ಚಹಾ ಕುಡಿಯಲು ಕಾರು ನಿಲ್ಲಿಸಿದ್ದು ಜೀವ ಉಳಿಸಿತು; ನೇಪಾಳ ಪ್ರವಾಹದಿಂದ ಪಾರಾದ ಬಗ್ಗೆ ವಿವರಿಸಿದ ಭಾರತೀಯ ಪ್ರವಾಸಿಗರು

Photo | indiatoday
ರಾಯ್ಪುರ: ನೇಪಾಳದಲ್ಲಿ ಆಗಸ್ಟ್ 26ರಂದು ಹಠಾತ್ ಪ್ರವಾಹ ಸಂಭವಿಸಿದಾಗ ಚಹಾ ಕುಡಿಯಲು 10–15 ನಿಮಿಷ ನಿಂತಿದ್ದರಿಂದ ಛತ್ತೀಸ್ ಗಢದ ರಾಯ್ಪುರದ ಐವರು ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾದರು.
ರಾಯ್ಪುರದ ಮಾನಾ ಕ್ಯಾಂಪ್ ಪ್ರದೇಶದ ನಾರಾಯಣ್ ಸೇನ್, ದಿನೇಶ್ ಓಜಾ, ಪ್ರೇಮ್ ಸಿಂಗ್ ಜಗತ್, ಯತೇಂದ್ರ ಪ್ರಕಾಶ್ ಮತ್ತು ದಿನೇಶ್ ಸಿಂಗ್ ಠಾಕೂರ್ ಅವರು ಶನಿವಾರ ಮನೆಗೆ ಮರಳಿದರು.
ಈ ಐವರು ಆಗಸ್ಟ್ 21ರಂದು ರಾಯ್ಪುರದಿಂದ ನೇಪಾಳಕ್ಕೆ ಪ್ರವಾಸ ಹೊರಟಿದ್ದರು. ಮರುದಿನ ನೇಪಾಳ ತಲುಪಿದ ಅವರು ಕಾರನ್ನು ಬಾಡಿಗೆಗೆ ಪಡೆದುಕೊಂಡಿದ್ದರು. ಪಶುಪತಿನಾಥ ದೇವಸ್ಥಾನ, ಮನೋಕಮನಾ ದೇವಸ್ಥಾನ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಅವರ ಯೋಜನೆಯಾಗಿತ್ತು.
ಚಹಾ ಕುಡಿಯುತ್ತಿದ್ದಾಗಲೇ ಪ್ರವಾಹ
ಆಗಸ್ಟ್ 26ರಂದು ಬೆಳಿಗ್ಗೆ ಸುಮಾರು 10 ಗಂಟೆಗೆ ಐವರು ಧಾಡಿಂಗ್ ಜಿಲ್ಲೆಯ ಹೋಟೆಲ್ ವೊಂದರಲ್ಲಿ ಚಹಾ ಕುಡಿಯಲು ನಿಂತಿದ್ದರು. ಇದೇ ಸಂದರ್ಭದಲ್ಲಿ ಪ್ರದೇಶದಲ್ಲಿ ಹಠಾತ್ ಪ್ರವಾಹ ಕಾಣಿಸಿಕೊಂಡಿತು.
‘ಪ್ರವಾಹ ಬಂದಾಗ ನಾವು ಚಹಾ ಕುಡಿಯಲು ನಿಂತಿದ್ದೆವು ಎಂಬುದು ನಮ್ಮ ಅದೃಷ್ಟ. ನಾವು 10–15 ನಿಮಿಷ ಮುಂಚಿತವಾಗಿ ಹೊರಟಿದ್ದರೆ ಸಿಕ್ಕಿಹಾಕಿಕೊಳ್ಳುತ್ತಿದ್ದೆವು. ನಾವು ಅಲ್ಲಿ ನಿಲ್ಲದೇ ಹೋಗಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ’ ಎಂದು ಸಲೂನ್ ನಡೆಸುತ್ತಿರುವ 53ರ ಹರೆಯದ ನಾರಾಯಣ್ ಸೇನ್ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಐವರು ಚಹಾ ಕುಡಿಯುತ್ತಿದ್ದ ಹೋಟೆಲ್ ಭಾರತೀಯರೊಬ್ಬರಿಗೆ ಸೇರಿದ್ದಾಗಿತ್ತು. ಅವರು ಪ್ರವಾಹದ ಸಂದರ್ಭದಲ್ಲಿ ಐವರಿಗೆ ನೆರವು ನೀಡಿದರು ಮತ್ತು ಆಹಾರವನ್ನೂ ಒದಗಿಸಿದರು. ಇದೇ ವೇಳೆ ಹೋಟೆಲ್ ಮುಂದಿದ್ದ ಸೇತುವೆ ಪ್ರವಾಹದಲ್ಲಿ ಕೊಚ್ಚಿಹೋಗಿರುವುದು ಅವರಿಗೆ ತಿಳಿಯಿತು.
