ತೆಲುಗುದೇಶಂ, ಅಕಾಲಿದಳ ಮನವೊಲಿಕೆಗೆ ಎನ್ ಡಿಎ ಕಸರತ್ತು

Photo: PTI
ಹೊಸದಿಲ್ಲಿ: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಜಯ ಗಳಿಸಿದ ಬಳಿಕ ವಿರೋಧ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ನಡೆಯುತ್ತಿದ್ದ ಪ್ರಯತ್ನಕ್ಕೆ ತಣ್ಣೀರೆರಚುವ ಸಲುವಾಗಿ ಎನ್ಸಿಪಿ ಪಕ್ಷವನ್ನು ವಿಭಜಿಸಿದ ಬೆನ್ನಲ್ಲೇ ಎನ್ಡಿಎ ಬಲಗೊಳಿಸುವ ಕಸರತ್ತು ಆರಂಭವಾಗಿದೆ.
ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಅಜಿತ್ ಪವಾರ್ ಹಾಗೂ ಇತರ ಎಂಟು ಮಂದಿ ಶಾಸಕರು ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಸರ್ಕಾರ ಸೇರಿದ ಬಳಿಕ ಪಕ್ಷದ ಮುಖಂಡ ಅಮಿತ್ ಶಾ ಅವರು ವಿಕಾಸಶೀಲ ಇನ್ಸಾನ್ ಪಾರ್ಟಿಯ ಮುಕೇಶ್ ಸಹ್ನಿ, ಭಾರತೀಯ ಸಮಾಜ ಪಾರ್ಟಿಯ ಓಂಪ್ರಕಾಶ್ ರಾಜ್ಬ್ಹಾರ್ ಅವರನ್ನು ಕ್ರಮವಾಗಿ ಬಿಹಾರ ಹಾಗೂ ಉತ್ತರ ಪ್ರದೇಶದಲ್ಲಿ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.
ಅದೇ ರೀತಿ ಶಿರೋಮಣಿ ಅಕಾಲಿದಳ, ತೆಲುಗುದೇಶಂ ಪಾರ್ಟಿ ಹಾಗೂ ಬಿಹಾರದ ಹಿಂದುಳಿದ ವರ್ಗಗಳ ಮುಖವಾದ ಉಪೇಂದ್ರ ಖುಷ್ವಾಹ ಅವರನ್ನು ಮನವೊಲಿಸಿ ಎನ್ಡಿಎ ತೆಕ್ಕೆಗೆ ತರುವ ಸಂಬಂಧ ಮಾತುಕತೆಗಳು ಪ್ರಗತಿಯಲ್ಲಿವೆ. ಈಗಾಗಲೇ ಮಹಾದಲಿತ ಮುಖಂಡ ಜಿತಿನ್ ರಾಂ ಮಾಂಜಿ ಎನ್ಡಿಎ ತೆಕ್ಕೆಗೆ ಸೇರಿದ್ದಾರೆ.
ಎನ್ಡಿಎ ಮರುಸಂಘಟನೆಗೆ ಪೂರಕವಾಗುವಂತೆ ಪ್ರಧಾನಿ ನರೇಂದ್ರ ಮೋದಿ ಸಂಪುಟ ಪುನರ್ ರಚನೆಗೂ ಚಿಂತನೆ ನಡೆಸಿದ್ದಾರೆ ಎನ್ನಲಾಗಿದ್ದು, ರಾಷ್ಟ್ರಪತಿ ದ್ರೌಪತಿ ಮುರ್ಮು ಮೂರು ದಿನಗಳ ವಿದೇಶ ಭೇಟಿ ಬಳಿಕ ರಾಜಧಾನಿಗೆ ವಾಪಸ್ಸಾಗುತ್ತಿದ್ದಂತೆ ಸಂಪುಟ ಪುನರ್ ರಚನೆಯಾಗಲಿದೆ ಎನ್ನಲಾಗುತ್ತಿದೆ. ಪ್ರಧಾನಿ ಮೋದಿ ಜುಲೈ 13-14ರಂದು ಪ್ಯಾರಿಸ್ ಗೆ ತೆರಳುವ ಮುನ್ನ ಸಂಪುಟ ಪುನರ್ ರಚನೆಯ ಸಾಧ್ಯತೆ ಇದೆ.







