Tamil Nadu | ತಿರುಪರಂಕುಂದ್ರಂ ಬೆಟ್ಟದಲ್ಲಿ ಕಾರ್ತಿಗೈ ದೀಪ ಬೆಳಗಿಸಲು ಅನುಮತಿ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಸರ್ಕಾರದಿಂದ ಅರ್ಜಿ; ಆದೇಶ ಮರುಪರಿಶೀಲನೆಗೆ ಮನವಿ
ಕಾನೂನು ಸುವ್ಯವಸ್ಥೆ, ಕೋಮು ಸೌಹಾರ್ದತೆಗೆ ಧಕ್ಕೆ ಆತಂಕ

Photo: x.com/OpIndia_com
ಹೊಸದಿಲ್ಲಿ, ನ. 23: ಮಧುರೈನಲ್ಲಿರುವ ತಿರುಪರಂಕುಂದ್ರಂ ಬೆಟ್ಟದ ವಿವಾದಿತ ದೀಪಸ್ತಂಭದಲ್ಲಿ ಕಾರ್ತಿಗೈ ದೀಪ ಬೆಳಗಿಸಲು ಸುಪ್ರೀಂ ಕೋರ್ಟ್ ನೀಡಿದ್ದ ಒಂದು ಬಾರಿಯ ಅನುಮತಿಯನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಿದೆ ಎಂದು India Today ವರದಿ ಮಾಡಿದೆ.
ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ಸರ್ಕಾರದ ಪರವಾಗಿ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಆಯುಕ್ತರು ಅರ್ಜಿ ಸಲ್ಲಿಸಿದ್ದು, ನ. 20ರಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿದ್ದಾರೆ.
ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ವಿಪುಲ್ ಎಂ. ಪಾಂಚೋಲಿ ಅವರಿದ್ದ ಪೀಠವು ನ. 24ರಂದು ತಿರುಪರಂಕುಂದ್ರಂ ಬೆಟ್ಟದ ದೀಪಸ್ತಂಭದಲ್ಲಿ ಕಾರ್ತಿಗೈ ದೀಪ ಬೆಳಗಿಸಲು ಒಂದು ಬಾರಿಯ ವಿಶೇಷ ಅನುಮತಿ ನೀಡಿತ್ತು. ಇದೇ ವೇಳೆ, ಮದ್ರಾಸ್ ಹೈಕೋರ್ಟ್ ನೀಡಿದ್ದ ತೀರ್ಪಿನ ಕೆಲವು ಅಂಶಗಳಿಗೆ ತಡೆಯಾಜ್ಞೆ ನೀಡಿತ್ತು.
ದೀಪ ಬೆಳಗಿಸುವ ಕಾರ್ಯಕ್ರಮಕ್ಕೆ ನ್ಯಾಯಾಲಯ ಹಲವು ಷರತ್ತುಗಳನ್ನು ವಿಧಿಸಿತ್ತು. ಸಾರ್ವಜನಿಕರಿಗೆ ಸ್ಥಳಕ್ಕೆ ಪ್ರವೇಶ ನಿರ್ಬಂಧಿಸಲಾಗಿತ್ತು. ಮೆರವಣಿಗೆ ಅಥವಾ ಪ್ರತಿಭಟನೆ ನಡೆಸುವಂತಿಲ್ಲ ಎಂದು ಸೂಚಿಸಲಾಗಿತ್ತು. ದೇವಸ್ಥಾನದ ಆಡಳಿತ ಮಂಡಳಿ ಮತ್ತು ಸರ್ಕಾರದ ಅಧಿಕೃತ ಪ್ರತಿನಿಧಿಗಳಿಗೆ ಮಾತ್ರ ಸ್ಥಳಕ್ಕೆ ತೆರಳಲು ಅನುಮತಿ ನೀಡಲಾಗಿತ್ತು.
ಕಾರ್ಯಕ್ರಮದ ಮೇಲ್ವಿಚಾರಣೆಗಾಗಿ ಮಧುರೈ ಜಿಲ್ಲಾಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಅಗತ್ಯವಿದ್ದರೆ CISF ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ಕೂಡ ನ್ಯಾಯಾಲಯ ಅನುಮತಿ ನೀಡಿತ್ತು.
ಕಾರ್ತಿಗೈ ದೀಪವನ್ನು ಉಚ್ಚಿಪಿಳ್ಳೈಯಾರ್ ದೇವಸ್ಥಾನದ ಸಮೀಪದ ದೀಪ ಮಂಟಪದಲ್ಲಿ ಬೆಳಗಿಸುವುದು ಸಂಪ್ರದಾಯ ಎಂದು ತಮಿಳುನಾಡು ಸರ್ಕಾರ ತನ್ನ ಅರ್ಜಿಯಲ್ಲಿ ಹೇಳಿದೆ. ವಿವಾದಿತ ದೀಪಸ್ತಂಭದಲ್ಲಿ ದೀಪ ಬೆಳಗಿಸುವ ಸಂಪ್ರದಾಯ ಇಲ್ಲ ಎಂದು ವಾದಿಸಿದೆ.
