ಡಿಎಂಕೆ-ಎಐಎಡಿಎಂಕೆ ಪ್ರಸ್ತಾವಿತ ಮೈತ್ರಿ ಮುರಿದು ಬೀಳಲು ಕನಿಮೋಳಿ ಕಾರಣ?: ವರದಿ

Photo Credit ; PTI
ಚೆನ್ನೈ: ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಪ್ರಸ್ತಾವಿತ ಮೈತ್ರಿ ಮುರಿದು ಬೀಳಲು ಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಎಂ. ಕನಿಮೋಳಿ ಈ ಪ್ರಸ್ತಾವವನ್ನು ತೀವ್ರವಾಗಿ ವಿರೋಧಿಸಿದ್ದು ಕಾರಣ ಎಂದು ವರದಿಯಾಗಿದೆ. ಒಂದು ವೇಳೆ ಡಿಎಂಕೆ ಪಕ್ಷವೇನಾದರೂ ಎಐಎಡಿಎಂಕೆಗೆ ಬೆಂಬಲ ನೀಡಿದರೆ, ಅದು ವ್ಯೂಹಾತ್ಮಕವಾಗಿ ದೀರ್ಘಾವಧಿಯಲ್ಲಿ ಡಿಎಂಕೆ ಪಾಲಿಗೆ ಮರಣ ಮೃದಂಗವಾಗಲಿದೆ. ಒಂದು ವೇಳೆ ಎಐಎಡಿಎಂಕೆಗೆ ಏನಾದರೂ ಸರ್ಕಾರ ರಚಿಸಲು ಅವಕಾಶ ನೀಡಿದರೆ, ಮತ್ತೆ ಆ ಪಕ್ಷ ತಮಿಳುನಾಡು ರಾಜಕಾರಣದಲ್ಲಿ ಪ್ರಸ್ತುತವಾಗಲು ಅವಕಾಶ ನೀಡಿದಂತಾಗಲಿದೆ ಎಂದು ಕನಿಮೋಳಿ ವಾದಿಸಿದರು ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ, ತನ್ನ ಬದ್ಧ ವೈರಿಯಾದ ಎಐಎಡಿಎಂಕೆಗೆ ರಾಜ್ಯದಲ್ಲಿ ಸರ್ಕಾರ ರಚಿಸಲು ತಾನೆಂದಿಗೂ ಬೆಂಬಲ ನೀಡುವುದಿಲ್ಲ ಹಾಗೂ ಎಐಎಡಿಎಂಕೆ ತನ್ನ ಪ್ರಮುಖ ರಾಜಕೀಯ ವೈರಿಯಾಗಿಯೇ ಮುಂದುವರಿಯಲಿದೆ ಎಂದು ಶುಕ್ರವಾರ ಡಿಎಂಕೆ ಪ್ರಕಟಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕನಿಮೋಳಿ, “ಇದು ಸ್ಪಷ್ಟ ಜನಮತವಲ್ಲದಿದ್ದರೂ, ಜನರ ಅಭಿಪ್ರಾಯವನ್ನು ಗೌರವಿಸಬೇಕಿದೆ” ಎಂದು ಹೇಳುವ ಮೂಲಕ, ವಿಜಯ್ ಅವರನ್ನು ಅಧಿಕಾರದಿಂದ ದೂರವಿಡಲು ತನ್ನ ರಾಜಕೀಯ ಬದ್ಧ ವೈರಿಯಾದ ಎಐಎಡಿಎಂಕೆಯೊಂದಿಗೆ ಡಿಎಂಕೆ ಸರ್ಕಾರ ರಚಿಸಲಿದೆ ಎಂಬ ವರದಿಗಳನ್ನು ಕೇವಲ ವದಂತಿಗಳು ಎಂದು ತಳ್ಳಿ ಹಾಕಿದ್ದಾರೆ.
ವಿಜಯ್ ಅವರಿಗೆ ಅಧಿಕಾರ ಹಿಡಿಯಲು ಅವಕಾಶ ನೀಡಿದರೆ, ನಾವು ಅಧಿಕಾರರಹಿತರಾಗಬೇಕಾಗುತ್ತದೆ ಎಂದು ಎರಡೂ ಪಕ್ಷಗಳ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿ, ತಮ್ಮ ಪಕ್ಷಗಳ ಭವಿಷ್ಯವನ್ನು ಕಾಪಾಡಿಕೊಳ್ಳಲು ಎಐಎಡಿಎಂಕೆ ಪಕ್ಷಕ್ಕೆ ಡಿಎಂಕೆ ಬಾಹ್ಯ ಬೆಂಬಲ ನೀಡಬೇಕು ಎಂಬ ಯೋಜನೆಯನ್ನು ಬೆಂಬಲಿಸಿದ್ದರಿಂದ, ಕಳೆದ ರಾತ್ರಿಯವರೆಗೂ ಎಐಎಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಯೋಜನೆಯನ್ನು ಡಿಎಂಕೆ ಹೊಂದಿತ್ತು ಎನ್ನಲಾಗಿದೆ.
ಈ ರಾಜಕೀಯ ಪಲ್ಲಟದ ಬಗ್ಗೆ ಸಾಕಷ್ಟು ಸುಳಿವುಗಳನ್ನು ನೀಡಿದ್ದ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್, ರಾಜ್ಯದಲ್ಲಿ ಸ್ಥಿರ ಸರ್ಕಾರವನ್ನು ಸ್ಥಾಪಿಸುವ ಪಕ್ಷದ ಗುರಿಯ ಹಿತಾಸಕ್ತಿಗಾಗಿ ತಾನು ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ಚುನಾಯಿತ ಶಾಸಕರು ಸಿದ್ಧವಿರಬೇಕು ಎಂದು ಸೂಚನೆ ನೀಡಿದ್ದರು.
