ಕೇರಳ | ಧಾರ್ಮಿಕ ಮೆರವಣಿಗೆಗಾಗಿ ಕಾರ್ಯಾಚರಣೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಿದ ವಿಮಾನ ನಿಲ್ದಾಣ!

ಸಾಂದರ್ಭಿಕ ಚಿತ್ರ | PC : PTI
ತಿರುವನಂತಪುರ : ಎಪ್ರಿಲ್ ತಿಂಗಳ ಬಿರು ಬೇಸಿಗೆಯಲ್ಲಿ ತಿರುವನಂತಪುರ ವಿಮಾನ ನಿಲ್ದಾಣದ ಮೇಲಿನ ಆಗಸದಲ್ಲಿ ಅಲ್ಪಕಾಲ ಮೌನ ಆವರಿಸಿತು. ಕಾರಣ ಏನು ಗೊತ್ತೇ?
ಬಹುತೇಕ ಮಂದಿ ಅಂದುಕೊಂಡಂತೆ ಪ್ರತಿಕೂಲ ಹವಾಮಾನ ಅಥವಾ ತಾಂತ್ರಿಕ ತೊಂದರೆಯಿಂದಾಗಿ ಅಲ್ಲ. ಬದಲಾಗಿ ಹಿಂದೂ ದೇವಾಲಯವೊಂದರ ಮೆರವಣಿಗೆ ರನ್ವೇ ಮೂಲಕ ಹಾದುಹೋಗಲು ಅವಕಾಶ ಮಾಡಿಕೊಡುವ ಸಲುವಾಗಿ!
ದೇವರ ಉತ್ಸವ ಮೂರ್ತಿಯನ್ನು ಹೊಂದಿದ್ದ ಅಲಂಕೃತ ಮರದ ರಥವನ್ನು ಭಕ್ತರು ವಿಮಾನ ನಿಲ್ದಾಣದ ಎರಡು ಕಿಲೋಮೀಟರ್ ರನ್ವೇಯಲ್ಲಿ ಎಳೆಯಲು ಅನುವು ಮಾಡಿಕೊಡುವ ಸಲುವಾಗಿ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಪ್ರತಿದಿನ 90 ವಿಮಾನಗಳು ಟೇಕಾಫ್ ಆಗುವ/ ಬಂದಿಳಿಯುವ ವಿಮಾನ ನಿಲ್ದಾಣ ಕಾರ್ಯಾಚರಣೆಯನ್ನು ಒಂದು ಗಂಟೆ ಕಾಲ ಸ್ಥಗಿತಗೊಳಿಸಲಾಯಿತು.
ಈ ಘಟನೆ ಕಳೆದ ಶುಕ್ರವಾರ ನಡೆದಿದ್ದು, ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ವಾರ್ಷಿಕ ಪೈನ್ಕುಣಿ ಉತ್ಸವದ ಅಂಗವಾಗಿ ಈ ಕ್ರಮ ಕೈಗೊಳ್ಳಲಾಗಿತ್ತು. 10 ದಿನಗಳ ಉತ್ಸವದ ಕೊನೆಯ ದಿನ ಮೆರವಣಿಗೆ ನಡೆಯುತ್ತದೆ. ದೇವಾಲಯದಿಂದ ಆರಂಭವಾಗಿ ರನ್ವೇ ಮೂಲಕ ಆರು ಕಿಲೋಮೀಟರ್ ದೂರದ ಷಣ್ಮುಗಂ ಬೀಚ್ಗೆ ತೆರಳುತ್ತದೆ.
ಮೆರವಣಿಗೆ ಕಡಲ ಕಿನಾರೆಗೆ ಬಂದ ಬಳಿಕ ಅರ್ಚಕರು ದೇವತಾಮೂರ್ತಿಗೆ ಸಾಂಪ್ರದಾಯಿಕ ಸಮುದ್ರಸ್ನಾನ ಮಾಡಿಸುತ್ತಾರೆ. ಅದೇ ಮಾರ್ಗದಲ್ಲಿ ಅಂದರೆ ಮತ್ತೆ ರನ್ವೇ ದಾಟಿಕೊಂಡು ಮೆರವಣಿಗೆ ದೇವಾಲಯಕ್ಕೆ ವಾಪಸ್ಸಾಗುತ್ತದೆ. 1932ರಲ್ಲಿ ವಿಮಾನ ನಿಲ್ದಾಣ ನಿರ್ಮಿಸಿದ ತಿರುವಾಂಕೂರ್ ರಾಜಕುಟುಂಬ ಈ ಮೆರವಣಿಗೆಯ ನೇತೃತ್ವ ವಹಿಸುತ್ತದೆ. ಈ ಉತ್ಸವ ಯಾವಾಗ ಆರಂಭವಾಗಿದೆ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ವಿಮಾನ ನಿಲ್ದಾಣದ ನಿರ್ವಹಣೆ ಸರ್ಕಾರದ ಮತ್ತು ಖಾಸಗಿ ಕಂಪನಿಯಲ್ಲಿ ಇರುವಾಗಲೂ ಈ ಸಂಪ್ರದಾಯ ಮುಂದುವರಿದಿದೆ. ಪ್ರಸ್ತುತ ಗೌತಮ್ ಅದಾನಿ ನೇತೃತ್ವದ ಅದಾನಿ ಏರ್ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ ಇದನ್ನು ನಿರ್ವಹಿಸುತ್ತಿದೆ.