ ತಮಿಳು ನಟ ಮೋಹನ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
![ಮಧುರೈ ಬೀದಿಯಲ್ಲಿ ತಮಿಳು ನಟ ಮೋಹನ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ ಮಧುರೈ ಬೀದಿಯಲ್ಲಿ ತಮಿಳು ನಟ ಮೋಹನ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ](https://www.varthabharati.in/h-upload/2023/08/04/1177115-whatsapp-image-2023-08-04-at-115101-pm.webp)
Photo: indiatoday.in
ಮಧುರೈ: 1980 ಮತ್ತು 1990ರ ದಶಕದ ನಡುವಿನ ಚಲನಚಿತ್ರಗಳಲ್ಲಿ ತಮ್ಮ ಹಾಸ್ಯ, ಪೋಷಕ ನಟ ಪಾತ್ರಗಳಿಂದ ಖ್ಯಾತರಾಗಿದ್ದ ತಮಿಳು ನಟ ಮೋಹನ್ ಮೃತಪಟ್ಟಿದ್ದಾರೆ. ಮೋಹನ್ ಅವರ ಮೃತದೇಹವು ತಮಿಳುನಾಡಿನ ಮಧುರೈನಲ್ಲಿನ ತಿರುಪರಂಕುಂದ್ರಮ್ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು news18.com ವರದಿ ಮಾಡಿದೆ.
ವರದಿಗಳ ಪ್ರಕಾರ, 60 ವರ್ಷದ ನಟ ಮೋಹನ್ ಅವರು ತೀವ್ರ ಬಡತನಕ್ಕೆ ತುತ್ತಾಗಿದ್ದರು ಹಾಗೂ ಕೆಲಸ ಗಿಟ್ಟಿಸಲು ತೀವ್ರ ಒದ್ದಾಟ ಪಡುತ್ತಿದ್ದರು ಎಂದು ಹೇಳಲಾಗಿದೆ. ಅವರ ಪತ್ನಿಯು 10 ವರ್ಷಗಳ ಹಿಂದೆಯೇ ನಿಧನರಾಗಿದ್ದರು ಹಾಗೂ ಅಂದಿನಿಂದ ಅವರು ಭಿಕ್ಷೆ ಬೇಡಿ ಬದುಕುತ್ತಿದ್ದರು ಎಂದೂ ವರದಿಗಳಲ್ಲಿ ಹೇಳಲಾಗಿದೆ.
1989ರಲ್ಲಿ ಬಿಡುಗಡೆಯಾಗಿದ್ದ ಕಮಲ್ ಹಾಸನ್ ನಾಯಕತ್ವದ ‘ಅಪೂರ್ವ ಸಹೋದರ್ಗಳ್’ ಚಿತ್ರದಲ್ಲಿ ಮೋಹನ್ ಅವರು ಕಮಲ್ ಹಾಸನ್ ಅವರ ಆಪ್ತ ಗೆಳೆಯ ಅಪ್ಪು ಪಾತ್ರದಲ್ಲಿ ನಟಿಸಿದ್ದರು. ಇದಾದ ನಂತರ ಅವರು ‘ಆದಿಷ್ಯ ಮನಿದಿರ್ಗಳ್’ ಹಾಗೂ ಬಾಲಾ ನಿರ್ದೇಶನದ, ಆರ್ಯ ನಾಯಕತ್ವದ ‘ನಾನ್ ಕಡುವುಳ್’ ಚಿತ್ರ ಸೇರಿದಂತೆ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಇದಾದ ನಂತರ, ಅವರು ತಮಗೆ ನಟಿಸಲು ಯಾವುದೇ ಅವಕಾಶ ದೊರೆಯದೆ ಹೋಗಿದ್ದರಿಂದ, ತಮ್ಮ ತವರು ನಗರವನ್ನು ತೊರೆದು ಕೆಲವು ವರ್ಷಗಳ ಹಿಂದೆ ತಿರುಪರಂಗುಂಡ್ರಮ್ಗೆ ವಾಸ್ತವ್ಯ ಬದಲಿಸಿದ್ದರು. ಅವರು ಹಣದ ಕೊರತೆಯಿಂದ ಮುಖ್ಯ ರಥಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದರು ಎಂದು ಹೇಳಲಾಗಿದೆ. ಜುಲೈ 31ರಂದು ಅವರು ಮೃತಪಟ್ಟ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡಿರುವ ಸ್ಥಳೀಯರು, ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಟ ಮೋಹನ್ ಗುರುತು ಸಿಗದಷ್ಟೂ ಕೊಳಕಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಎಂದು ವರದಿಯಾಗಿದೆ.