ತಮಿಳುನಾಡು: 35 ವರ್ಷಗಳಲ್ಲೇ ಮೊದಲ ಬಾರಿಗೆ ಬ್ರಾಹ್ಮಣರಿಗೆ ದಕ್ಕದ ಪ್ರಮುಖ ಪಕ್ಷಗಳ ಟಿಕೆಟ್

PC: Image: PTI, ANI
ಚೆನ್ನೈ: ತಮಿಳುನಾಡು ರಾಜಕೀಯದ 35 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಎಐಎಡಿಎಂಕೆ ವಿಧಾನಸಭಾ ಚುನಾವಣೆಯಲ್ಲಿ ಬ್ರಾಹ್ಮಣ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿಲ್ಲ. ಇತರ ಪ್ರಮುಖ ಪಕ್ಷಗಳಲ್ಲಿ ಕೂಡಾ ಈ ಸಮುದಾಯದ ಅಭ್ಯರ್ಥಿಗಳು ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿರುವುದು ರಾಜ್ಯ ರಾಜಕಾರಣದಲ್ಲಿ ಬ್ರಾಹ್ಮಣರ ಪ್ರಭಾವ ಮಸುಕಾಗುತ್ತಿರುವುದರ ಸೂಚಕವಾಗಿದೆ.
ತಮಿಳುನಾಡು ಬ್ರಾಹ್ಮಣ ಸಂಘದ ಬೆಂಬಲವನ್ನು ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದರೂ, ಎಐಎಡಿಎಂಕೆ ಮಿತ್ರಪಕ್ಷವಾಗಿರುವ ಬಿಜೆಪಿಗೆ ಹಂಚಿಕೆ ಮಾಡಿರುವ 27 ಸೀಟುಗಳಲ್ಲಿ ಕೂಡಾ ಯಾವುದೇ ಬ್ರಾಹ್ಮಣ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿಲ್ಲ. ಡಿಎಂಕೆ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಕೂಡಾ ಬ್ರಾಹ್ಮಣ ಸಮುದಾಯದ ಯಾವುದೇ ಅಭ್ಯರ್ಥಿಗಳಿಲ್ಲ. ರಾಜ್ಯದ ಜನಸಂಖ್ಯೆಲ್ಲಿ ಬ್ರಾಹ್ಮಣರು ಶೇಕಡ 3ರಷ್ಟು ಪಾಲು ಹೊಂದಿದ್ದಾರೆ.
ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸಾವಿನ ಬಳಿಕ ಕಳೆದ ಹತ್ತು ವರ್ಷಗಳಲ್ಲಿ ಎಐಎಡಿಎಂಕೆ ಸಮುದಾಯದ ಒಬ್ಬರಿಗೆ ಮಾತ್ರ ಸ್ಪರ್ಧಿಸಲು ಅವಕಾಶ ನೀಡಿತ್ತು. ನಿವೃತ್ತ ಡಿಜಿಪಿ ಆರ್.ನಟರಾಜ್ ಅವರು 2021ರ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು.
ಇದಕ್ಕೆ ವಿರುದ್ಧವಾಗಿ ನಟ ವಿಜಯ್ ಅವರ ಟಿವಿಕೆ ಇಬ್ಬರು ಬ್ರಾಹ್ಮಣ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ತಮಿಳು ರಾಷ್ಟ್ರೀಯವಾದಿ ಸೀಮನ್ ಅವರ ಎನ್ ಟಿಕೆ ಆರು ಮಂದಿ ಬ್ರಾಹ್ಮಣರನ್ನು ಕಣಕ್ಕೆ ಇಳಿಸಿದೆ. ಮೈಲಾಪುರ ಹಾಗೂ ಶ್ರೀರಂಗಂನಂಥ ಬ್ರಾಹ್ಮಣ ಸಮುದಾಯದ ಮತಗಳು ಅಧಿಕವಿರುವ ಕ್ಷೇತ್ರಗಳನ್ನು ಆ ಸಮುದಾಯಕ್ಕೆ ಬಿಟ್ಟುಕೊಟ್ಟಿವೆ. ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿ ರಾಜ್ಯದಲ್ಲಿ ಪ್ರಮುಖ ಪಕ್ಷಗಳಿಂದ ಟಿಕೆಟ್ ಪಡೆದ ಬಹುತೇಕ ಮಂದಿ ಇತರ ಹಿಂದುಳಿದ ವರ್ಗಗಳಿಗೆ ಸೇರಿದವರು.
"ಎಐಎಡಿಎಂಕೆ ಬ್ರಾಹ್ಮಣ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಜಯಲಲಿತಾ ಮತ್ತು ಎಂಜಿಆರ್ ಅವರು ಸದಾ ಬ್ರಾಹ್ಮಣ ಅಭ್ಯರ್ಥಿಗಳಿಗೆ ಅವಕಾಶ ನೀಡುತ್ತಿದ್ದರು" ಎಂದು ರಾಜಕೀಯ ವಿಶ್ಲೇಷಕ ರವೀಂದ್ರನ್ ದುರೈಸಾಮಿ ಹೇಳಿದ್ದಾರೆ. ಎಐಎಡಿಎಂಕೆ ದಶಕಗಳಿಂದ ಬ್ರಾಹ್ಮಣರ ಬೆಂಬಲ ಪಡೆಯುತ್ತಿತ್ತು. ಆದರೆ ಜಯಾ ನಿಧನದ ಬಳಿಕ ಬ್ರಾಹ್ಮಣ ಮತದಾರರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಆದ್ದರಿಂದ ಬ್ರಾಹ್ಮಣ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂಬ ನಿಲುವಿನಿಂದ ಎಐಎಡಿಎಂಕೆ ಈ ಕ್ರಮ ಕೈಗೊಂಡಿದೆ ಎಂದು ರಾಜಕೀಯ ವಿಶ್ಲೇಷಕ ಅರುಣ್ಕುಮಾರ್ ಹೇಳಿದ್ದಾರೆ.






