Tamil Nadu | ಶಿವಗಂಗೆಯಲ್ಲಿ TNSTC ಬಸ್‌ಗಳು ಢಿಕ್ಕಿ: ಕನಿಷ್ಠ 11 ಮೃತ್ಯು, 50ಕ್ಕೂ ಹೆಚ್ಚು ಮಂದಿ ಗಾಯ

ಶಿವಗಂಗೆ: ತಿರುಪತ್ತೂರು ತಾಲ್ಲೂಕಿನ ನಾಚಿಯಾರ್‌ಪುರಂ ಬಳಿಯಲ್ಲಿ ರವಿವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆಯ (TNSTC) ಎರಡು ಬಸ್‌ಗಳು ಮುಖಾಮುಖಿಯಾಗಿ ಢಿಕ್ಕಿ ಹೊಡೆದು 11 ಮಂದಿ ಸಾವನ್ನಪ್ಪಿದ್ದಾರೆ. 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ.
ಕಾರೈಕುಡಿಯಿಂದ ದೇವಕೊಟ್ಟೈಗೆ ಸಾಗುತ್ತಿದ್ದ ಬಸ್ ಮತ್ತು ದೇವಕೊಟ್ಟೈನಿಂದ ದಿಂಡಿಗಲ್ ಕಡೆಗೆ ಹೊರಟಿದ್ದ ಇನ್ನೊಂದು ಬಸ್ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಬಳಿ ಪರಸ್ಪರ ಢಿಕ್ಕಿ ಹೊಡೆದಿವೆ. ಬಸ್ ಚಾಲಕರ ಪೈಕಿ ಒಬ್ಬರು ಬಟ್ಲಗುಂಡು ಮೂಲದ ಪಿ. ಸೆಂದ್ರಯನ್ (36) ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಗಂಭೀರವಾಗಿ ಗಾಯಗೊಂಡವರನ್ನು ಕಾರೈಕುಡಿ, ಶಿವಗಂಗಾ ಹಾಗೂ ತಿರುಪತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರು ಮಂದಿಯನ್ನು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ.
ಅಪಘಾತದಲ್ಲಿ ಸಾವಿಗೀಡಾದವರಲ್ಲಿ ಒಂಬತ್ತು ಮಹಿಳೆಯರು ಹಾಗೂ ಇಬ್ಬರು ಪುರುಷರು ಸೇರಿದ್ದಾರೆ. ಚೊಕ್ಕಲಿಂಗಪುರಂನ ಎಂ. ಚೆಲ್ಲಮ್ (55), ಅರಿಯಕುಡಿಯ ವಿ. ಮಲ್ಲಿಕಾ (61), ಸಿಂಗಂಪುನಾರಿಯ ಎಸ್. ಮುತ್ತುಮರಿ (60), ಕಾರೈಕುಡಿಯ ಆರ್. ಕಲ್ಪನಾ (36), ಶ್ರೀಲಂಕಾ ತಮಿಳು ಪುನರ್ವಸತಿ ಕೇಂದ್ರದ ಡಿ. ಗುಣಲಕ್ಷ್ಮಿ (55) ಮತ್ತು ಪುದುಕೊಟ್ಟೈನ ಎ. ದೈವನೈ (55) ಮೃತಪಟ್ಟವರಲ್ಲಿ ಸೇರಿದ್ದಾರೆ.
ಘಟನೆ ನಂತರ ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸೇರಿ ಅವಶೇಷಗಳಲ್ಲಿ ಸಿಲುಕಿದ್ದವರನ್ನು ರಕ್ಷಣೆ ಮಾಡಿದರು. ಶಿವಗಂಗಾ ಎಸ್‌ಪಿ ಆರ್. ಶಿವ ಪ್ರಸಾದ್ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದರು ಎಂದು ತಿಳಿದು ಬಂದಿದೆ.
ಪ್ರಾಥಮಿಕ ತನಿಖೆಯಲ್ಲಿ ಕಿರಿದಾದ ರಸ್ತೆ ಮತ್ತು ಅತಿವೇಗವೇ ಅಪಘಾತಕ್ಕೆ ಕಾರಣವಾಗಿರುವ ಶಂಕೆ ವ್ಯಕ್ತವಾಗಿದೆ.
ಚೆನ್ನೈನಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ದುರಂತಕ್ಕೆ ಸಂತಾಪ ಸೂಚಿಸಿ, ಮೃತಪಟ್ಟವರ ಕುಟುಂಬಗಳಿಗೆ ತಲಾ 3 ಲಕ್ಷ ರೂಪಾಯಿ, ಗಂಭೀರ ಗಾಯಗೊಂಡವರಿಗೆ 1 ಲಕ್ಷ ರೂಪಾಯಿ ಹಾಗೂ ಸಣ್ಣ ಗಾಯಾಳುಗಳಿಗೆ 50,000 ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ. ಸಚಿವ ಕೆ.ಆರ್. ಪೆರಿಯಕರುಪ್ಪನ್ ಹಾಗೂ ಶಿವಗಂಗಾ ಜಿಲ್ಲಾಧಿಕಾರಿಯನ್ನು ಪರಿಹಾರ ಕಾರ್ಯಾಚರಣೆ ನೋಡಿಕೊಳ್ಳಲು ನಿಯೋಜಿಸಲಾಗಿದೆ.
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅಪಘಾತಕ್ಕೆ ಸಂತಾಪ ಸೂಚಿಸಿದರು. ರಾಜ್ಯದಲ್ಲಿ ಪದೇಪದೇ ಸಂಭವಿಸುತ್ತಿರುವ ಬಸ್ ಅಪಘಾತಗಳ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.







