ಥಾಣೆ ಗಲಭೆ ಪ್ರಕರಣ | 10 ವರ್ಷಗಳ ಬಳಿಕ ನ್ಯಾಯಾಲಯದಿಂದ ಎಲ್ಲ 17 ಆರೋಪಿಗಳ ಖುಲಾಸೆ

ಸಾಂದರ್ಭಿಕ ಚಿತ್ರ
ಥಾಣೆ(ಮಹಾರಾಷ್ಟ್ರ),ಸೆ.14: ಹತ್ತು ವರ್ಷಗಳ ಹಿಂದೆ ಥಾಣೆ ಜಿಲ್ಲೆಯ ದಿವಾ ರೈಲ್ವೆ ನಿಲ್ದಾಣದಲ್ಲಿ ನಡೆದಿದ್ದ ಗಲಭೆ ಪ್ರಕರಣದಲ್ಲಿ ದುಷ್ಕರ್ಮಿಗಳ ಗುರುತಿಸುವಿಕೆಯಲ್ಲಿ ಸಂಪೂರ್ಣ ವೈಫಲ್ಯ ಮತ್ತು ಗಂಭೀರ ತನಿಖಾ ಲೋಪಗಳನ್ನು ಉಲ್ಲೇಖಿಸಿರುವ ಇಲ್ಲಿಯ ನ್ಯಾಯಾಲಯವು ಎಲ್ಲ 17 ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಗಲಭೆಯಲ್ಲಿ ಪೋಲಿಸ್ ಸಿಬ್ಬಂದಿಗಳು ಗಾಯಗೊಂಡಿದ್ದರು ಮತ್ತು ಸಾರ್ವಜನಿಕ ಆಸ್ತಿಗೆ ಹಾನಿಯುಂಟಾಗಿತ್ತು.
ಆರೋಪಿಗಳ ತಪ್ಪನ್ನು ಶಂಕಾತೀತವಾಗಿ ಸಾಬೀತು ಮಾಡಲು ಸಾಕಷ್ಟು ಪುರಾವೆಗಳನ್ನು ಪ್ರಾಸಿಕ್ಯೂಶನ್ ಸಲ್ಲಿಸಿಲ್ಲ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ವಸುಧಾ ಎಲ್.ಭೋಸಲೆ ಅವರು ತನ್ನ ಸೆ.8ರ ತೀರ್ಪಿನಲ್ಲಿ ಹೇಳಿದ್ದಾರೆ. ತೀರ್ಪಿನ ಪ್ರತಿಯನ್ನು ರವಿವಾರ ಲಭ್ಯಗೊಳಿಸಲಾಗಿದೆ.
ಘಟನೆಯು ಜ.2,2015ರಂದು ನಡೆದಿತ್ತು. ಪ್ರಾಸಿಕ್ಯೂಷನ್ ಪ್ರಕಾರ ದಿವಾ ರೈಲು ನಿಲ್ದಾಣದಲ್ಲಿ ಜಮಾಯಿಸಿದ್ದ ಶಸ್ತ್ರಸಜ್ಜಿತ ಗುಂಪು ಸಾರ್ವಜನಿಕ ಆಸ್ತಿಗೆ ಹಾನಿಯನ್ನುಂಟು ಮಾಡಿತ್ತು ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸುತ್ತಿದ್ದ ಪೋಲಿಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿತ್ತು.
ಈ ಬಗ್ಗೆ ಎಫ್ಐಆರ್ ದಾಖಲಿಸಿಕೊಂಡಿದ್ದ ಪೋಲಿಸರು 19 ಜನರನ್ನು ಬಂಧಿಸಿದ್ದರು. ಈ ಪೈಕಿ ಸಂತೋಷ ಪಾಂಡುರಂಗ ಸಪ್ಕಾಲ್ ಮತ್ತು ಬಿಂಟು ಮಹಾವೀರ ಚೌಹಾಣ ವಿಚಾರಣೆಯ ಅವಧಿಯಲ್ಲಿ ಮೃತಪಟ್ಟಿದ್ದರು.
