ಉತ್ತರ ಪ್ರದೇಶದಲ್ಲಿ ಭೀಕರ ಹತ್ಯಾಕಾಂಡ: ನವದಂಪತಿ, ಇತರ ಮೂವರನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಯುವಕ

ಸಾಂದರ್ಭಿಕ ಚಿತ್ರ \ Photo: PTI
ಮೈನಪುರಿ: ಉತ್ತರ ಪ್ರದೇಶದ ಮೈನಪುರಿ ಜಿಲ್ಲೆಯ ಕಿಶ್ನಿ ಪೊಲೀಸ್ ಠಾಣಾ ವ್ಯಾಪ್ತಿಯ ಗೋಕುಲಪುರ ಗ್ರಾಮದಲ್ಲಿ ಶನಿವಾರ ನಸುಕಿನಲ್ಲಿ ಭೀಕರ ಹತ್ಯಾಕಾಂಡ ನಡೆದಿದೆ. ಯುವಕನೋರ್ವ ಶುಕ್ರವಾರವಷ್ಟೇ ಮದುವೆಯಾಗಿದ್ದ ತನ್ನ ಸೋದರ, ಆತನ ಪತ್ನಿ, ಕುಟುಂಬದ ಇಬ್ಬರು ಸದಸ್ಯರು ಮತ್ತು ಸ್ನೇಹಿತನನ್ನು ಅವರು ನಿದ್ರೆಯಲ್ಲಿದ್ದಾಗ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಆರೋಪಿ ಶಿವವೀರ ಯಾದವ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ಪತ್ನಿ ಮತ್ತು ಚಿಕ್ಕಮ್ಮನನ್ನೂ ಗಾಯಗೊಳಿಸಿದ್ದಾನೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೈನಪುರಿ ಎಸ್ಪಿ ವಿನೋದ ಕುಮಾರ ತಿಳಿಸಿದರು.
ಮೃತರನ್ನು ನವದಂಪತಿಗಳಾದ ಸೋನು ಯಾದವ (21) ಮತ್ತು ಆತನ ಪತ್ನಿ ಸೋನಿ (20), ಸೋನುವಿನ ಸೋದರ ಭುಲ್ಲನ್ ಯಾದವ,ಭಾವ ಸೌರಭ್ ಮತ್ತು ಸ್ನೇಹಿತ ದೀಪಕ್ (20) ಎಂದು ಗುರುತಿಸಲಾಗಿದೆ. ಈ ಕೊಲೆಗಳಿಗೆ ಕಾರಣವಿನ್ನೂ ಸ್ಪಷ್ಟಗೊಂಡಿಲ್ಲ ಮತ್ತು ತನಿಖೆಯು ಪ್ರಗತಿಯಲ್ಲಿದೆ ಎಂದು ಕುಮಾರ ತಿಳಿಸಿದರು.





