ಕಾಂಬೋಡಿಯಾ ಮೇಲೆ ಥೈಲ್ಯಾಂಡ್ನಿಂದ ವಾಯು ದಾಳಿ

Photo credit: NDTV
ಥೈಲ್ಯಾಂಡ್ : ಕಾಂಬೋಡಿಯದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಥೈಲ್ಯಾಂಡ್ ವಾಯು ದಾಳಿಯನ್ನು ನಡೆಸಿದೆ. ಇದಕ್ಕೆ ಪ್ರತಿಯಾಗಿ ಕಾಂಬೋಡಿಯಾ ನಡೆಸಿದ ರಾಕೆಟ್ ಮತ್ತು ಫಿರಂಗಿ ದಾಳಿಗೆ ಥೈಲ್ಯಾಂಡ್ನಲ್ಲಿ ಓರ್ವ ನಾಗರಿಕ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ವಾಯುವ್ಯ ಕಾಂಬೋಡಿಯಾದ ಒಡ್ಡರ್ ಮೀಂಚೆ ಪ್ರಾಂತ್ಯದ ಗಡಿ ಪ್ರದೇಶದಲ್ಲಿರುವ ವಿವಾದಿತ ʼತಾ ಮೋನ್ ಥಾಮ್ʼ ದೇವಾಲಯದ ಬಳಿ ಸಂಘರ್ಷ ಉಂಟಾಗಿರುವುದಕ್ಕೆ ಥೈಲ್ಯಾಂಡ್ ಮತ್ತು ಕಾಂಬೋಡಿಯಾ ಪರಸ್ಪರ ದೂಷಿಸಿಕೊಂಡಿವೆ.
ಈ ಸಂಘರ್ಷ ದಶಕಗಳಿಂದಲೂ ಮುಂದುವರೆದಿದೆ. ಮೇ ತಿಂಗಳಲ್ಲಿ ಗುಂಡಿನ ಚಕಮಕಿಯಲ್ಲಿ ಕಾಂಬೋಡಿಯನ್ ಸೈನಿಕ ಮೃತಪಟ್ಟ ಬಳಿಕ ಮತ್ತೆ ಸಂಘರ್ಷ ಉದ್ಭವಿಸಿದೆ.
ಉಬೊನ್ ರಾಟ್ಚಥಾನಿ ಪ್ರಾಂತ್ಯದಿಂದ ಆರು ಜೆಟ್ಗಳನ್ನು ನಿಯೋಜಿಸಲಾಗಿದ್ದು, ಅವು ಎರಡು ಕಾಂಬೋಡಿಯನ್ ಮಿಲಿಟರಿ ಗುರಿಗಳ ಮೇಲೆ ದಾಳಿ ನಡೆಸಿದೆ ಎಂದು ಥಾಯ್ ಮಿಲಿಟರಿ ಉಪ ವಕ್ತಾರ ರಿಚಾ ಸುಕ್ಸುವಾನನ್ ಹೇಳಿದ್ದಾರೆ.
ಕಾಂಬೋಡಿಯನ್ ಫಿರಂಗಿ ಶೆಲ್ ಗಡಿಯಾಚೆಗಿನ ಮನೆಯೊಂದಕ್ಕೆ ಬಡಿದು ಓರ್ವ ನಾಗರಿಕ ಮೃತಪಟ್ಟಿದ್ದಾನೆ ಮತ್ತು ಐದು ವರ್ಷದ ಮಗು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ ಎಂದು ಥೈಲ್ಯಾಂಡ್ ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.
ʼರಾಷ್ಟ್ರದ ಸಾರ್ವಭೌಮ ಪ್ರದೇಶವನ್ನು ರಕ್ಷಿಸಲು ನಿಯೋಜಿಸಲಾದ ಕಾಂಬೋಡಿಯನ್ ಪಡೆಗಳ ಮೇಲೆ ಸಶಸ್ತ್ರ ದಾಳಿ ನಡೆಸುವ ಮೂಲಕ ಥೈಲ್ಯಾಂಡ್ ಸೇನೆಯು ಕಾಂಬೋಡಿಯಾ ಸಾಮ್ರಾಜ್ಯದ ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸಿದೆʼ ಎಂದು ಕಾಂಬೋಡಿಯಾ ರಕ್ಷಣಾ ಸಚಿವಾಲಯದ ವಕ್ತಾರೆ ಮಾಲಿ ಸೊಚೆಟಾ ತಿಳಿಸಿದ್ದಾರೆ.







