POK ಗಿಲ್ಗಿಟ್ ನಲ್ಲಿ ಬಸ್ಸಿನ ಮೇಲೆ ಭಯೋತ್ಪಾದಕ ದಾಳಿ: ಇಬ್ಬರು ಯೋಧರ ಸಹಿತ ಕನಿಷ್ಠ 8 ಮಂದಿ ಮೃತ್ಯು
26 ಮಂದಿಗೆ ಗಂಭೀರ ಗಾಯ

Photo credit: X@GilgitStudentsf
ಕಾಶ್ಮೀರ, ಡಿ.3: ಪ್ರಯಾಣಿಕರ ಬಸ್ಸೊಂದರ ಮೇಲೆ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಸೇನಾ ಯೋಧರ ಸಹಿತ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದು, 26 ಮಂದಿ ಗಾಯಗೊಂಡ ಘಟನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ ಬಲ್ತಿಸ್ತಾನ್ ಪ್ರದೇಶದಲ್ಲಿ ಶನಿವಾರ ಸಂಜೆ ನಡೆದಿದೆ.
ಶನಿವಾರ ಸಂಜೆ 6:30ರ ಸುಮಾರಿಗೆ ಗಿಲ್ಗಿಟ್ ನಿಂದ ರಾವಲ್ಪಿಂಡಿಗೆ ತೆರಳುತ್ತಿದ್ದ ಬಸ್ ಚಿಲಾಸ್ ಎಂಬಲ್ಲಿಗೆ ತಲುಪಿದಾಗ ಬಸ್ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ಎದುರಿನಿಂದ ಬರುತ್ತಿದ್ದ ಟ್ರಕ್ ವೊಂದಕ್ಕೆ ಢಿಕ್ಕಿ ಹೊಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಚಿಲಾಸ್ ಜಿಲ್ಲಾಧಿಕಾರಿ ಆರಿಫ್ ಅಹ್ಮದ್, ದಾಳಿಯಿಂದ ಮೃತಪಟ್ಟ 8 ಮಂದಿಯಲ್ಲಿ 5 ಮಂದಿಯನ್ನು ಗುರುತಿಸಲಾಗಿದೆ. ಇತರ 26 ಮಂದಿ ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಬಸ್ಸಿನಲ್ಲಿದ್ದ ಇಬ್ಬರು ಸೇನಾ ಯೋಧರು ಕೂಡಾ ಸಾವನ್ನಪ್ಪಿದ್ದಾರೆ ಹಾಗೂ ವಿಶೇಷ ರಕ್ಷಣಾ ಘಟಕದ ಓರ್ವ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ದಾಳಿ ಬಳಿಕ ಉಗ್ರರು ಸ್ಥಳದಿಂದ ಪರಾರಿಯಾಗಿದ್ದಾರೆ. ದಾಳಿಯಿಂದ ಗಾಯಗೊಂಡಿರುವವರ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಆರಂಭಿಸಿರುವ ಪೊಲೀಸರು, ಭಯೋತ್ಪಾದಕರ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.







