ತೆಲಂಗಾಣ | ಸುರಂಗದ ಮೇಲಿನ ಜಲಚರಗಳು, ಸಡಿಲ ಮಣ್ಣಿನಿಂದ ಸುರಂಗ ಕುಸಿತ?

Credit: SNV Sudhir
ನಾಗರಕರ್ನೂಲ್: ಜಲಚರಗಳನ್ನು ಹೊಂದಿರುವ ತಪ್ಪು ಭೌಗೋಳಿಕ ಮಾರ್ಗದಲ್ಲಿ ಸುರಂಗ ಕೊರೆಯುತ್ತಿರುವುದರಿಂದ, ಸುರಂಗದ ಮೇಲಿನ ಮಣ್ಣು ಸಡಿಲವಾಗಿ ಶ್ರೀಶೈಲಂ ಎಡ ದಂಡೆ ಕಾಲುವೆ ಸುರಂಗದ ಒಂದು ಪಾರ್ಶ್ವ ಕುಸಿದು ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
ಶನಿವಾರ ನಿರ್ಮಾಣ ಹಂತದಲ್ಲಿರುವ ಸುರಂಗದ ಪಾರ್ಶ್ವವೊಂದು ಕುಸಿದು ಬಿದ್ದು ಇಲ್ಲಿಗೆ ಮೂರು ದಿನಗಳಾಗಿದ್ದು, ಸುರಂಗದೊಳಗೆ ಸಿಲುಕಿರುವ ಎಂಟು ಕಾರ್ಮಿಕರನ್ನು ರಕ್ಷಿಸಲು ರಕ್ಷಣಾ ತಂಡಗಳು ಸಮಯದೊಂದಿಗೆ ಹೋರಾಟ ನಡೆಸುತ್ತಿವೆ.
“ಅಲ್ಲಿ ನಿರಂತರವಾಗಿ ನೀರು ತೊಟ್ಟಿಕ್ಕುತ್ತಿದೆ. ಸುಮಾರು ಎರಡು ಕಿಮೀವರೆಗೆ ಮೂರು ಅಡಿಗಿಂತಲೂ ಹೆಚ್ಚು ನೀರು ನಿಂತಿದೆ. ನೀರನ್ನು ಸುರಂಗದಿಂದ ಹೊರ ಹಾಕಿದ ನಂತರವೂ ಅಲ್ಲಿ ನೀರು ಶೇಖರಣೆಯಾಗುತ್ತಿದೆ. ಸುರಂಗ ಕೊರೆಯುವ ಸಂದರ್ಭದಲ್ಲಿ ಇದು ಸಾಮಾನ್ಯ ಸಂಗತಿಯಾಗಿದ್ದರೂ, ಈ ವಿದ್ಯಮಾನದಿಂದ ನಾವು ಆಶ್ಚರ್ಯಚಕಿತರಾಗಿದ್ದೇವೆ” ಎಂದು ಈ ಮುನ್ನ ಶ್ರೀಶೈಲಂ ಎಡದಂಡೆ ಕಾಲುವೆ ಸುರಂಗ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸಿದ್ದ ಸಿವಿಲ್ ಗುತ್ತಿಗೆದಾರರೊಬ್ಬರು Deccan Herald ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಸುರಂಗ ಕುಸಿತದ ಕುರಿತು ಶನಿವಾರ ಬೆಳಗ್ಗೆ ಕಾರ್ಮಿಕರು ದೂರು ನೀಡಿದ ನಂತರ, ಸುರಂಗದ ಬಳಿಯೇ ವಾಸಿಸುತ್ತಿರುವ ಆ ಗುತ್ತಿಗೆದಾರರು ಘಟನಾ ಸ್ಥಳಕ್ಕೆ ಧಾವಿಸಿದ್ದರು. ಅಂದಿನಿಂದ ಅವರು ಘಟನಾ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಕಾಕತಾಳೀಯವೆಂಬಂತೆ, ಸುರಂಗದಲ್ಲಿ ನೀರು ಸೋರಿಕೆಯಾಗುತ್ತಿರುವುದನ್ನು ರಾಬಿನ್ ಕಂಪನಿಯ ತಂಡವು ಗಮನಿಸಿದರೂ, ಅವರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎನ್ನಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಸಂಜೆ 6.45ರ ಪಾಳಿಗೆ ಜೊತೆಗೂಡಿದ್ದ ಕಾರ್ಮಿಕರು, ರಾತ್ರಿ ಸುಮಾರು 8 ಗಂಟೆಯ ವೇಳೆಗೆ ಸುರಂಗದೊಳಗೆ 14 ಕಿಮೀ ಹೋಗಿದ್ದರು. ಸುರಂಗ ಕುಸಿತವು ಶನಿವಾರ ಬೆಳಗ್ಗೆ ಸುಮಾರು 8 ಗಂಟೆಗೆ ಸಂಭವಿಸಿತ್ತು ಎಂದು ಹೇಳಲಾಗಿದೆ.
