ಯೂಟ್ಯೂಬ್ ನೋಡಿಕೊಂಡು ಡಯಟ್ : 3 ತಿಂಗಳಿನಿಂದ ಜ್ಯೂಸ್ ಮಾತ್ರ ಕುಡಿಯುತ್ತಿದ್ದ ವಿದ್ಯಾರ್ಥಿ ಮೃತ್ಯು

Photo | indiatoday
ಕನ್ಯಾಕುಮಾರಿ : ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಕೊಳಚೆಲ್ ಎಂಬಲ್ಲಿ 17ರ ಹರೆಯದ ಬಾಲಕ ಯೂಟ್ಯೂಬ್ ವೀಡಿಯೊ ನೋಡಿ ಡಯಟ್ ಮಾಡಿದ ಬಳಿಕ ಉಸಿರುಗಟ್ಟಿ ಮೃತಪಟ್ಟಿದ್ದಾನೆ ಎಂದು ಆತನ ಕಟುಂಬಸ್ಥರು ಹೇಳಿದ್ದಾರೆ.
ಸಕ್ತೇಶ್ವರನ್ ಮೃತ ವಿದ್ಯಾರ್ಥಿ. ಸಕ್ತೇಶ್ವರನ್ ಆರೋಗ್ಯವಂತನಾಗಿದ್ದ ಮತ್ತು ಕ್ರಿಯಾಶೀಲನಾಗಿದ್ದ. ಆದರೆ ಕಳೆದ ಕೆಲ ತಿಂಗಳಿನಿಂದ ಘಟನ ಆಹಾರವನ್ನು ತ್ಯಜಿಸಿ ಹಣ್ಣಿನ ರಸ ಮಾತ್ರ ಸೇವಿಸುತ್ತಿದ್ದ. ಈ ಆಹಾರ ಪದ್ಧತಿಯನ್ನು ಅನುಸರಿಸುವಾಗ ಆತ ಯಾವುದೇ ವೈದ್ಯರನ್ನು ಸಂಪರ್ಕಿಸಿಲ್ಲ ಎಂದು ಕುಟುಂಬಸ್ಥರು ವೈದ್ಯರು ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆನ್ಲೈನ್ ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದ ಸಕ್ತೀಶ್ವರನ್ ಘನ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸಿ ಹಣ್ಣಿನ ರಸವನ್ನು ಮಾತ್ರ ಸೇವಿಸುತ್ತಿದ್ದ. ಗುರುವಾರ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆಯಿಂದ ಮನೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ʼಚಿಕ್ಕ ವಯಸ್ಸಿನಿಂದಲೂ ಸಕ್ತೀಶ್ವರನ್ ಆರೋಗ್ಯದ ಬಗ್ಗೆ ಕಾಳಜಿ ಹೊಂದಿದ್ದ. ಇದೇ ಕಾರಣಕ್ಕೆ ಶಾಲೆಯಲ್ಲಿ ಕ್ರೀಡೆಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಇತ್ತೀಚೆಗೆ ತಿರುಚಿರಾಪಳ್ಳಿಯ ಕಾಲೇಜಿಗೆ ಪ್ರವೇಶ ಪಡೆದಿದ್ದ ಸಕ್ತೀಶ್ವರನ್ ತೂಕ ಇಳಿಸಿಕೊಳ್ಳಲು ನಿರ್ಧರಿಸಿದ್ದ. ಕಳೆದ ಮೂರು ತಿಂಗಳಿನಿಂದ ಹಣ್ಣುಗಳು ಮತ್ತು ರಸವನ್ನು ಮಾತ್ರ ಸೇವಿಸುತ್ತಿದ್ದʼ ಎಂದು ಸ್ಥಳೀಯರು ಹೇಳಿದ್ದಾರೆ.
ಗುರುವಾರ ಪೂಜಾ ವಿಧಿವಿಧಾನವನ್ನು ನಡೆಸಿ ಮೊದಲ ಬಾರಿಗೆ ಘನ ಆಹಾರವನ್ನು ಸೇವಿಸಿದ್ದಾನೆ. ಊಟ ಸೇವಿಸಿದ ತಕ್ಷಣ ಆತ ವಾಂತಿ ಮಾಡಲು ಪ್ರಾರಂಭಿಸಿದ್ದಾನೆ. ಆ ಬಳಿಕ ಉಸಿರಾಟದ ತೊಂದರೆಯಿಂದ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಬಾಲಕನ ಸಾವಿಗೆ ನಿಖರವಾದ ಕಾರಣ ಮರಣೋತ್ತರ ಪರೀಕ್ಷೆ ಬಳಿಕವೇ ತಿಳಿದು ಬರಲಿದೆ.







