ಮಹಾಕುಂಭ ಮೇಳದಲ್ಲಿ ಕಾಲ್ತುಳಿತಕ್ಕೆ 2,000 ಜನರು ಮೃತಪಟ್ಟಿದ್ದಾರೆ : ಶಿವಸೇನಾ ಸಂಸದ ಸಂಜಯ್ ರಾವತ್

ಸಂಜಯ್ ರಾವತ್ | Photo: PTI
ಹೊಸದಿಲ್ಲಿ: ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 2,000 ಜನರು ಮೃತಪಟ್ಟಿದ್ದಾರೆ ಎಂದು ಉದ್ಧವ್ ನೇತೃತ್ವದ ಶಿವಸೇನಾ ಸಂಸದ ಸಂಜಯ್ ರಾವತ್ ರಾಜ್ಯಸಭೆಯಲ್ಲಿ ಹೇಳಿದ್ದು, ಬಿಜೆಪಿ ಸಂಸದರು ಈ ವೇಳೆ ಸದನದಲ್ಲಿ ಕೋಲಾಹಲ ಉಂಟು ಮಾಡಿದ್ದಾರೆ.
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಭಾಗವಾಗಿ ಮಾತನಾಡಿದ ಸಂಜಯ್ ರಾವತ್, ಮಹಾಕುಂಭ ಮೇಳದಲ್ಲಿ ಕಾಲ್ತುಳಿತದಲ್ಲಿ 30 ಜನರು ಮಾತ್ರ ಮೃತಪಟ್ಟಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. 4-5 ದಿನಗಳ ಹಿಂದೆ ಕಾಲ್ತುಳಿತ ಸಂಭವಿಸಿದಾಗ, ಅದು ಕಾಲ್ತುಳಿತವಲ್ಲ ವದಂತಿಯಾಗಿದೆ ಎಂದು ಹೇಳಲಾಯಿತು, 30 ಜನರು ಮೃತಪಟ್ಟರು. ಆ ಅಂಕಿ ಅಂಶ ನಿಜವೇ? ವಾಸ್ತವವನ್ನು ಮುಚ್ಚಿಡಬೇಡಿ, ಓರ್ವ ವ್ಯಕ್ತಿ ಮೃತಪಟ್ಟರೂ ನಾವು ಜವಾಬ್ದಾರರು. ನಮ್ಮ ಕಣ್ಣಾರೆ ನೋಡಿದ್ದೇವೆ, 2,000 ಜನರು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ಕುಂಭಮೇಳವನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ, ಇದು ರಾಜಕೀಯ ಪ್ರಚಾರಕ್ಕಾಗಿ ಮಾಡಿದ ಕಾರ್ಯಕ್ರಮ. ಬೇರೆ ದೇಶಗಳಲ್ಲಿ ಆಗಿರುತ್ತಿದ್ದರೆ ಇಂತಹ ಘಟನೆಯಿಂದ ಪ್ರಧಾನಿ ಮತ್ತು ಮುಖ್ಯಮಂತ್ರಿಗಳ ರಾಜೀನಾಮೆಗೆ ಬೇಡಿಕೆ ಇಡಲಾಗುತ್ತಿತ್ತು ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಸಂಜಯ್ ರಾವತ್ ಅವರ ಆರೋಪವನ್ನು ವಿರೋಧಿಸಿ ಬಿಜೆಪಿ ಸಂಸದರು ಸದನದಲ್ಲಿ ಕೋಲಾಹಲ ಉಂಟು ಮಾಡಿದ್ದು ಈ ವೇಳೆ ಉಪಸಭಾಪತಿಗಳು ನೀವು ಯಾವುದೇ ಅಂಕಿ ಅಂಶವನ್ನು ಉಲ್ಲೇಖಿಸಿದರೆ, ಅದಕ್ಕೆ ಸ್ಪಷ್ಟೀಕರಣ ನೀಡಬೇಕು ಎಂದು ಸಂಜಯ್ ರಾವತ್ ಗೆ ಹೇಳಿದ್ದಾರೆ.