ಅವರು ಸುರಂಗದೊಳಗೆ ಕೊರೆಯಲು ಪ್ರಾರಂಭಿಸುತ್ತಿದ್ದಂತೆಯೆ, ಭಾರಿ ಶಬ್ದದ ಅವಘಡ ಸಂಭವಿಸಿದ್ದು, ಬಹುತೇಕ ಕಾರ್ಮಿಕರು ಅಲ್ಲಿಂದ ಹೊರಗೋಡಿ ಬಂದಿದ್ದಾರೆ. ಆದರೆ, ಸುರಂಗ ಕೊರೆಯುವ ಯಂತ್ರ(ಟಿಬಿಎಂ)ದ ಸಮೀಪವಿದ್ದ ಎಂಟು ಮಂದಿ ಕಾರ್ಮಿಕರು ತಪ್ಪಿಸಿಕೊಳ್ಳಹಲಾಗಿಲ್ಲ ಹಾಗೂ ಅವರು ಅಲ್ಲಿಯೇ ಸಿಲುಕಿಕೊಂಡರು ಎನ್ನಲಾಗಿದೆ.
ಜೇಪೀ ಅಸೋಸಿಯೇಟ್ಸ್ ಸಂಸ್ಥೆಯೊಂದಿಗೆ ಸುರಂಗ ಕೊರೆಯುವ ಯಂತ್ರಗಳಿಗೆ ವಿಶ್ವವಿಖ್ಯಾತವಾಗಿರುವ ಅಮೆರಿಕದ ರಾಬಿನ್ಸ್ ಕಂಪನಿ ಶ್ರೀಶೈಲಂ ಎಡ ದಂಡೆ ಕಾಲುವೆ ಕಾಮಗಾರಿಯನ್ನು ನಡೆಸುತ್ತಿದೆ. ಸುರಂಗ ಮಾರ್ಗದ ಕೆಲಸವನ್ನು ಎರಡೂ ಕಡೆಯಿಂದ ನಡೆಸಲಾಗುತ್ತಿದ್ದು, ಇನ್ನು 10 ಕಿಮೀ ಮಾತ್ರ ಕೊರೆಯುವ ಕೆಲಸ ಬಾಕಿ ಇದೆ.
ಮಣ್ಣಿನೊಂದಿಗೆ ನೀರು ಕೂಡಾ ಸೋರಿಕೆಯಾಗುತ್ತಿರುವುದರಿಂದ, ಸುರಂಗದೊಳಗೆ 14 ಕಿಮೀಯಷ್ಟು ದೂರವಿರುವ ಸ್ಥಳಕ್ಕೆ ತಲುಪಲು ರಕ್ಷಣಾ ತಂಡಗಳಿಗೆ ಅಡ್ಡಿಯಾಗುತ್ತಿದೆ.
2023ರಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ, ಸುಮಾರು ಐದು ವರ್ಷಗಳಿಂದ ತಡೆಹಿಡಿಯಲಾಗಿದ್ದ ಈ ಯೋಜನೆಯನ್ನು ಕಳೆದ ವಾರವಷ್ಟೆ ಪುನಾರಂಭಗೊಳಿಸಲಾಗಿತ್ತು. ವೈ.ಎಸ್.ರಾಜಶೇಖರ್ ರೆಡ್ಡಿ ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ ಸರಕಾರ ಕೈಗೆತ್ತಿಕೊಂಡಿದ್ದ ಈ ಯೋಜನೆಯನ್ನು ತಾಂತ್ರಿಕ ಸಮಸ್ಯೆಗಳನ್ನು ಮುಂದುಮಾಡಿ ಬಿಆರ್ಎಸ್ ಸರಕಾರ ತಡೆ ಹಿಡಿದಿತ್ತು.
ಅವಿಭಜಿತ ಮಹಬೂಬ್ ನಗರ ಹಾಗೂ ನಲಗೊಂಡ ಜಿಲ್ಲೆಗಳ ಸುಮಾರು 4 ಲಕ್ಷ ಎಕರೆ ಭೂಮಿ ಹಾಗೂ ಗ್ರಾಮಸ್ಥರಿಗೆ ಏತ ನೀರಾವರಿಯ ಮೂಲಕ ನೀರು ಒದಗಿಸುವ ಶ್ರೀಶೈಲಂ ಎಡ ದಂಡೆ ಕಾಲುವೆ ಯೋಜನೆಯ ಭಾಗವಾಗಿ ಈ ಸುರಂಗವನ್ನು ಕೊರೆಯಲಾಗುತ್ತಿದೆ. ನಾಗರಕರ್ನೂಲ್ ಜಿಲ್ಲೆಯಲ್ಲಿನ ಅಮ್ರಾಬಾದ್ ಹುಲಿ ಸಂರಕ್ಷಿತಾರಣ್ಯದ ಸುಮಾರು 400 ಮೀಟರ್ ಕೆಳಗೆ ಈ ಸುರಂಗ ಮಾರ್ಗ ನಿರ್ಮಾಣವಾಗುತ್ತಿದೆ.







