ಬಿರುಸು ಪಡೆದ ತೆಲಂಗಾಣ ರಾಜಕೀಯ: ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ?
ಹೈದರಾಬಾದ್: ತೆಲಂಗಾಣದಲ್ಲಿ ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಪರ ಅಲೆ ಇದೆ ಎನ್ನುವ ಸುಳಿವನ್ನು ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ನೀಡಿದ ಬೆನ್ನಲ್ಲೇ ಪುಟ್ಟ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಡಿಸೆಂಬರ್ 3ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದ್ದು, ನಿಕಟ ಪೈಪೋಟಿ ಉಂಟಾದಲ್ಲಿ ತನ್ನ ಪಕ್ಷದ ಶಾಸಕರನ್ನು ಆಡಳಿತಾರೂಢ ಪಕ್ಷ ಸೆಳೆದುಕೊಳ್ಳದಂತೆ ತಡೆಯುವ ಸಲುವಾಗಿ ಎಲ್ಲ ವಿಜೇತ ಅಭ್ಯರ್ಥಿಗಳನ್ನು ಬೆಂಗಳೂರಿಗೆ ಸ್ಥಳಾಂತರಿಸಲು ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿದೆ.
ರಾಜ್ಯದಲ್ಲಿ ಪಕ್ಷ ನಿಚ್ಚಳ ಬಹುಮತ ಪಡೆಯುವ ವಿಶ್ವಾಸವನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಎ.ರೇವನಾಥ್ ರೆಡ್ಡಿ ವ್ಯಕ್ತಪಡಿಸಿದ್ದು, ಭಾನುವಾರ ಮತಗಳ ಎಣಿಕೆ ಕಾರ್ಯ ಮುಗಿದ ತಕ್ಷಣ ಪಕ್ಷದ ಎಲ್ಲ ನೂತನ ಶಾಸಕರನ್ನು ಬೆಂಗಳೂರಿಗೆ ಸ್ಥಳಾಂತರಿಸುವ ನಿರ್ಧಾರವನ್ನು ಪಕ್ಷ ಕೈಗೊಂಡಿದೆ ಎಂದು ಉನ್ನತ ಮೂಲಗಳು ಹೇಳಿವೆ.
ಕಾಂಗ್ರೆಸ್ ಪಕ್ಷ 70 ಸ್ಥಾನಗಳಿಗಿಂತ ಕಡಿಮೆ ಪಡೆದರೆ, ಎಲ್ಲ ಶಾಸಕರನ್ನು ಬೆಂಗಳೂರಿಗೆ ಅಥವಾ ಬೇರೆ ಕಡೆಗಳಿಗೆ ಸ್ಥಳಾಂತರಿಸಿ, ಯಾವುದೇ ಹೊಟೇಲ್ ಅಥವಾ ರೆಸಾರ್ಟ್ಗೆ ಕಳುಹಿಸಲಿದೆ ಎಂದು ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.
119 ಸದಸ್ಯಬಲದ ವಿಧಾನಸಭೆಯಲ್ಲಿ ಬಹುಮತ ಪಡೆಯಲು 60 ಸ್ಥಾನ ಗೆಲ್ಲುವ ಅಗತ್ಯವಿದೆ. ಕೆಲ ನಿರ್ಗಮನ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷಕ್ಕೆ ಸರಳ ಬಹುಮತ ನಿರೀಕ್ಷಿಸಿದ್ದು, ಮತ್ತೆ ಕೆಲವು ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ ಪಕ್ಷ ನಿಚ್ಚಳ ಗೆಲುವು ಸಾಧಿಸಲಿದೆ. ಈ ಹಿನ್ನೆಲೆಯಲ್ಲಿ ಜಯ ಸಾಧಿಸುವ ಸಾಧ್ಯತೆ ಇರುವ ಪಕ್ಷದ ಅಭ್ಯರ್ಥಿಗಳ ಬಳಿಗೆ ಸಮನ್ವಯಕಾರರನ್ನು ಕಳುಹಿಸಲಾಗಿದೆ. ಚುನಾವಣಾ ಅಧಿಕಾರಿ ಗೆಲುವಿನ ಪ್ರಮಾಣಪತ್ರ ನೀಡಿದ ತಕ್ಷಣ ಅವನ್ನು ಬೆಂಗಳೂರಿಗೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಶಾಸಕರ ಸ್ಥಳಾಂತರ ಅಗತ್ಯವಾದಲ್ಲಿ, ಕರ್ನಾಟಕದ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಮುಖ ಪಾತ್ರ ವಹಿಸಲಿದ್ದಾರೆ. 2018ರ ಕರ್ನಾಟಕ ವಿಧಾನಸಭಾ ಚುನವಣೆಯ ವೇಳೆ ಇಂಥದ್ದೇ ಪರಿಸ್ಥಿತಿ ತಲೆದೋರಿದಾಗ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಯಶಸ್ವಿಯಾಗಿ ನಿಭಾಯಿಸಿದ್ದರು.