ಸಂಭಾಲ್ ಮಸೀದಿ 'ವಿವಾದಿತ' ಎಂದು ಉಲ್ಲೇಖಿಸಲು ಕೋರಿದ್ದ ಅರ್ಜಿ ಸ್ವೀಕರಿಸಿದ ಅಲಹಾಬಾದ್ ಹೈಕೋರ್ಟ್

ಸಂಭಾಲ್ ನ ಜಾಮಾ ಮಸೀದಿ | PC : Facebook
ಪ್ರಯಾಗ್ ರಾಜ್: ಸಂಭಾಲ್ ಜಾಮಾ ಮಸೀದಿಯನ್ನು 'ವಿವಾದಿತ ಕಟ್ಟಡ' ಎಂದು ಉಲ್ಲೇಖಿಸಲು ಅನುಮತಿ ಕೋರಿ ಹಿಂದುತ್ವ ಪರ ವಕೀಲ ಮಾಡಿದ ಮೌಖಿಕ ಮನವಿಯನ್ನು ಅಲಹಾಬಾದ್ ಹೈಕೋರ್ಟ್ ಪುರಸ್ಕರಿಸಿದೆ. ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ ವಾಲ್ ಅವರು ಇದನ್ನು 'ವಿವಾದಿತ ಮಸೀದಿ' ಎಂದು ತಮ್ಮ ಲಿಖಿತ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಮಸೀದಿಗೆ ಬಿಳಿ ಬಣ್ಣ ಬಳಿಯಲು ಮತ್ತು ಮಸೀದಿ ಸ್ವಚ್ಛತೆಗೆ ಅನುಮತಿ ಕೋರಿ ಮಸೀದಿ ನಿರ್ವಹಣಾ ಸಮಿತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಮುಂದಿನ ವಿಚಾರಣೆಯ ದಿನಾಂಕವನ್ನು ಮಾರ್ಚ್ 10ಕ್ಕೆ ನಿಗದಿಪಡಿಸಿದೆ.
ದಿನದ ಆದೇಶವನ್ನು ಹೈಕೋರ್ಟ್ ಪ್ರಕಟಿಸುವ ಹಂತದಲ್ಲಿ ಹಿಂದುತ್ವ ಸಂಘಟನೆಗಳ ಪರ ವಕೀಲ ಹರಿಶಂಕರ್ ಜೈನ್ ಅವರು ಮಸೀದಿಯನ್ನು ವಿವಾದಿತ ಕಟ್ಟಡ ಎಂದು ಉಲ್ಲೇಖಿಸುವಂತೆ ಮನವಿ ಮಾಡಿದರು. ನ್ಯಾಯಾಧೀಶರು ಈ ಮನವಿಯನ್ನು ಪುರಸ್ಕರಿಸಿ, ಮಸೀದಿ ಕಟ್ಟಡವನ್ನು ವಿವಾದಿತ ಕಟ್ಟಡ ಎಂದು ಉಲ್ಲೇಖಿಸುವಂತೆ ಸ್ಟೆನೋಗ್ರಾಫರ್ ಗೆ ಸೂಚಿಸಿದರು. ಮಂಗಳವಾರ ಹೊರಡಿಸಿದ ಅದೇಶದಲ್ಲಿ ಹೈಕೋರ್ಟ್ ಈ ಕಟ್ಟಡವನ್ನು 'ವಿವಾದಿತ ಮಸೀದಿ ಕಟ್ಟಡ' ಎಂದು ಉಲ್ಲೇಖಿಸಿದೆ.
ಜೈನ್ ಹೇಳುವಂತೆ ಇದು ಕಾನೂನು ಪ್ರಕ್ರಿಯೆಯಾಗಿದ್ದು, ವಿವಾದಿತ ಕಟ್ಟಡದ ಬಗ್ಗೆ ಪ್ರಕರಣ ಇದ್ದಾಗ, ನ್ಯಾಯಾಲಯ ತೀರ್ಪು ನೀಡುವವರೆಗೆ ಇದನ್ನು ಮಸೀದಿ ಅಥವಾ ಇತರ ಕಟ್ಟಡ ಎಂದು ಕರೆಯಲಾಗದು.
ಮಂಗಳವಾರ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ವೇಳೆ ಮಸೀದಿ ಸಮಿತಿಯ ವಕಿಲರು ಮಾಹಿತಿ ನೀಡಿ, ಭಾರತದ ಪ್ರಾಚ್ಯವಸ್ತು ಸರ್ವೇಕ್ಷಣಾಲಯದ ವರದಿಗೆ ಅಪೇಕ್ಷೆ ಸಲ್ಲಿಸುತ್ತಿರುವುದಾಗಿ ಸ್ಪಷ್ಟಪಡಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಲು ಎಎಸ್ಐ ಪರ ವಕೀಲರು ಸಮಯಾವಕಾಶ ಕೋರಿದರು. ಇದಕ್ಕೂ ಮುನ್ನ ಕಳೆದ ಶುಕ್ರವಾರ, ಮಸೀದಿ ಆವರಣವನ್ನು ಸ್ವಚ್ಛಗೊಳಿಸುವಂತೆ ಎಎಸ್ಐಗೆ ಸೂಚನೆ ನೀಡಿತ್ತು. ಆದರೆ ಕಟ್ಟಡದ ವೈಟ್ ವಾಷಿಂಗ್ ಮತ್ತು ಬಣ್ಣ ಬಳಿಯುವ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಿರಲಿಲ್ಲ.







