ಅರಿಯಾಲೂರು ಪಟಾಕಿ ಘಟಕದಲ್ಲಿ ಭೀಕರ ದುರಂತ: 9 ಜನ ಮೃತ್ಯು

ಸಾಂದರ್ಭಿಕ ಚಿತ್ರ PHOTO : PTI
ಚೆನ್ನೈ: ಕರ್ನಾಟಕ – ತಮಿಳುನಾಡು ಗಡಿಯ ಅತ್ತಿಬೆಲೆಯಲ್ಲಿ ಸಂಭವಿಸಿದ ಪಟಾಕಿ ದುರಂತ ಮಾಸುವ ಮುನ್ನವೇ, ತಮಿಳುನಾಡಿನ ಅರಿಯಾಲೂರು ಜಿಲ್ಲೆಯ ಪಟಾಕಿ ಘಟಕವೊಂದರಲ್ಲಿ ಸೋಮವಾರ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಕನಿಷ್ಠ ಒಂಬತ್ತು ಜನ ಮೃತಪಟ್ಟಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅರಿಯಾಲೂರು ಜಿಲ್ಲೆಯ ವೀರಾಗಲೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಸಂತಾಪ ಸೂಚಿಸಿ, ಮೃತರ ಕುಟುಂಬಗಳಿಗೆ ತಲಾ 3 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ 1 ಲಕ್ಷ ಹಾಗೂ ಸಣ್ಣಪುಟ್ಟ ಗಾಯಗಳುಗಳಿಗೆ 50 ಸಾವಿರ ಪರಿಹಾರ ಘೋಷಿಸಿದ್ದಾರೆ. ಬೆಂಕಿ ಹೊತ್ತಿಕೊಳ್ಳಲು ಕಾರಣವೇನು? ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
‘ಅವಘಡದಲ್ಲಿ ಗಾಯಗೊಂಡವರನ್ನು ತಂಜಾವೂರಿನ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ರಕ್ಷಣೆ ಮತ್ತು ಪರಿಹಾರ ಚಟುವಟಿಕೆಗಳನ್ನು ನೋಡಿಕೊಳ್ಳಲು ಸಚಿವರಾದ ಎಸ್. ಎಸ್. ಶಿವಶಂಕರ್ ಮತ್ತು ಸಿ.ವಿ. ಗಣೇಶನ್ ಅವರನ್ನು ನಿಯೋಜಿಸಲಾಗಿದೆ’ ಎಂದು ಸ್ಟಾಲಿನ್ ತಿಳಿಸಿದ್ದಾರೆ.





