Tamil Nadu | DMK ಸಭಾತ್ಯಾಗ; ವಿಶ್ವಾಸ ಮತಯಾಚನೆಯಲ್ಲಿ ವಿಜಯ್ ಸರ್ಕಾರಕ್ಕೆ ಗೆಲುವು

Photo credit: PTI
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರವು ಬುಧವಾರ ವಿಧಾನಸಭೆಯಲ್ಲಿ ನಡೆದ ವಿಶ್ವಾಸ ಮತಯಾಚನೆಯಲ್ಲಿ ಬಹುಮತ ಸಾಬೀತುಪಡಿಸಿದೆ. 234 ಸದಸ್ಯ ಬಲದ ವಿಧಾನಸಭೆಯಲ್ಲಿ ಸರ್ಕಾರದ ಪರವಾಗಿ 144 ಶಾಸಕರು ಮತ ಚಲಾಯಿಸಿದ್ದು, ಅಗತ್ಯವಿದ್ದ 118 ಮತಗಳ ಗಡಿ ಸುಲಭವಾಗಿ ದಾಟಿದೆ.
ವಿಶ್ವಾಸ ನಿರ್ಣಯದ ಚರ್ಚೆ ಮತ್ತು ಮತಯಾಚನೆ ವೇಳೆ ಸದನದಲ್ಲಿ ರಾಜಕೀಯವಾಗಿ ನಾಟಕೀಯ ಬೆಳವಣಿಗೆ ನಡೆಯಿತು. ಪ್ರಮುಖ ವಿರೋಧ ಪಕ್ಷವಾದ ಡಿಎಂಕೆ ಹಾಗೂ ಡಿಎಂಡಿಕೆ ಸದಸ್ಯರು ಸಭಾತ್ಯಾಗ ನಡೆಸಿದರು. ಇದೇ ವೇಳೆ ಪಿಎಂಕೆಯ ನಾಲ್ವರು ಶಾಸಕರು ಮತ್ತು ಬಿಜೆಪಿಯ ಒಬ್ಬ ಶಾಸಕ ಮತದಾನದಿಂದ ದೂರ ಉಳಿದರು.
ಸಭಾತ್ಯಾಗದ ಬಳಿಕ ನಡೆದ ಮತದಾನದಲ್ಲಿ ವಿಜಯ್ ಸರ್ಕಾರವು ಸುಲಭವಾಗಿ ಬಹುಮತ ಪಡೆಯಿತು. ಆಡಳಿತ ಪಕ್ಷದ ಮೈತ್ರಿಕೂಟದ ಸದಸ್ಯರು ಸರ್ಕಾರಕ್ಕೆ ಬೆಂಬಲ ಸೂಚಿಸಿದರು.
ವಿಶ್ವಾಸ ನಿರ್ಣಯದ ಕುರಿತ ಚರ್ಚೆ ವೇಳೆ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ವಾಗ್ವಾದವೂ ನಡೆಯಿತು. ಡಿಎಂಕೆ ಸದಸ್ಯರು ಸರ್ಕಾರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ ಸದನದಿಂದ ಹೊರನಡೆದರು.
ರಾಜಕೀಯವಾಗಿ ಮಹತ್ವ ಪಡೆದಿದ್ದ ಈ ಬಹುಮತ ಪರೀಕ್ಷೆಯಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಹಾಗೂ ಎಎಂಎಂಕೆ ಪಕ್ಷಗಳ ಬೆಂಬಲವೂ ವಿಜಯ್ ಸರ್ಕಾರಕ್ಕೆ ದೊರೆಯಿತು.