ಎಐಎಡಿಎಂಕೆಯ ಈ ಪ್ರಸ್ತಾವಕ್ಕೆ ಡಿಎಂಕೆಯ ಒಂದು ವರ್ಗ ರೋಮಾಂಚಿತಗೊಂಡರೂ, ಕನಿಮೋಳಿಯಂತಹ ನಾಯಕರು ಈ ಪ್ರಸ್ತಾವಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು ಎನ್ನಲಾಗಿದೆ. ಇಂತಹ ಅಸಹಜ ಸರ್ಕಾರ ರಚನೆಗೆ ವಿಸಿಕೆ, ಎಡಪಕ್ಷಗಳು ಬೆಂಬಲ ನೀಡುತ್ತವೆಯೇ ಎಂಬ ಪ್ರಶ್ನೆಯೂ ಎಐಎಡಿಎಂಕೆಗೆ ಬೆಂಬಲ ನೀಡುವ ತನ್ನ ನಿರ್ಧಾರವನ್ನು ಡಿಎಂಕೆ ಮರುಪರಿಶೀಲಿಸುವಂತಾಯಿತು ಎಂದು ಹೇಳಲಾಗಿದೆ. ಈ ಮೂರು ಪಕ್ಷಗಳ ಬೆಂಬಲವಿಲ್ಲದೆ, ಯಾವ ಪಕ್ಷವೂ ತಮಿಳುನಾಡಿನಲ್ಲಿ ಸರ್ಕಾರ ರಚಿಸುವ ಸ್ಥಿತಿಯಲ್ಲಿ ಇಲ್ಲ.
ಹೀಗಾಗಿ, ತಮಿಳುನಾಡಿನಲ್ಲಿ ನೂತನ ಸರ್ಕಾರ ರಚನೆಗೆ ಸಂವಿಧಾನ ಕಡ್ಡಾಯಗೊಳಿಸಿರುವ ನಡೆಗಳನ್ನು ಪ್ರಾರಂಭಿಸಬೇಕು ಎಂದು ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರು ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರನ್ನು ಒತ್ತಾಯಿಸಿದ್ದಾರೆ.
ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳೊಂದಿಗೂ ಉತ್ತಮ ಬಾಂಧವ್ಯ ಹೊಂದಿರುವ ಉದ್ಯಮಿಯೊಬ್ಬರು ಎಐಎಡಿಎಂಕೆ ನೇತೃತ್ವದ ಸರ್ಕಾರಕ್ಕೆ ಡಿಎಂಕೆ ಬೆಂಬಲ ನೀಡುವ ಪ್ರಸ್ತಾವದ ಸಲಹೆಯನ್ನು ಮೊದಲ ಬಾರಿಗೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ಆದರೆ, ಈ ಸಲಹೆಯ ಬಗ್ಗೆ ಅಸಮಾಧಾನಗೊಂಡ ಸ್ಟಾಲಿನ್, ಏಕೈಕ ದೊಡ್ಡ ಪಕ್ಷಕ್ಕೆ ಸರ್ಕಾರ ರಚಿಸಲು ಅವಕಾಶ ನೀಡಿ, ಡಿಎಂಕೆ ವಿರೋಧ ಪಕ್ಷಗಳ ಸಾಲಿನಲ್ಲಿ ಕೂರುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು ಎನ್ನಲಾಗಿದೆ. ಆದರೆ, ಪಕ್ಷದ ದೀರ್ಘಕಾಲೀನ ಹಿತಾಸಕ್ತಿಗಾಗಿ ಈ ಪ್ರಸ್ತಾವವನ್ನು ಒಪ್ಪಿಕೊಳ್ಳುವಂತೆ ಡಿಎಂಕೆಯಲ್ಲಿನ ಒಂದು ವರ್ಗ ಸ್ಟಾಲಿನ್ ಅವರನ್ನು ಮನವೊಲಿಸಲು ಪ್ರಾರಂಭಿಸಿತು ಎಂದು ಹೇಳಲಾಗಿದೆ.
“ವಿಜಯ್ ಅವರನ್ನು ಇನ್ನು ಮುಂದಿನ ಹತ್ತು ವರ್ಷ ತಡೆಯುವುದು ಸಾಧ್ಯವಿಲ್ಲ. ಅವರನ್ನು ತಡೆಯುವ ಒಂದೇ ದಾರಿಯೆಂದರೆ, ಈಗಲೇ ಅವರನ್ನು ತಡೆಯುವುದು. ಅಲ್ಲದೆ ನಮ್ಮ ಪಕ್ಷದಿಂದ ವಲಸೆಯನ್ನು ತಡೆಯುವುದೂ ತುಂಬಾ ಕಷ್ಟವಾಗಲಿದೆ” ಎಂಬುದು ಆ ನಾಯಕರ ಅಭಿಪ್ರಾಯವಾಗಿತ್ತು. ಆದರೆ, ಇದು ಬಿಜೆಪಿಯ ಯೋಜನೆಯಲ್ಲದೆ ಮತ್ತೇನಲ್ಲ ಎಂದು ಹಲವಾರು ಡಿಎಂಕೆ ನಾಯಕರು ಈ ಪ್ರಸ್ತಾವವನ್ನು ವಿರೋಧಿಸಿದರು ಹಾಗೂ ಎಐಎಡಿಎಂಕೆಗೆ ಡಿಎಂಕೆ ಬೆಂಬಲ ನೀಡಲೇಬಾರದು ಎಂದು ಆಗ್ರಹಿಸಿದರು” ಎಂದೂ ಮೂಲಗಳು ತಿಳಿಸಿವೆ.
ಸೌಜನ್ಯ: deccanherald.com






