ನಾವು ಫೋನ್ ಕದ್ದಾಲಿಕೆಯ ಬಗ್ಗೆ ಹೆದರಿಕೊಂಡಿಲ್ಲ: ಕೇಂದ್ರ ಸರಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ಪ್ರಧಾನಿ ಮೋದಿ ಅದಾನಿಗಾಗಿ ದುಡಿಯುತ್ತಿದ್ದಾರೆ ಎಂದ ಕಾಂಗ್ರೆಸ್ ನಾಯಕ

ರಾಹುಲ್ ಗಾಂಧಿ Photo- PTI
ಹೊಸದಿಲ್ಲಿ: ‘ಸರ್ಕಾರಿ ಪ್ರಾಯೋಜಿತ ದಾಳಿಕೋರರು ನಿಮ್ಮ ಐಫೋನ್ ಗಳನ್ನು ದೂರ ನಿಯಂತ್ರಣದ ಮೂಲಕ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ’ ಎಂದು ಹಲವಾರು ವಿರೋಧ ಪಕ್ಷಗಳ ನಾಯಕರಿಗೆ ಆ್ಯಪಲ್ ರವಾನಿಸಿರುವ ಎಚ್ಚರಿಕೆಯ ಕುರಿತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಾವು ಫೋನ್ ಕದ್ದಾಲಿಕೆಯ ಬಗ್ಗೆ ಹೆದರಿಕೊಂಡಿಲ್ಲ ಎಂದು ಹೇಳಿದ್ದಾರೆ ಎಂದು hindustantimes.com ವರದಿ ಮಾಡಿದೆ.
ದಿಲ್ಲಿಯಲ್ಲಿ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ನೀವು ಸರ್ಕಾರಿ ಪ್ರಾಯೋಜಿತ ದಾಳಿಕೋರರಿಂದ ಗುರಿಯಾಗಲಿದ್ದೀರಿ ಎಂದು ಆ್ಯಪಲ್ ಭಾವಿಸಿದೆ” ಎಂಬ ಎಚ್ಚರಿಕೆ ಸಂದೇಶವನ್ನು ಎಲ್ಲ ವಿರೋಧ ಪಕ್ಷಗಳ ನಾಯಕರು ಸ್ವೀಕರಿಸಿದ್ದಾರೆ. ನಮ್ಮ ಕಚೇರಿಯ ಎಲ್ಲ ಪದಾಧಿಕಾರಿಗಳು ಈ ಎಚ್ಚರಿಕೆ ಸಂದೇಶವನ್ನು ಸ್ವೀಕರಿಸಿದ್ದಾರೆ. ಕೆ.ಸಿ.ವೇಣುಗೋಪಾಲ್, ಪವನ್ ಖೇರಾ, ಸೀತಾರಾಂ ಯೆಚೂರಿ, ಪ್ರಿಯಾಂಕಾ ಚತುರ್ವೇದಿ, ಟಿ.ಎಸ್.ಸಿಂಗ್ ಡಿಯೊ, ಮಹುವಾ ಮೊಯಿತ್ರಾ, ರಾಘವ್ ಛಡ್ಡಾ ಕೂಡಾ ಇದೇ ಬಗೆಯ ಎಚ್ಚರಿಕೆ ಸಂದೇಶವನ್ನು ಸ್ವೀಕರಿಸಿದ್ದಾರೆ. ನೀವು ಎಷ್ಟು ಬೇಕೋ ಅಷ್ಟು ನಮ್ಮ ಫೋನ್ ಗಳನ್ನು ಕದ್ದಾಲಿಸಬಹುದು. ನಾನು ಹೆದರುವುದಿಲ್ಲ. ನಿಮಗೆ ಅಗತ್ಯವಿದ್ದರೆ ನಾನು ನನ್ನ ಫೋನ್ ಕೂಡಾ ನೀಡಬಲ್ಲೆ. ನಾವು ಹೆದರಿಕೊಂಡಿಲ್ಲ. ನಾವು ಹೋರಾಡುತ್ತಿದ್ದೇವೆ” ಎಂದು ಆಡಳಿತಾರೂಢ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೋದಿ ಸರ್ಕಾರದ ಆತ್ಮವು ಅದಾನಿ ಸಮೂಹದ ಹಿಡಿತದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗಿಂತ ಅದಾನಿ ಮೇಲಿದ್ದಾರೆ ಎಂದು ಆರೋಪಿಸಿದ ರಾಹುಲ್ ಗಾಂಧಿ, “ಪ್ರಧಾನಿ ನರೇಂದ್ರ ಮೋದಿ ಅದಾನಿಗಾಗಿ ದುಡಿಯುತ್ತಿದ್ದಾರೆ” ಎಂಬ ತಮ್ಮ ಆರೋಪವನ್ನು ಪುನರುಚ್ಚರಿಸಿದ್ದಾರೆ. “ಬಿಜೆಪಿ ಸರ್ಕಾರ ಹಾಗೂ ಬಿಜೆಪಿಯ ಹಣಕಾಸು ವ್ಯವಸ್ಥೆಯು ನೇರವಾಗಿ ಅದಾನಿಯೊಂದಿಗೆ ಸಂಪರ್ಕ ಹೊಂದಿದೆ” ಎಂದೂ ಅವರು ಆರೋಪಿಸಿದ್ದಾರೆ.
“ಈ ಜನರು ತಂತ್ರಜ್ಞಾನವನ್ನು ನಿಯಂತ್ರಿಸುವ ಮೂಲಕ ಭಾರತದ ಯುವಜನರನ್ನು ನಿಯಂತ್ರಿಸಬಹುದು ಎಂದು ಭಾವಿಸಿದ್ದಾರೆ. ಆದರೆ, ರಾಜಕೀಯ ಸಂಪರ್ಕಗಳ ಹಳೆಯ ಶಸ್ತ್ರಾಸ್ತ್ರಗಳು ಹೆಚ್ಚು ಪರಿಣಾಮಕಾರಿಯಾಗಿವೆ ಎಂಬುದನ್ನು ನೆನಪಿಡಿ” ಎಂದು ತಮ್ಮ ಭಾರತ್ ಜೋಡೊ ಯಾತ್ರೆಯನ್ನು ಉಲ್ಲೇಖಿಸಿ ಅವರು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಇದೇ ಸಂದರ್ಭದಲ್ಲಿ ತನಗೆ ಅದಾನಿ ಸಮೂಹದೊಂದಿಗೆ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ ರಾಹುಲ್ ಗಾಂಧಿ, ಅದಾನಿ ಸಮೂಹದಂಥ ಏಕಸ್ವಾಮ್ಯಗಳನ್ನು ಸೃಷ್ಟಿಸುವುದಕ್ಕೆ ನನ್ನ ವಿರೋಧವಿದೆ ಎಂದು ಹೇಳಿದ್ದಾರೆ.







