ಜಾತಿಸಮೀಕ್ಷೆಯ ನಿಖರತೆ ಕಾಪಾಡಲು ನಿರ್ಣಯ ಅಂಗೀಕರಿಸಿದ ತಮಿಳುನಾಡು ಸರಕಾರ

Photo Credit : PTI
ಚೆನ್ನೈ: 2027ರ ಜನಗಣತಿಯ ಎರಡನೇ ಹಂತದಲ್ಲಿ, ಇತರ ಹಿಂದುಳಿದ ವರ್ಗ (ಒಬಿಸಿ)ಗಳಿಗೆ ಸಂಬಂಧಿಸಿದ ವಿವರಗಳನ್ನು ಸಂಗ್ರಹಿಸುವಾಗ, ಇಂಥ ಜಾತಿಗಳನ್ನು ನಿರ್ದಿಷ್ಟವಾಗಿ ಗುರುತಿಸುವ ರಾಜ್ಯ ಮತ್ತು ಕೇಂದ್ರ ಸರಕಾರಗಳ ಅಧಿಕೃತ ಪಟ್ಟಿಗಳನ್ನು ಮಾತ್ರ ಆಧಾರವಾಗಿಟ್ಟುಕೊಳ್ಳಬೇಕು ಎಂಬುದಾಗಿ ಕೇಂದ್ರ ಸರಕಾರವನ್ನು ಒತ್ತಾಯಿಸುವ ನಿರ್ಣಯವನ್ನು ತಮಿಳುನಾಡು ವಿಧಾನಸಭೆ ಮಂಗಳವಾರ ಅಂಗೀಕರಿಸಿತು.
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ವಿ. ಸಂಪತ್ಕುಮಾರ್ ಈ ನಿರ್ಣಯವನ್ನು ಮಂಡಿಸಿದರು ಹಾಗೂ ಭಾರತದ ಜನಗಣತಿಯ ಇತಿಹಾಸವನ್ನು ಕಿರಿದಾಗಿ ಪ್ರಸ್ತಾಪಿಸಿದರು.
ಪ್ರಾದೇಶಿಕ ವ್ಯತ್ಯಾಸಗಳು ಸೇರಿದಂತೆ ಒಂದೇ ಜಾತಿಯನ್ನು ಸೂಚಿಸಲು ಜನರು ಬೇರೆ ಬೇರೆ ಹೆಸರುಗಳನ್ನು ಬಳಸಿದರೆ, ಇದರ ಆಧಾರದಲ್ಲಿ ಸಂಗ್ರಹಿಸುವ ದತ್ತಾಂಶಗಳು ಅಸ್ಪಷ್ಟವಾಗಿರುತ್ತವೆ ಎಂದು ಸಚಿವರು ಹೇಳಿದರು.
‘‘ಹಾಗಾಗಿ, ಗಣತಿದಾರರು ಮಾಹಿತಿಗಳನ್ನು ಪಡೆದುಕೊಳ್ಳುವಾಗ ರಾಜ್ಯ ಮತ್ತು ಕೇಂದ್ರ ಸರಕಾರಗಳ ಅಧಿಸೂಚನೆಗಳಂತೆ ಅಧಿಕೃತ ಹೆಸರುಗಳನ್ನು ಮಾತ್ರ ಪಡೆದುಕೊಳ್ಳಬೇಕು’’ ಎಂದು ಅವರು ನುಡಿದರು.