ಎಲ್ಲ ಸಾಕ್ಷಿಗಳು ಗಾಯಗೊಂಡ ಅಥವಾ ನಿವೃತ್ತ ಪೋಲಿಸ್ ಅಧಿಕಾರಿಗಳಾಗಿದ್ದಾರೆ ಮತ್ತು ಪಾಟೀ ಸವಾಲಿನಲ್ಲಿ ಒಂದೇ ರೀತಿಯ ಸಾಕ್ಷ್ಯವನ್ನು ನುಡಿದಿದ್ದಾರೆ. ಒಬ್ಬನೇ ಒಬ್ಬ ಸಾಕ್ಷಿಯೂ ನಿರ್ದಿಷ್ಟ ಆರೋಪಿಯನ್ನು ಗುರುತಿಸಿಲ್ಲ. ಎಲ್ಲ ಸಾಕ್ಷಿಗಳ ಹೇಳಿಕೆಗಳು ಸಾಮೂಹಿಕವಾಗಿ ‘ಅನಾಮಿಕ ಗುಂಪಿನ’ ವಿರುದ್ಧವಾಗಿದ್ದವು,ಆದರೆ ಕಾನೂನು ವೈಯಕ್ತಿಕ ಹೊಣೆಗಾರಿಕೆಯನ್ನು ನಿಗದಿಗೊಳಿಸುವುದನ್ನು ಅಗತ್ಯವಾಗಿಸಿದೆ. ಎಲ್ಲ ಸಾಕ್ಷಿಗಳು ಪೋಲಿಸರೇ ಆಗಿದ್ದಾರೆ. ಪ್ರಾಸಿಕ್ಯೂಷನ್ ಯಾವುದೇ ಪ್ರಯಾಣಿಕ,ಅಂಗಡಿಕಾರ ಅಥವಾ ರೈಲ್ವೆ ಸಿಬ್ಬಂದಿಯನ್ನು ಸಾಕ್ಷಿಯಾಗಿ ವಿಚಾರಣೆಗೊಳಪಡಿಸಿಲ್ಲ ಎಂದು ನ್ಯಾಯಾಲಯವು ಹೇಳಿತು.
ಪೋಲಿಸ್ ಸಾಕ್ಷಿಗಳ ಹೇಳಿಕೆಗಳು ಮುಖ್ಯವಾಗಿ ವಿಡಿಯೊ ರೆಕಾರ್ಡಿಂಗ್ಗಳನ್ನೇ ಅವಲಂಬಿಸಿದ್ದವು ಮತ್ತು ಅವುಗಳನ್ನು ಸ್ವೀಕಾರಾರ್ಹ ಎಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾ.ಭೋಸಲೆ ಹೇಳಿದರು.
ಪ್ರಾಸಿಕ್ಯೂಷನ್ ಸಿದ್ಧಪಡಿಸಿದ ಪಂಚನಾಮೆ ದೋಷಗಳಿಂದ ಕೂಡಿರುವಂತಿದೆ,ಅಲ್ಲದೆ ತಜ್ಞರು ಆಸ್ತಿಯ ಮೌಲ್ಯಮಾಪನವನ್ನೂ ಮಾಡಿಲ್ಲ. ಎಫ್ಐಆರ್ ವಿಳಂಬಕ್ಕೆ ಯಾವುದೇ ವಿವರಣೆಯನ್ನು ನೀಡಿಲ್ಲ. ನ್ಯಾಯಾಲಯದ ಮುಂದೆ ಮಂಡಿಸಲಾದ ವೈದ್ಯಕೀಯ ಪುರಾವೆಯಲ್ಲಿಯೂ ಕೊರತೆಯಿದ್ದು,ಗಾಯಾಳು ಪೋಲಿಸ್ ಅಧಿಕಾರಿಯ ವರದಿಯು ಸಾದಾ ಗಾಯಗಳನ್ನು ಮಾತ್ರ ತೋರಿಸಿದೆ,ಇದು ಬಿದ್ದು ಆಗಿರಬಹುದಾದ ಗಾಯವಾಗಿರಬಹುದು ಎಂದು ವೈದ್ಯರೂ ಒಪ್ಪಿಕೊಂಡಿದ್ದಾರೆ. ತನಿಖೆಯಲ್ಲಿ ವ್ಯಾಪಕ ನ್ಯೂನತೆಗಳಿವೆ ಎಂದು ಹೇಳಿದ ನ್ಯಾಯಾಲಯವು 38ರಿಂದ 56 ವರ್ಷ ವಯೋಮಾನದ ಎಲ್ಲ 17 ಆರೋಪಿಗಳನ್ನು ಖುಲಾಸೆಗೊಳಿಸಿತು.







