ಅತ್ಯಾಚಾರಿ ಡೇರಾ ಬಾಬಾನನ್ನು ಸಮರ್ಥಿಸುವ ಜಾಹೀರಾತು ಪ್ರಕಟಣೆ : ಓದುಗರ ಕ್ಷಮೆ ಕೋರಿದ 'ದಿ ಹಿಂದೂ ' ಪತ್ರಿಕೆ

ಹೊಸದಿಲ್ಲಿ: ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್ ನನ್ನು ಒಳ್ಳೆಯ ವ್ಯಕ್ತಿಯಂತೆ ಬಿಂಬಿಸುವ ಮುಖಪುಟದ ಪೂರ್ಣಪುಟ ಜಾಹೀರಾತು ಪ್ರಕಟಿಸಿದ್ದಕ್ಕೆ ತೀವ್ರ ಟೀಕೆಗೆ ಗುರಿಯಾದ ‘ದಿ ಹಿಂದೂ’ ಪತ್ರಿಕೆ ರವಿವಾರ (ಸೆ.13) ಓದುಗರ ಬೇಷರತ್ ಕ್ಷಮೆಯಾಚಿಸಿದೆ.
‘ದಿ ಹಿಂದೂ’ನ ಹೊಸದಿಲ್ಲಿ ಸೇರಿದಂತೆ ಉತ್ತರ ಭಾರತದ ಆವೃತ್ತಿಗಳಲ್ಲಿ ‘ಡೇರಾ ಸಚ್ಚಾ ಸೌದಾ ಎಂದರೇನು? (ವಾಸ್ತವ ಮತ್ತು ಕಲ್ಪನೆ)’ ಎಂಬ ಶೀರ್ಷಿಕೆಯ ಜಾಹೀರಾತು ಪ್ರಕಟವಾಗಿತ್ತು. ಜಾಹೀರಾತಿನಲ್ಲಿ ಗುರ್ಮಿತ್ ಸಿಂಗ್ ನ ಅಪರಾಧದ ಹಿನ್ನೆಲೆಯನ್ನು ಮರೆಮಾಚಿ, ಆತನನ್ನು ‘ಮಸೀಯಾ’ (ರಕ್ಷಕ/ಮಹಾನ್ ವ್ಯಕ್ತಿ) ಎಂಬಂತೆ ಬಿಂಬಿಸಲಾಗಿತ್ತು.
ಜಾಹೀರಾತಿನಲ್ಲಿ ಡೇರಾ ಸಚ್ಚಾ ಸೌದಾ ಸಂಘಟನೆ ಹೇಳಿಕೊಂಡಿರುವ ಹಲವು ಅಂಕಿಅಂಶಗಳನ್ನು ಯಾವುದೇ ಸ್ವತಂತ್ರ ಆಧಾರ ಅಥವಾ ದೃಢೀಕರಣವಿಲ್ಲದೆ ಸತ್ಯವೆಂಬಂತೆ ಪ್ರಕಟಿಸಲಾಗಿತ್ತು. ‘7.5 ಕೋಟಿ ಜನರು ವ್ಯಸನದಿಂದ ಮುಕ್ತರಾಗಿದ್ದಾರೆ’, ‘35.40 ಕೋಟಿ ಸಸಿಗಳನ್ನು ನೆಡಲಾಗಿದೆ’, ‘33.85 ಲಕ್ಷ ಯುನಿಟ್ ರಕ್ತದಾನ’ ಮತ್ತು ‘22 ಗಿನ್ನೆಸ್ ವಿಶ್ವ ದಾಖಲೆಗಳು’ ಎಂಬ ವಿವರಗಳು ಜಾಹೀರಾತಿನಲ್ಲಿದ್ದವು.
59 ವರ್ಷದ ಗುರ್ಮೀತ್ ಸಿಂಗ್ ಇಬ್ಬರು ಮಹಿಳಾ ಅನುಯಾಯಿಗಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಅಪರಾಧಿಯಾಗಿದ್ದಾನೆ. ಈ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (CBI) ನ್ಯಾಯಾಲಯವು ಆತನಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಸದ್ಯ ಆತ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.
ಇದಲ್ಲದೆ, ಭಾರತೀಯ ದಂಡ ಸಂಹಿತೆ (IPC; ಈಗಿನ BNS) ಅಡಿಯಲ್ಲಿ ಕೊಲೆ, ವಂಚನೆ, ಕ್ರಿಮಿನಲ್ ಪಿತೂರಿ ಮತ್ತು ಬೆದರಿಕೆ ಆರೋಪಗಳನ್ನೂ ಆತ ಎದುರಿಸುತ್ತಿದ್ದಾನೆ. ಈ ಪೈಕಿ ಒಂದು ಪ್ರಕರಣದಲ್ಲಿ ಗುರ್ಮೀತ್ ಸಿಂಗ್ ಖುಲಾಸೆಯಾಗಿದ್ದು, ಮತ್ತೊಂದು ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಗುರ್ಮೀತ್ ಸಿಂಗ್ ಸದ್ಯ 21 ದಿನಗಳ ಫರ್ಲೋ ಮೇಲೆ ಜೈಲಿನಿಂದ ಹೊರಗಿದ್ದಾನೆ. ಆತನಿಗೆ ಪದೇಪದೇ ಫರ್ಲೋ ಮತ್ತು ಪೆರೋಲ್ ನೀಡುತ್ತಿರುವ ಕುರಿತು ಹಲವು ಬಾರಿ ಪ್ರಶ್ನೆಗಳು ಎದ್ದಿದ್ದರೂ, ಈ ವಿಚಾರದಲ್ಲಿ ನ್ಯಾಯಾಂಗದಿಂದ ಸ್ಪಷ್ಟತೆ ದೊರೆತಿಲ್ಲ.
