ಪೊಲೀಸ್ ಅಧಿಕಾರಿಗೆ ಬೆದರಿಕೆ ಆರೋಪ: ಎಐಎಂಐಎಂ ನಾಯಕ ಅಕ್ಬರುದ್ದೀನ್ ಉವೈಸಿ ವಿರುದ್ಧ ಪ್ರಕರಣ ದಾಖಲು
ಅಕ್ಬರುದ್ದೀನ್ ಉವೈಸಿ (Photo: PTI)
ಹೈದರಾಬಾದ್: ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಎಐಎಂಐಎಂ ನಾಯಕ ಹಾಗೂ ಚಂದ್ರಯಾನ್ ಗುಟ್ಟ ಕ್ಷೇತ್ರದ ಶಾಸಕ ಅಕ್ಬರುದ್ದೀನ್ ಉವೈಸಿ ವಿರುದ್ಧ ಸಂತೋಷ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೈದರಾಬಾದ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂತೋಷ್ ನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪಿ. ಶಿವಚಂದ್ರ ದೂರುದಾರರಾಗಿದ್ದಾರೆ.
ಮಂಗಳವಾರ ರಾತ್ರಿ ತಮ್ಮ ಸ್ವಕ್ಷೇತ್ರ ಚಂದ್ರಯಾನ್ ಗುಟ್ಟದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಶಾಸಕ ಅಕ್ಬರುದ್ದೀನ್ ಉವೈಸಿಗೆ ಪ್ರಚಾರದ ಗಡುವಿನ ಅವಧಿಯ ಕುರಿತು ಇನ್ಸ್ ಪೆಕ್ಟರ್ ಶಿವಚಂದ್ರ ನೆನಪಿಸಿದ್ದಾರೆ. ಭಾರತೀಯ ಚುನಾವಣಾ ಆಯೋಗದ ಪ್ರಕಾರ, ಚುನಾವಣಾ ಪ್ರಚಾರವು ರಾತ್ರಿ 10 ಗಂಟೆಗೆ ಅಂತ್ಯಗೊಳ್ಳಬೇಕಿದೆ.
ಇದರಿಂದ ಅಸಮಾಧಾನಗೊಂಡಂತೆ ಕಂಡುಬಂದ ಅಕ್ಬರುದ್ದೀನ್ ಉವೈಸಿ, “ಇನ್ಸ್ ಪೆಕ್ಟರ್ ಸಾಹೇಬರೆ, ನನ್ನ ಕೈಯಲ್ಲಿ ಗಡಿಯಾರವಿದೆ. ನೀವು ಇಲ್ಲಿಂದ ನಡೆಯಿರಿ, ದಯವಿಟ್ಟು ನಡೆಯಿರಿ” ಎಂದು ಇನ್ಸ್ ಪೆಕ್ಟರ್ ಅವರನ್ನು ವೇದಿಕೆಯಿಂದ ಕೆಳಗಿಳಿಸಿದ್ದಾರೆ.
“ನನ್ನ ಮೇಲೆ ಗುಂಡು ಹಾಗೂ ಚಾಕುವಿನ ದಾಳಿ ನಡೆದ ನಂತರ ನಾನು ದುರ್ಬಲನಾಗಿದ್ದೇನೆ ಎಂದು ನೀವು ಭಾವಿಸಿದ್ದೀರಾ? ಈಗಲೂ ನನಗೆ ಧೈರ್ಯವಿದೆ. ನನಗೆ ಈಗಲೂ ಐದು ನಿಮಿಷಗಳ ಸಮಯಾವಕಾಶವಿದೆ. ಆ ಐದು ನಿಮಿಷ ನಾನು ಮಾತನಾಡಲಿದ್ದೇನೆ. ಜನ ಓಡುವಂತೆ ಮಾಡಲು ಒಂದು ಸಣ್ಣ ಸೂಚನೆ ನೀಡಿದರೆ ಸಾಕು” ಎಂದು ಇನ್ಸ್ ಪೆಕ್ಟರ್ ಗೆ ಬೆದರಿಕೆ ಒಡ್ಡಿರುವ ಅಕ್ಬರುದ್ದೀನ್, “ನೀವು ಆರೆಸ್ಸೆಸ್ ನ ಕೈಗೊಂಬೆ” ಎಂದು ಹೇಳಿದ್ದಾರೆ.
ಅಕ್ಬರುದ್ದೀನ್ ನನ್ನ ನ್ಯಾಯಬದ್ಧ ಕರ್ತವ್ಯವನ್ನು ನಿರ್ವಹಿಸಲು ಅಡ್ಡಿಪಡಿಸಿದ್ದು, ಸಾರ್ವಜನಿಕ ಸಭೆಯಲ್ಲಿ ಎರಡು ಸಮುದಾಯಗಳ ನಡುವೆ ದ್ವೇಷವನ್ನು ಪ್ರಚೋದಿಸಲು ಯತ್ನಿಸಿದ್ದಾರೆ ಎಂದು ಇನ್ಸ್ ಪೆಕ್ಟರ್ ಶಿವಚಂದ್ರ ದೂರು ನೀಡಿದ್ದಾರೆ.