Tamil Nadu|ಪತ್ನಿಯನ್ನು ಹತ್ಯೆಗೈದು ಮೃತದೇಹದ ಜತೆಗಿನ ಸೆಲ್ಫಿ ವಾಟ್ಸಾಪ್ ಸ್ಟೇಟಸ್ ಹಾಕಿದ ಪತಿ !

ಶ್ರೀಪ್ರಿಯಾ |ಬಾಲಮುರುಗನ್ PC: x.com/manoramaonline
ಚೆನ್ನೈ: ಕೊಯಮತ್ತೂರಿನ ಮಹಿಳಾ ಹಾಸ್ಟೆಲ್ ನಲ್ಲಿ ಭಾನುವಾರ ತನ್ನ ಪರಿತ್ಯಕ್ತ ಪತ್ನಿಯನ್ನು ಅಮಾನುಷವಾಗಿ ಹತ್ಯೆ ಮಾಡಿದ ವ್ಯಕ್ತಿಯೊಬ್ಬ ಮೃತದೇಹದ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಅದನ್ನು ವಾಟ್ಸಪ್ ಸ್ಟೇಟಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆ ತಮಿಳುನಾಡಿನಲ್ಲಿ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ದೌರ್ಜನ್ಯದ ಬಗ್ಗೆ ಸಾರ್ವಜನಿಕ ಆಕ್ರೋಶ ಸ್ಫೋಟಗೊಳ್ಳಲು ಕಾರಣವಾಗಿದೆ.
ಸಂತ್ರಸ್ತ ಮಹಿಳೆಯನ್ನು ಶ್ರೀಪ್ರಿಯಾ ಎಂದು ಗುರುತಿಸಲಾಗಿದೆ. ಈಕೆ ಕೊಯಮತ್ತೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದಳು. ಪತಿ ಬಾಲಮುರುಗನ್ ಆರೋಪಿ. ವೈವಾಹಿಕ ವ್ಯಾಜ್ಯದಿಂದಾಗಿ ಇಬ್ಬರೂ ಪ್ರತ್ಯೇಕ ವಾಸವಿದ್ದರು. ಭಾನುವಾರ ಪತ್ನಿಯನ್ನು ಭೇಟಿ ಮಾಡುವ ನೆಪದಲ್ಲಿ ಮಹಿಳಾ ಹಾಸ್ಟೆಲ್ ಗೆ ಆಮಿಸಿದ ಬಾಲಮುರುಗನ್, ಬಟ್ಟೆಯ ಒಳಗೆ ಚಾಕು ಹುದುಗಿಸಿಕೊಂಡಿದ್ದ.
ಇಬ್ಬರೂ ಪರಸ್ಪರ ಭೇಟಿಯಾದ ತಕ್ಷಣವೇ ಇಬ್ಬರ ನಡುವೆ ವಾಗ್ವಾದ ನಡೆಯಿತು. ಈ ಸಂದರ್ಭದಲ್ಲಿ ದಿಢೀರ್ ದಾಳಿ ನಡೆಸಿದ ಬಾಲಮುರುಗನ್ ಹಾಟೆಲ್ ನಲ್ಲೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದಾದ ತಕ್ಷಣವೇ ಮೃತದೇಹದ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಅದನ್ನು ವಾಟ್ಸಪ್ ಸ್ಟೇಟಸ್ ನಲ್ಲಿ ಅಪ್ಲೋಡ್ ಮಾಡಿದ. ಶ್ರೀಪ್ರಿಯಾ ತನಗೆ ವಿಶ್ವಾಸದ್ರೋಹ ಎಸಗಿದ್ದಾಳೆ ಎಂದು ಆರೋಪಿ ಹೇಳಿಕೊಂಡಿದ್ದಾನೆ.
ದಾಳಿಯಿಂದ ಭೀತಿಗೊಂಡ ಹಾಸ್ಟೆಲ್ ನಿವಾಸಿಗಳು ಓಡಿಹೋದರು. ಆದರೆ ಬಾಲಮುರುಗನ್ ಪೊಲೀಸರು ಬರುವವರೆಗೂ ಘಟನಾ ಸ್ಥಳದಲ್ಲೇ ಉಳಿದಿಕೊಂಡಿದ್ದ. ಸ್ಥಳದಲ್ಲೇ ಆತನನ್ನು ಬಂಧಿಸಲಾಗಿದ್ದು, ಘಟನೆಗೆ ಬಳಸಿದ ಆಯುಧ ವಶಪಡಿಸಿಕೊಳ್ಳಲಾಗಿದೆ. ಪತ್ನಿ ಪರಪುರುಷನ ಜತೆಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ಆರೋಪಿಗೆ ಇತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.







