ಮತಪತ್ರಗಳಲ್ಲಿ ಚುನಾವಣಾಧಿಕಾರಿ ಹಸ್ತಕ್ಷೇಪ ನಡೆಸುವ ವೀಡಿಯೊ ಬಿಡುಗಡೆಗೊಳಿಸಿದ ಆಪ್

Photo: X\ @AAPPunjab
ಹೊಸದಿಲ್ಲಿ : ಚಂಡೀಗಢ ಮೇಯರ್ ಚುನಾವಣೆಯಲ್ಲಿ ಮತಪತ್ರಗಳನ್ನು ವಿರೂಪಗೊಳಿಸಿರುವುದಕ್ಕಾಗಿ ಸುಪ್ರೀಂ ಕೋರ್ಟ್ ಚುನಾವಣಾಧಿಕಾರಿಯನ್ನು ತೀವ್ರವಾಗಿ ತರಾಟೆಗೆ ಎತ್ತಿಕೊಂಡ ಬಳಿಕ, ಸೋಮವಾರ ರಾತ್ರಿ ಆಮ್ ಆದ್ಮಿ ಪಕ್ಷವು ಘಟನೆಯ ‘ಸಾಕ್ಷಿ’ಯನ್ನು ಬಿಡುಗಡೆಗೊಳಿಸಿದೆ. ಆಮ್ ಆದ್ಮಿ ಪಕ್ಷ-ಕಾಂಗ್ರೆಸ್ ಮೈತ್ರಿಕೂಟದ 8 ಮತಗಳನ್ನು ‘ಅಸಿಂಧುಗೊಳಿಸುವ’ ಮೊದಲು ಚುನಾವಣಾಧಿಕಾರಿ ಅನಿಲ್ ಮಸಿಹ್ ಮತಪತ್ರಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎನ್ನುವುದನ್ನು ತಾನು ಬಿಡುಗಡೆಗೊಳಿಸಿರುವ ಸಿಸಿಟಿವಿ ದೃಶ್ಯಾವಳಿಗಳು ತೋರಿಸುತ್ತವೆ ಎಂದು ಆಪ್ ಹೇಳಿದೆ.
ಈ ವೀಡಿಯೊವನ್ನು ಆಪ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಾಕಿದೆ.
‘‘ಈಗಲಾದರೂ ಒಪ್ಪಿಕೋ ಬಿಜೆಪಿ. ಇದಕ್ಕಿಂತ ದೊಡ್ಡ ಸಾಕ್ಷಿ ಬೇರೇನಿದೆ? ಬಿಜೆಪಿಯ ಚುನಾವಣಾಧಿಕಾರಿಯು ಮತಪತ್ರಗಳಲ್ಲಿ ಗೀಚುವ ಮೂಲಕ ಬಹಿರಂಗವಾಗಿ ಪ್ರಜಾಪ್ರಭುತ್ವದ ಬುಡಕ್ಕೆ ಹೇಗೆ ಕೊಡಲಿ ಏಟು ಹಾಕುತ್ತಿದ್ದಾರೆ ಎನ್ನುವುದನ್ನು ನೋಡಿ. ಇದು ಬಿಜೆಪಿಯ ಸರ್ವಾಧಿಕಾರಕ್ಕೆ ಜೀವಂತ ಸಾಕ್ಷಿಯಾಗಿದೆ’’ ಎಂದು ಆಪ್ ಹೇಳಿದೆ.
35 ಸದಸ್ಯ ಬಲದ ಚಂಡೀಗಢ ಮುನಿಸಿಪಾಲಿಟಿಯಲ್ಲಿ ಬಿಜೆಪಿ 14 ಕೌನ್ಸಿಲರ್ಗಳನ್ನು ಹೊಂದಿದೆ. ಆಪ್ 13 ಕೌನ್ಸಿಲರ್ಗಳನ್ನು ಹೊಂದಿದ್ದರೆ, ಕಾಂಗ್ರೆಸ್ ಬಳಿ ಏಳು ಕೌನ್ಸಿಲರ್ ಗಳು ಇದ್ದಾರೆ. ಶಿರೋಮಣಿ ಅಕಾಲಿ ದಳ ಒಬ್ಬ ಸದಸ್ಯನನ್ನು ಹೊಂದಿದೆ. ಆಪ್ ಮತ್ತು ಕಾಂಗ್ರೆಸ್ ಕೌನ್ಸಿಲರ್ಗಳ ಒಟ್ಟು ಬಲ 20 ಆಗಿದ್ದು, ಬಿಜೆಪಿಗಿಂತ ತುಂಬಾ ಹೆಚ್ಚಾಗಿದೆ.
ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಮೇಯರ್ ಹುದ್ದೆಗೆ ಜಂಟಿ ಅಭ್ಯರ್ಥಿಯಾಗಿ ಕುಲದೀಪ್ ಕುಮಾರ್ ರನ್ನು ನೇಮಿಸಿದ್ದವು.
ಮತ ಚಲಾವಣೆಯ ಬಳಿಕ, ಚುನಾವಣಾಧಿಕಾರಿಯು ಆಪ್-ಕಾಂಗ್ರೆಸ್ ಮೈತ್ರಿಕೂಟದ 8 ಮತಗಳು ‘‘ಅಸಿಂಧು’’ಗೊಂಡಿವೆ ಎಂದು ಘೋಷಿಸಿದರು ಹಾಗೂ 16 ಮತಗಳನ್ನು ಪಡೆದಿರುವ ಬಿಜೆಪಿಯ ಮನೋಜ್ ಸೊಂಕರ್ ವಿಜಯಿಯಾಗಿದ್ದಾರೆ ಎಂದರು. ಕುಲದೀಪ್ ಕುಮಾರ್ 12 ಮತಗಳನ್ನು ಪಡೆದಿದ್ದಾರೆ ಎಂದರು ಘೋಷಿಸಿದರು.
ಸೋಮವಾರ ಸುಪ್ರೀಮ್ ಕೋರ್ಟಿನ ವಿಚಾರಣೆಯ ವೇಳೆ, ಇದೇ ವೀಡಿಯೊವನ್ನು ಪ್ರದರ್ಶಿಸಲಾಯಿತು. ಇದನ್ನು ವೀಕ್ಷಿಸಿದ ಮುಖ್ಯ ನ್ಯಾಯಾಧೀಶ ಚಂದ್ರಚೂಡ್, ಚುನಾವಣಾಧಿಕಾರಿಯು ಮತಪತ್ರಗಳನ್ನು ವಿರೂಪಗೊಳಿಸಿದ್ದಾರೆ ಎಂಬ ತೀರ್ಮಾನಕ್ಕೆ ಬಂದರು.
‘‘ಈ ವ್ಯಕ್ತಿಯ ವಿರುದ್ಧ ಮೊಕದ್ದಮೆ ದಾಖಲಿಸಬೇಕು. ಅವರು ಯಾಕೆ ಕ್ಯಾಮರ ನೋಡುತ್ತಿದ್ದಾರೆ? ಸಾಲಿಸಿಟರ್ ಜನರಲ್ ಅವರೇ, ಇದು ಪ್ರಜಾಪ್ರಭುತ್ವದ ಕೊಲೆಯಾಗಿದೆ. ನಾವು ಆಘಾತಗೊಂಡಿದ್ದೇವೆ’’ ಎಂಬುದಾಗಿ ಮುಖ್ಯ ನ್ಯಾಯಾಧೀಶರು ಉದ್ಗರಿಸಿದರು".