ದೀಪಸ್ತಂಭವು ಹಝರತ್ ಸುಲ್ತಾನ್ ಸಿಕಂದರ್ ಬಾದ್ ಷಾ ಔಲಿಯಾ ದರ್ಗಾದಿಂದ ಸುಮಾರು 50 ಮೀಟರ್ ದೂರದಲ್ಲಿದೆ. ಈ ಸ್ಥಳದಲ್ಲಿ ದೀಪ ಬೆಳಗಿಸುವುದರಿಂದ ಕಾನೂನು ಸುವ್ಯವಸ್ಥೆಗೆ ಸಮಸ್ಯೆಯಾಗಬಹುದು ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆಯಾಗಬಹುದು ಎಂಬ ಆತಂಕವನ್ನು ಸರ್ಕಾರ ವ್ಯಕ್ತಪಡಿಸಿದೆ.
ಈ ಬಾರಿ ದೀಪ ಬೆಳಗಿಸಲು ನೀಡಿರುವ ಅನುಮತಿ ಒಂದು ಬಾರಿಗಷ್ಟೇ ಸೀಮಿತವಾಗಿದೆ. ಇದರಿಂದ ಶಾಶ್ವತವಾಗಿ ದೀಪ ಬೆಳಗಿಸುವ ಅವಕಾಶ ಸೃಷ್ಟಿಯಾಗುವುದಿಲ್ಲ ಅಥವಾ ಭವಿಷ್ಯದ ಪ್ರಕರಣಗಳಿಗೆ ನಿದರ್ಶನವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಪ್ರಕರಣದ ಇತರ ಕಾನೂನು ಪ್ರಶ್ನೆಗಳ ಕುರಿತು 2027ರ ಜನವರಿಯಲ್ಲಿ ವಿವರವಾದ ವಿಚಾರಣೆ ನಡೆಸಲು ನ್ಯಾಯಾಲಯ ಉದ್ದೇಶಿಸಿದೆ.
ವಿಜಯ್ ಸರ್ಕಾರದ ವಿರುದ್ಧ ಬಿಜೆಪಿ ಟೀಕೆ
ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. ಸರ್ಕಾರ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದೆ ಹಾಗೂ ಮತಬ್ಯಾಂಕ್ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ನಾಗೇಂದ್ರನ್, ದೀಪಸ್ತಂಭದಲ್ಲಿ ದೀಪ ಬೆಳಗಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದರೂ ಸರ್ಕಾರ ಅದನ್ನು ಪ್ರಶ್ನಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
"ದೀಪಸ್ತಂಭದಲ್ಲಿ ದೀಪ ಬೆಳಗಿಸಲು ಹೇಳಿದಾಗ ಸರ್ಕಾರಕ್ಕೆ ಏಕೆ ಇಷ್ಟೊಂದು ಆತಂಕ? ಕಾರ್ತಿಗೈ ದೀಪಂ ದಿನದಂದು ತಿರುಪರಂಕುಂದ್ರಂ ದೀಪಸ್ತಂಭದಲ್ಲಿ ದೀಪ ಬೆಳಗಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಆದರೆ, ಸರ್ಕಾರ ಈ ಆದೇಶವನ್ನು ಮರುಪರಿಶೀಲಿಸುವಂತೆ ಅರ್ಜಿ ಸಲ್ಲಿಸಿದೆ. ಸರ್ಕಾರದ ಹಿಂದೂ ವಿರೋಧಿ ನಿಲುವನ್ನು ತೀವ್ರವಾಗಿ ಖಂಡಿಸುತ್ತೇನೆ" ಎಂದು ಅವರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶಕ್ಕೆ ಗೌರವ ಸೂಚಿಸಿ ಇತರ ಸಂಘಟನೆಗಳು ಸಂಯಮ ಪಾಲಿಸುತ್ತಿರುವಾಗ ಸರ್ಕಾರ ಮಾತ್ರ ಮರುಪರಿಶೀಲನಾ ಅರ್ಜಿ ಸಲ್ಲಿಸಿರುವುದೇಕೆ ಎಂದು ಅವರು ಪ್ರಶ್ನಿಸಿದ್ದಾರೆ.
ದೇವಾಲಯದ ಆಸ್ತಿಗಳನ್ನು ರಕ್ಷಿಸಬೇಕಾದ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು 'ಕಂದರ್ ಬೆಟ್ಟ'ವನ್ನು 'ಸಿಕಂದರ್ ಬೆಟ್ಟ'ವನ್ನಾಗಿ ಮಾಡಲು ಆಸಕ್ತಿ ತೋರಿಸುತ್ತಿದೆಯೇ ಎಂದು ನಾಗೇಂದ್ರನ್ ಟೀಕಿಸಿದ್ದಾರೆ. ಮತಬ್ಯಾಂಕ್ ರಾಜಕೀಯಕ್ಕಾಗಿ ಮುಖ್ಯಮಂತ್ರಿ ಜೋಸೆಫ್ ವಿಜಯ್ ಇಷ್ಟು ಕೆಳಮಟ್ಟಕ್ಕೆ ಇಳಿಯಬೇಕೇ ಎಂದೂ ಪ್ರಶ್ನಿಸಿದ್ದಾರೆ.







