Tamil Nadu | ಯುವಕರು, ಅನುಭವಿಗಳು, ವೃತ್ತಿಪರರಿಗೆ ವಿಜಯ್ ಸಂಪುಟದಲ್ಲಿ ಸ್ಥಾನ

Photo: PTI
ಚೆನ್ನೈ, ಮೇ 10: ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ಸಿ. ಜೋಸೆಫ್ ವಿಜಯ್ ಅವರು ರವಿವಾರ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರೊಂದಿಗೆ ಪಕ್ಷದ ಒಂಭತ್ತು ಶಾಸಕರೂ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಎನ್. ಆನಂದ್, ಅಧವ ಅರ್ಜುನ, ಡಾ. ಕೆ.ಜಿ. ಅರುಣರಾಜ್, ಕೆ.ಎ. ಸೆಂಗೊಟ್ಟೈಯನ್, ಪಿ. ವೆಂಕಟರಮಣನ್, ಆರ್. ನಿರ್ಮಲ ಕುಮಾರ್, ರಾಜಮೋಹನ, ಟಿ.ಕೆ. ಪ್ರಭು ಮತ್ತು ಎಸ್. ಕೀರ್ತನಾ ಅವರು ನೂತನ ಸಚಿವರಾಗಿದ್ದು, ಅವರಿಗೆ ಖಾತೆಗಳ ಹಂಚಿಕೆಯನ್ನು ನಂತರ ಪ್ರಕಟಿಸಲಾಗುವುದು.
ಸಂಪುಟದಲ್ಲಿನ ಸಚಿವರು ಹಿರಿಯರ ಅನುಭವ, ಯುವಶಕ್ತಿ, ನಿಷ್ಠಾವಂತ ತಂತ್ರಜ್ಞರು ಮತ್ತು ವೃತ್ತಿಪರರ ಮಿಶ್ರಣವಾಗಿದ್ದು, ಆಡಳಿತದ ನಿರಂತರತೆಯನ್ನು ಹೊಸ ಪರಿಕಲ್ಪನೆಗಳೊಂದಿಗೆ ಸಮತೋಲನಗೊಳಿಸುವ ಟಿವಿಕೆಯ ಉದ್ದೇಶವನ್ನು ಪ್ರತಿಬಿಂಬಿಸುತ್ತಿದ್ದಾರೆ.
ಸಚಿವರ ಪರಿಚಯ, ಅವರ ಹಿನ್ನೆಲೆ
►ಎನ್. ಆನಂದ್:
ಫೆ. 2, 2024ರಂದು ಟಿವಿಕೆ ಸ್ಥಾಪನೆಯಾದಾಗಿನಿಂದಲೂ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ಆನಂದ್, ವಿಜಯ್ ಅವರ ಅತ್ಯಂತ ನಂಬಿಕಸ್ತ ನಾಯಕರಲ್ಲೊಬ್ಬರಾಗಿದ್ದಾರೆ. ತ್ಯಾಗರಾಯನಗರ ಕ್ಷೇತ್ರದಿಂದ ಗೆದ್ದಿರುವ ಅವರು, ತಮ್ಮ ಆಡಳಿತಾತ್ಮಕ ಮತ್ತು ಸಾಂಸ್ಥಿಕ ಕೌಶಲ್ಯಗಳಿಂದ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರು ಹಿಂದೆ ಬಿಸ್ಸಿ ಕ್ಷೇತ್ರದಿಂದ ಪುದುಚೇರಿ ವಿಧಾನಸಭಾ ಶಾಸಕರಾಗಿದ್ದರು.
►ಅಧವ ಅರ್ಜುನ:
ಪಕ್ಷದ ಚುನಾವಣಾ ಪ್ರಚಾರ ನಿರ್ವಹಣೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಅರ್ಜುನ, ವಿಲ್ಲಿವಕ್ಕಂ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಅವರು 2025ರಲ್ಲಿ ಟಿವಿಕೆಗೆ ಸೇರ್ಪಡೆಗೊಂಡಿದ್ದರು. ರಾಜಕೀಯ ತಂತ್ರಜ್ಞ, ಮಾನವತಾವಾದಿ ಮತ್ತು ಕ್ರೀಡಾ ಆಡಳಿತಗಾರರಾಗಿರುವ ಅವರು ಈ ಹಿಂದೆ ವಿಸಿಕೆಯೊಂದಿಗೆ ಕೆಲಸ ಮಾಡಿದ್ದರು.
