Tamil Nadu | ಮೂರು ವರ್ಷದ ಬಾಲಕಿಯ ಅತ್ಯಾಚಾರ, ಹತ್ಯೆ : ಆರೋಪಿಯ ಬಂಧನ

Photo: ITG / indiatoday
ತಿರುವಳ್ಳೂರ್: ದುಷ್ಕರ್ಮಿಯೊಬ್ಬ 5 ರೂ. ಬಿಸ್ಕತ್ ಪೊಟ್ಟಣದ ಆಸೆ ತೋರಿಸಿ, ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಬಳಿಕ ಆಕೆಯನ್ನು ಹತ್ಯೆಗೈದಿರುವ ಘಟನೆ ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿ ಬಿಹಾರ ಮೂಲದ ವಿಬಿನ್ ಮಂಚ್(19) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ತಿರುವಳ್ಳೂರ್ ನೆರೆಯ ಪ್ರದೇಶದಿಂದ ನಾಪತ್ತೆಯಾಗಿದ್ದ ಮೂರು ವರ್ಷದ ಬಾಲಕಿ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಮುಳ್ಳಿನ ಪೊದೆಯಲ್ಲಿ ಪತ್ತೆಯಾಗಿದ್ದಳು. ಲೈಂಗಿಕ ದೌರ್ಜನ್ಯಕ್ಕೀಡಾಗಿದ್ದ ಆ ಬಾಲಕಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
"ಮನೆಯ ಬಳಿ ಆಟವಾಡುತ್ತಿದ್ದ ಬಾಲಕಿಯನ್ನು ವಲಸೆ ಕಾರ್ಮಿಕನೊಬ್ಬ ಕೊಠಡಿಗೆ ಕರೆದೊಯ್ದಿರುವುದನ್ನು ನಾನು ನೋಡಿದ್ದೇನೆ. ಆದರೆ, ವಲಸೆ ಕಾರ್ಮಿಕ ಹಾಗೂ ಬಾಲಕಿಯ ಕುಟುಂಬದ ಸದಸ್ಯರು ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ಕಾರಣ ನನಗೆ ಯಾವುದೇ ಸಂಶಯ ಉಂಟಾಗಲಿಲ್ಲ" ಎಂದು ನೆರೆಮನೆಯ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
ಬಾಲಕಿ ಮನೆಗೆ ಬರದ ಕಾರಣ ಆಕೆಯ ತಾಯಿ ಸಂಜೆ ಸುಮಾರು 6 ಗಂಟೆಗೆ ಆಕೆಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ. ಈ ವೇಳೆ, ಬಾಲಕಿ ಮುಳ್ಳಿನ ಪೊದೆಯೊಂದರಲ್ಲಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಕ್ಷಣವೇ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಆರೋಪಿಯನ್ನು ಬಂಧಿಸಿದ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.






