ಬಿಆರ್ಎಸ್ ಪ್ರಣಾಳಿಕೆ ಬಿಡುಗಡೆ: 400 ರೂ.ಗೆ ಎಲ್ಪಿಜಿ ಸಿಲಿಂಡರ್, ಹೆಚ್ಚಿನ ಸಾಮಾಜಿಕ ಭದ್ರತಾ ಪಿಂಚಣಿ ಭರವಸೆ

Photo : twitter
ಹೈದರಾಬಾದ್: ಸಾಮಾಜಿಕ ಭದ್ರತಾ ಪಿಂಚಣಿ ಮೊತ್ತ ಏರಿಕೆ, ರೈತರಿಗೆ ‘ರೈತಬಂಧು ’ಹೂಡಿಕೆ ಯೋಜನೆಯಡಿ ಹಣಕಾಸು ನೆರವು ಹೆಚ್ಚಳ ಮತ್ತು 400 ರೂ.ಗೆ ಎಲ್ಪಿಜಿ ಸಿಲಿಂಡರ್ ಪೂರೈಕೆ ಇವು ನ.30ರಂದು ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆಗಾಗಿ ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿ (ಬಿ ಆರ್ ಎಸ್) ನೀಡಿರುವ ಕೆಲವು ಭರವಸೆಗಳು.
ರವಿವಾರ ಬಿ ಆರ್ ಎಸ್ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು, ನೂತನ ಸರಕಾರ ರಚನೆಯಾದ ಬಳಿಕ ಐದಾರು ತಿಂಗಳುಗಳಲ್ಲಿ ಎಲ್ಲ ಭರವಸೆಗಳನ್ನು ಈಡೇರಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಪ್ರಣಾಳಿಕೆಯಲ್ಲಿನ ಪ್ರಮುಖ ಅಂಶಗಳು
* ರಾಜ್ಯದಲ್ಲಿ ಬಿಪಿಎಲ್ ವರ್ಗದ ಎಲ್ಲ 93 ಲ.ಕುಟುಂಬಗಳಿಗೆ ಐದು ಲ.ರೂ.ಗಳ ಜೀವವಿಮೆ ಸೌಲಭ್ಯ
* ಈಗ 2,016 ರೂ.ಗಳಿರುವ ಸಾಮಾಜಿಕ ಭದ್ರತಾ ಪಿಂಚಣಿ ಮೊತ್ತ ಬಿ ಆರ್ ಎಸ್ ಅಧಿಕಾರಕ್ಕೆ ಬಂದ ಮೊದಲ ವರ್ಷದಲ್ಲಿ 3,016 ರೂ.ಗೆ ಹೆಚ್ಚಳ ಮತ್ತು ಮುಂದಿನ ನಾಲ್ಕು ವರ್ಷಗಳಲ್ಲಿ ಕ್ರಮೇಣ ಮಾಸಿಕ 5,000 ರೂ.ಗಳಿಗೆ ಏರಿಕೆ
* ವಿಕಲಾಂಗರಿಗೆ ನೀಡುತ್ತಿರುವ 4,016 ರೂ.ಗಳ ಪಿಂಚಣಿ ಮುಂದಿನ ಐದು ವರ್ಷಗಳಲ್ಲಿ 6,016 ರೂ.ಗಳಿಗೆ ಏರಿಕೆ
* ರೈತಬಂಧು ಯೋಜನೆಯಡಿ ರೈತರು ಪ್ರತಿ ಎಕರೆಗೆ ವಾರ್ಷಿಕ ಪಡೆಯುತ್ತಿರುವ 10,000 ರೂ.ಗಳ ಹಣಕಾಸು ನೆರವು ಮುಂದಿನ ಐದು ವರ್ಷಗಳಲ್ಲಿ ಕ್ರಮೇಣ 16,000 ರೂ.ಗಳಿಗೆ ಹೆಚ್ಚಳ
* ಅರ್ಹ ಫಲಾನುಭವಿಗಳಿಗೆ 400 ರೂ.ಗಳಲ್ಲಿ ಎಲ್ಪಿಜಿ ಸಿಲಿಂಡರ್
* ಆರೋಗ್ಯ ಶ್ರೀ ಯೋಜನೆಯಡಿ ಎಲ್ಲ ಅರ್ಹ ಫಲಾನುಭವಿಗಳಿಗೆ ಆರೋಗ್ಯ ವಿಮೆ ರಕ್ಷಣೆಯ ಮೊತ್ತ ಈಗಿನ ಐದು ಲ.ರೂ.ಗಳಿಂದ 15 ಲ.ರೂ.ಗಳಿಗೆ ಏರಿಕೆ
* ಎಲ್ಲ ವಸತಿ ಜ್ಯೂನಿಯರ್ ಕಾಲೇಜುಗಳು ವಸತಿ ಪದವಿ ಶಾಲೆಗಳಾಗಿ ಪರಿವರ್ತನೆ