ನಂತರ ಐವರು ಮಲೇಖು ಪ್ರದೇಶದ ಎತ್ತರದ ಸ್ಥಳಕ್ಕೆ ತೆರಳಿ ಆಶ್ರಯ ಪಡೆದರು. ತಮ್ಮ ಬಾಡಿಗೆ ಕಾರಿನಲ್ಲೇ ರಾತ್ರಿ ಕಳೆದರು. ಕೆಳಗೆ ಉಕ್ಕಿ ಹರಿಯುತ್ತಿದ್ದ ತ್ರಿಶೂಲಿ ನದಿಯನ್ನು ನೋಡುತ್ತಾ ಮುಂದಿನ ಎರಡು ದಿನಗಳನ್ನು ಆತಂಕದಲ್ಲೇ ಕಳೆದರು.
‘ಕಂಡ ದೃಶ್ಯ ವಿವರಿಸಲು ಸಾಧ್ಯವಿಲ್ಲ’
ಪೊಲೀಸ್ ಹೆಡ್ ಕಾನ್ಸ್ಟೆಬಲ್ ಆಗಿರುವ ದಿನೇಶ್ ಸಿಂಗ್ ಠಾಕೂರ್ (55), ಪ್ರವಾಹ ಸಂಭವಿಸಿದಾಗ ತಾವು ಪಶುಪತಿನಾಥ ದೇವಸ್ಥಾನದಿಂದ ಸುಮಾರು 50 ಕಿ.ಮೀ ದೂರದಲ್ಲಿದ್ದುದಾಗಿ ಹೇಳಿದರು.
‘ಹೋಟೆಲ್ನಲ್ಲಿ ಚಹಾ ಕುಡಿಯುತ್ತಿದ್ದಾಗ ಜನರು ಇದ್ದಕ್ಕಿದ್ದಂತೆ ಆತಂಕಗೊಂಡಿರುವುದನ್ನು ಗಮನಿಸಿದೆವು. ನಂತರ ಪ್ರವಾಹದಿಂದ ಉಂಟಾದ ವಿನಾಶದ ಬಗ್ಗೆ ತಿಳಿಯಿತು. ಇಡೀ ಹಳ್ಳಿಗಳು, ಕಟ್ಟಡಗಳು, ಕಚೇರಿಗಳು ಮತ್ತು ಜಲವಿದ್ಯುತ್ ಯೋಜನೆಗಳು ನಾಶವಾಗಿವೆ ಎಂದು ತಿಳಿದು ಬಂತು’ ಎಂದು ಅವರು ನೆನಪಿಸಿಕೊಂಡರು.
ನಂತರ ಐವರು ತ್ರಿಶೂಲಿ ನದಿಯ ದಡಕ್ಕೆ ತೆರಳಿ ಪ್ರವಾಹದಿಂದ ಉಂಟಾದ ಹಾನಿಯನ್ನು ನೇರವಾಗಿ ವೀಕ್ಷಿಸಿದೆವು. ನಾವು ಕಂಡ ದೃಶ್ಯವನ್ನು ಪದಗಳಲ್ಲಿ ವಿವರಿಸುವುದು ತುಂಬಾ ಕಷ್ಟ ಎಂದು ಠಾಕೂರ್ ಹೇಳಿದರು.
‘ನಾವು ಶಿವನ ಹೆಸರನ್ನು ಜಪಿಸುತ್ತಲೇ ಇದ್ದೆವು. ದೇವರ ಆಶೀರ್ವಾದದಿಂದಲೇ ನಾವು ಪಾರಾಗಿದ್ದೇವೆ ಎಂದು ಭಾವಿಸುತ್ತೇವೆ’ ಎಂದರು.
ಪ್ರವಾಹದ ಸಂದರ್ಭದಲ್ಲಿ ಸ್ಥಳೀಯ ಆಡಳಿತ ಮತ್ತು ಪೊಲೀಸರು ನೀಡಿದ ನೆರವಿಗೆ ಠಾಕೂರ್ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯುತ್ ಮತ್ತು ನೀರಿನ ಸಂಪರ್ಕ ಇರಲಿಲ್ಲ. ಆದರೂ ಆಡಳಿತ ಮತ್ತು ಪೊಲೀಸರು ಅವರಿಗೆ ನೆರವು ನೀಡಿದರು. ಎತ್ತರದ ಪ್ರದೇಶದಲ್ಲಿರುವುದರಿಂದ ಚಿಂತಿಸಬೇಕಾಗಿಲ್ಲ ಎಂದು ಅಧಿಕಾರಿಗಳು ಧೈರ್ಯ ತುಂಬಿದ್ದರು.