ಹಿಂದಿನ ವರದಿಗೆ ತದ್ವಿರುದ್ಧ ನಿಲುವು:
ಜಾಹೀರಾತು ಪ್ರಕಟವಾಗಿರುವುದು ಹಲವು ಪತ್ರಕರ್ತರಿಗೆ ಆಘಾತ ಉಂಟುಮಾಡಿದೆ. ಇದೇ ವರ್ಷದ ಜೂನ್ ನಲ್ಲಿ ‘ದಿ ಹಿಂದೂ’ ಪ್ರಕಟಿಸಿದ್ದ ಇನ್ಫೋಗ್ರಾಫಿಕ್ ಲೇಖನವೊಂದರಲ್ಲಿ, ಗುರ್ಮೀತ್ ಸಿಂಗ್ ತನ್ನ ಜೈಲು ಶಿಕ್ಷೆಯ ಅವಧಿಯ ಸುಮಾರು 13.5 ಪ್ರತಿಶತದಷ್ಟು ಸಮಯವನ್ನು ಜೈಲಿನ ಹೊರಗೆ ಕಳೆದಿದ್ದಾನೆ ಎಂದು ವರದಿ ಮಾಡಲಾಗಿತ್ತು. ಆದರೆ ಶನಿವಾರ ಪ್ರಕಟವಾದ ಜಾಹೀರಾತು ಇದಕ್ಕೆ ಸಂಪೂರ್ಣ ವಿರುದ್ಧವಾದ ನಿಲುವು (U-turn) ನಂತೆ ಕಂಡುಬಂದಿದೆ.
ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂ (ACJ)ನ ಹಳೆಯ ವಿದ್ಯಾರ್ಥಿಗಳು ಜಾಹೀರಾತಿನ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ವ್ಯಕ್ತಿಯೊಬ್ಬ ಮುನ್ನಡೆಸುವ ಸಂಘಟನೆಗೆ ಪತ್ರಿಕೆಯ ಪ್ರಮುಖ ಜಾಹೀರಾತು ಸ್ಥಳ ನೀಡಿರುವ ನಿರ್ಧಾರವನ್ನು ಅವರು ಪ್ರಶ್ನಿಸಿದ್ದಾರೆ.
‘ತೀವ್ರ ವಿಷಾದ; ಬೇಷರತ್ ಕ್ಷಮೆಯಾಚನೆ:
ವಿವಾದದ ಬೆನ್ನಲ್ಲೇ ‘ದಿ ಹಿಂದೂ’ ಕ್ಷಮೆಯಾಚಿಸಿದೆ. “ದಿಲ್ಲಿ, ಮೊಹಾಲಿ ಮತ್ತು ಉತ್ತರ ಭಾರತದ ಆವೃತ್ತಿಗಳಲ್ಲಿ ‘ಡೇರಾ ಸಚ್ಚಾ ಸೌದಾ ಎಂದರೇನು? (ವಾಸ್ತವಾಂಶಗಳು ಮತ್ತು ಕಲ್ಪನೆಗಳು)’ ಎಂಬ ಶೀರ್ಷಿಕೆಯಡಿ ಪ್ರಕಟವಾದ ಆಕ್ಷೇಪಾರ್ಹ ಮುಖಪುಟ ಜಾಹೀರಾತಿನ ಬಗ್ಗೆ ‘ದಿ ಹಿಂದೂ’ ತೀವ್ರ ವಿಷಾದ ವ್ಯಕ್ತಪಡಿಸುತ್ತದೆ” ಎಂದು ಪತ್ರಿಕೆ ಹೇಳಿದೆ.
ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್ ವಿರುದ್ಧ ‘ಮಾದಕವಸ್ತು ಮಾಫಿಯಾ ಮತ್ತು ಡೇರಾವನ್ನು ವಿರೋಧಿಸುವ ಶಕ್ತಿಗಳು’ ಪಿತೂರಿ ನಡೆಸಿವೆ ಎಂಬ ಆರೋಪವನ್ನು ಜಾಹೀರಾತಿನಲ್ಲಿ ಮಾಡಲಾಗಿತ್ತು ಎಂದು ಕ್ಷಮಾಪಣಾ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಜಾಹೀರಾತು ಪ್ರಕಟವಾಗಿರುವುದಕ್ಕೆ ಸಂಬಂಧಿಸಿದಂತೆ ಎದ್ದ ಆಕ್ಷೇಪಗಳಿಗೆ ‘ದಿ ಹಿಂದೂ’ ಬೇಷರತ್ ಕ್ಷಮೆಯಾಚಿಸಿದೆ.
Better sense prevailed. https://t.co/37sjiUuEtP pic.twitter.com/CdIDlFGUaY
— Piyush Rai (@Benarasiyaa) September 13, 2026