►ಡಾ. ಕೆ.ಜಿ. ಅರುಣರಾಜ್:
ವೈದ್ಯಕೀಯ ವೃತ್ತಿಯಿಂದ ಭಾರತೀಯ ಕಂದಾಯ ಸೇವೆ (ಐಆರ್ಎಸ್)ಗೆ ಸೇರಿದ್ದ ಅರುಣರಾಜ್, ತಮಿಳುನಾಡು, ಬಿಹಾರ ಮತ್ತು ಮಹಾರಾಷ್ಟ್ರಗಳಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ. 2025ರಲ್ಲಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದು ನೀತಿ ಮತ್ತು ಪ್ರಚಾರ ವಿಭಾಗದ ಕಾರ್ಯದರ್ಶಿಯಾಗಿ ಟಿವಿಕೆಗೆ ಸೇರ್ಪಡೆಗೊಂಡಿದ್ದರು.
►ಕೆ.ಎ. ಸೆಂಗೊಟ್ಟೈಯನ್:
ಟಿವಿಕೆ ಸಂಪುಟದಲ್ಲಿನ ಅತ್ಯಂತ ಅನುಭವಿ ನಾಯಕರಲ್ಲೊಬ್ಬರಾಗಿರುವ ಸೆಂಗೊಟ್ಟೈಯನ್, 10 ಸಲ ಶಾಸಕರಾಗಿದ್ದರು ಮತ್ತು ಎಐಎಡಿಎಂಕೆಯ ಮಾಜಿ ಸಚಿವರಾಗಿದ್ದರು. ಎಐಎಡಿಎಂಕೆಯಿಂದ ಉಚ್ಚಾಟನೆಯ ಬಳಿಕ ನವೆಂಬರ್ 2025ರಲ್ಲಿ ಟಿವಿಕೆಗೆ ಸೇರಿದ್ದರು.
►ಪಿ. ವೆಂಕಟರಮಣನ್:
ಮೈಲಾಪುರ ಕ್ಷೇತ್ರದಿಂದ ಗೆದ್ದಿರುವ ವೆಂಕಟರಮಣನ್, ವಿಜಯ್ ಅವರ ದೀರ್ಘಕಾಲದ ಒಡನಾಡಿ ಮತ್ತು ಪಕ್ಷದ ಖಜಾಂಚಿಯಾಗಿದ್ದಾರೆ. ದಿ. ಜಯಲಲಿತಾ ಬಳಿಕ ತಮಿಳುನಾಡಿನಲ್ಲಿ ಸಚಿವರಾದ ಬ್ರಾಹ್ಮಣ ಸಮುದಾಯದ ಏಕೈಕ ನಾಯಕರಾಗಿದ್ದಾರೆ.
►ಆರ್. ನಿರ್ಮಲ್ ಕುಮಾರ್:
ಪಕ್ಷದ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿರುವ ಕುಮಾರ್, ತಿರುಪ್ಪರಕುಂಡ್ರಂ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಟಿವಿಕೆಯ ಸಂಘಟನಾತ್ಮಕ ಬಲವರ್ಧನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
►ರಾಜಮೋಹನ್:
ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಮತ್ತು ಪ್ರಚಾರ ಕಾರ್ಯದರ್ಶಿಯಾಗಿರುವ ರಾಜಮೋಹನ್, ಮಾಧ್ಯಮ ಮತ್ತು ಕಂಟೆಂಟ್ ಕ್ರಿಯೇಷನ್ ಹಿನ್ನೆಲೆ ಹೊಂದಿದ್ದಾರೆ. ಎಗ್ಮೋರ್ ಮೀಸಲು ಕ್ಷೇತ್ರದಿಂದ ಗೆದ್ದಿರುವ ಅವರು, ಟಿವಿಕೆ ಮತ್ತು ಶೋಷಿತ ಸಮುದಾಯಗಳ ನಡುವೆ ಸಂಪರ್ಕವನ್ನು ಬಲಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
►ಡಾ.ಟಿ.ಕೆ. ಪ್ರಭು:
ದಂತವೈದ್ಯ ಮತ್ತು ಶಿವಗಂಗಾ ಪೂರ್ವ ಜಿಲ್ಲಾ ಮಟ್ಟದ ಸಂಘಟಕರಾಗಿರುವ ಪ್ರಭು, ಮದುರೈನಲ್ಲಿ ಟಿವಿಕೆಯ ಎರಡನೇ ಸಮಾವೇಶ ನಡೆದಾಗಿನಿಂದಲೂ ಪಕ್ಷದ ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ.
►ಎಸ್. ಕೀರ್ತನಾ:
29ರ ಹರೆಯದ ಕೀರ್ತನಾ, ಶಿವಕಾಶಿಯಿಂದ ಮೊದಲ ಮಹಿಳಾ ಶಾಸಕಿಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಸಂಪುಟದಲ್ಲಿ ಅವರ ಸೇರ್ಪಡೆಯು ಟಿವಿಕೆಯಲ್ಲಿ ಯುವಜನ ಮತ್ತು ಮಹಿಳಾ ಪ್ರಾತಿನಿಧ್ಯವನ್ನು ಸೂಚಿಸುತ್ತಿದೆ.