ಪ್ರವಾಹ ಪೀಡಿತ ಪ್ರದೇಶದಲ್ಲಿದ್ದರೂ ಐವರು ಭಾರತದಲ್ಲಿದ್ದ ತಮ್ಮ ಕುಟುಂಬದವರೊಂದಿಗೆ ಇಂಟರ್ನೆಟ್ ಮೂಲಕ ಸಂಪರ್ಕದಲ್ಲಿದ್ದರು. ತಮ್ಮ ಸ್ಥಳವನ್ನು ಹಂಚಿಕೊಳ್ಳಲು ಭಾರತ ಸರಕಾರ ಒದಗಿಸಿದ್ದ ಸಹಾಯವಾಣಿಯನ್ನೂ ಬಳಸಿದರು.
‘ಅಲ್ಲಿ ಇಂಟರ್ನೆಟ್ ಸೇವೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿತ್ತು. ಹೀಗಾಗಿ ನಾವು ಕುಟುಂಬದವರೊಂದಿಗೆ ಸಂಪರ್ಕದಲ್ಲಿದ್ದೆವು ಮತ್ತು ಭಯಭೀತರಾಗಲಿಲ್ಲ’ ಎಂದು ಠಾಕೂರ್ ಹೇಳಿದರು.
ರಾಖಿ ಕಟ್ಟಿದ ಮಹಿಳಾ ಭದ್ರತಾ ಸಿಬ್ಬಂದಿ
ಆಗಸ್ಟ್ 28ರಂದು ಐವರು ಕೊನೆಗೂ ನೇಪಾಳದಿಂದ ಹೊರಬರಲು ಸಾಧ್ಯವಾಯಿತು. ಈ ವೇಳೆ ರಕ್ಷಾ ಬಂಧನದ ಹಿನ್ನೆಲೆಯಲ್ಲಿ ಸ್ಥಳೀಯ ಮಹಿಳಾ ಭದ್ರತಾ ಸಿಬ್ಬಂದಿ ಐವರಿಗೆ ರಾಖಿ ಕಟ್ಟಿದರು. ಈ ಘಟನೆ ಅವರಿಗೆ ಸಾಂತ್ವನದ ಕ್ಷಣವಾಯಿತು.
‘ರಾಖಿ ಹಬ್ಬದ ಬಳಿಕ ಪ್ರವಾಸದಿಂದ ಹಿಂದಿರುಗಬೇಕಿತ್ತು. ನಮ್ಮ ಸಹೋದರಿಯರು ಈಗಾಗಲೇ ನಮಗೆ ರಾಖಿಗಳನ್ನು ನೀಡಿದ್ದರು. ಅಲ್ಲಿದ್ದ ಮಹಿಳಾ ಭದ್ರತಾ ಸಿಬ್ಬಂದಿ ನಮ್ಮ ಕೈಗೆ ಆ ರಾಖಿಗಳನ್ನು ಕಟ್ಟಿದರು. ಅದು ಅತ್ಯಂತ ಸಾಂತ್ವನದ ಕ್ಷಣವಾಗಿತ್ತು’ ಎಂದು ಠಾಕೂರ್ ಹೇಳಿದರು.
‘ಮತ್ತೊಂದು ಪ್ರವಾಹದ ಭಯವಿತ್ತು’
ಟೈಲರಿಂಗ್ ಅಂಗಡಿ ನಡೆಸುತ್ತಿರುವ ದಿನೇಶ್ ಓಜಾ, ಪ್ರವಾಹದ ಬಳಿಕ ತಾವು ಕಂಡ ದೃಶ್ಯಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
‘ನಾವು ಕಂಡದ್ದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅನೇಕ ಮಂದಿ ಕಾಣೆಯಾದ ತಮ್ಮ ಕುಟುಂಬ ಸದಸ್ಯರನ್ನು ತೀವ್ರವಾಗಿ ಹುಡುಕುತ್ತಿದ್ದರು’ ಎಂದು ಅವರು ಹೇಳಿದರು.
ಪ್ರವಾಹ ಪೀಡಿತ ಪ್ರದೇಶದಲ್ಲಿ ಮತ್ತೊಂದು ಪ್ರವಾಹ ಸಂಭವಿಸಬಹುದೆಂಬ ಭಯವೂ ಐವರನ್ನು ಕಾಡುತ್ತಿತ್ತು.
‘ನಾವು ನಮ್ಮ ಕಾರಿನಲ್ಲೇ ಮಲಗುತ್ತಿದ್ದೆವು. ಆದರೆ ನಿಜವಾಗಿಯೂ ನಿದ್ರೆ ಬರುತ್ತಿರಲಿಲ್ಲ. ಮತ್ತೊಂದು ಪ್ರವಾಹ ಬರಬಹುದೆಂಬ ಭಯ ಯಾವಾಗಲೂ ಇತ್ತು’ ಎಂದು ಓಜಾ ಪಿಟಿಐಗೆ ತಿಳಿಸಿದರು.
‘ಕೊನೆಗೂ ನಾವು ಮನೆಗೆ ಮರಳಿರುವುದಕ್ಕೆ ಸಂತೋಷವಾಗಿದೆ’ ಎಂದು ಅವರು ಹೇಳಿದರು.






