ಬಿಹಾರದಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಪ್ರತಿ ಮನೆಯ ಒಬ್ಬರಿಗೆ ಸರಕಾರಿ ನೌಕರಿ : ತೇಜಸ್ವಿ ಯಾದವ್ ಭರವಸೆ

Photo | hindustantimes
ಪಾಟ್ನಾ: ಬಿಹಾರದಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ಪ್ರತಿ ಮನೆಯ ಒಬ್ಬರಿಗೆ ಸರಕಾರಿ ನೌಕರಿ ನೀಡಲಾಗುವುದು ಎಂದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಘೋಷಿಸಿದ್ದಾರೆ. ಈ ಭರವಸೆ ಈಡೇರಿಸಲು ಸರಕಾರ ಅಧಿಕಾರಕ್ಕೆ ಬಂದ 20 ದಿನಗಳಲ್ಲಿ ಶಾಸನ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ತೇಜಸ್ವಿ ಯಾದವ್, ನಿರುದ್ಯೋಗ ಅತ್ಯಂತ ದೊಡ್ಡ ಸಮಸ್ಯೆ ಎಂಬ ಸಂಗತಿಯನ್ನು ಈ ನಾಚಿಕೆಗೇಡು ಸರಕಾರ 20 ವರ್ಷಗಳಾದರೂ ಅರ್ಥ ಮಾಡಿಕೊಳ್ಳಲೇ ಇಲ್ಲ. ಒಂದು ವೇಳೆ ವಿರೋಧ ಪಕ್ಷಗಳ ಮೈತ್ರಿಕೂಟವೇನಾದರೂ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿ ಮನೆಯ ಒಬ್ಬರಿಗೆ ಸರಕಾರಿ ನೌಕರಿ ನೀಡಲಾಗುವುದು ಎಂದು ಹೇಳಿದ್ದಾರೆ.
“ಎನ್ಡಿಎ ಮೈತ್ರಿಕೂಟದ ಪಾಲುದಾರ ಪಕ್ಷಗಳಾದ ಜೆಡಿಯು ಹಾಗೂ ಬಿಜೆಪಿ ಉದ್ಯೋಗಗಳ ಭರವಸೆ ನೀಡಿಲ್ಲ. ಬದಲಿಗೆ, ನಿರುದ್ಯೋಗ ಭತ್ಯೆಯ ಭರವಸೆ ನೀಡಿವೆ. ಆದರೆ, ಹೊಸ ಶಾಸನದ ಮೂಲಕ ಬಿಹಾರದಲ್ಲಿ ಸರಕಾರಿ ಉದ್ಯೋಗವಿಲ್ಲದ ಕುಟುಂಬಗಳು ಒಂದೊಂದು ಸರಕಾರಿ ಉದ್ಯೋಗ ಪಡೆಯಲಿವೆ. ಸರಕಾರ ರಚನೆಯಾದ ಕೇವಲ 20 ದಿನಗಳಲ್ಲಿ ನಾವು ಈ ಶಾಸನವನ್ನು ಜಾರಿಗೆ ತರುತ್ತೇವೆ. ಬಿಹಾರದಲ್ಲಿ ಎಲ್ಲಾ ಕುಟುಂಬಗಳಿಗೂ ಸರಕಾರಿ ನೌಕರಿಯನ್ನು ನಾವು ಖಾತರಿಗೊಳಿಸಲಿದ್ದೇವೆ” ಎಂದು ಹೇಳಿದ್ದಾರೆ.
ಬಿಹಾರ ವಿಧಾನಸಭೆಯ 243 ಸ್ಥಾನಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಕ್ರಮವಾಗಿ ನವೆಂಬರ್ 6 ಮತ್ತು 11ರಂದು ಮತದಾನ ನಡೆಯಲಿದೆ. ಬಳಿಕ ನವೆಂಬರ್ 14ರಂದು ಫಲಿತಾಂಶ ಘೋಷಣೆಯಾಗಲಿದೆ.







