ವೃದ್ಧ ದಂಪತಿಯಿದ್ದ ಆಟೊ ರಿಕ್ಷಾ ಬಳಿಗೇ ಬಂದು ತೀರ್ಪು ನೀಡಿದ ನ್ಯಾಯಾಧೀಶರು!

ನಿಝಾಮಾಬಾದ್: ಇಲ್ಲಿನ ಬೋಧನ್‌ನ ಜೆಎಫ್‌ಸಿಎಂ ನ ಪ್ರಥಮ ದರ್ಜೆಯ ಹೆಚ್ಚುವರಿ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಒಬ್ಬರು ವರದಕ್ಷಿಣೆ ಕಿರುಕುಳ ಪ್ರಕರಣವನ್ನು ಎದುರಿಸುತ್ತಿರುವ ವೃದ್ಧ ದಂಪತಿಯು ಕುಳಿತಿದ್ದ ಆಟೋ ರಿಕ್ಷಾ ಬಳಿಗೇ ತೆರಳಿ ತೀರ್ಪು ನೀಡಿದ ವಿಶಿಷ್ಟ ಘಟನೆ ನಡೆದಿದೆ.
ರುದ್ರೂರ್ ಮಂಡಲದ ರಾಯ್ಕೂರ್ ಗ್ರಾಮದ ನಿವಾಸಿಗಳಾದ ಸಾಯಮ್ಮ ಮತ್ತು ಗಂಗಾರಾಮ್ ವಿರುದ್ಧ ಅವರ ಸೊಸೆ ಸಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಯಮಿತವಾಗಿ ನ್ಯಾಯಾಲಯದ ವಿಚಾರಣೆಗಳಿಗೆ ಹಾಜರಾಗುತ್ತಿದ್ದರು. ಅವರ ವಯಸ್ಸು ಹೆಚ್ಚಿದ್ದರೂ, ಅವರು ಕಾನೂನು ಪ್ರಕ್ರಿಯೆಗೆ ಬದ್ಧರಾಗಿದ್ದರು.
ಸೋಮವಾರ, ದಂಪತಿಗಳು ಆಟೋರಿಕ್ಷಾದಲ್ಲಿ ನ್ಯಾಯಾಲಯದ ಆವರಣಕ್ಕೆ ಬಂದಿದ್ದು, ಆದರೆ ದೈಹಿಕ ದೌರ್ಬಲ್ಯದಿಂದಾಗಿ ನ್ಯಾಯಾಲಯಕ್ಕೆ ನಡೆಯಲು ಸಾಧ್ಯವಾಗಲಿಲ್ಲ. ಅವರ ಉಪಸ್ಥಿತಿ ಮತ್ತು ಸ್ಥಿತಿಯನ್ನು ತಿಳಿದ ನಂತರ, ಜೆಎಫ್‌ಸಿಎಂ ಮ್ಯಾಜಿಸ್ಟ್ರೇಟ್ ಇ ಸಾಯಿ ಶಿವ ಅವರು ಪೀಠದಿಂದ ಕೆಳಗಿಳಿದು ವೈಯಕ್ತಿಕವಾಗಿ ಅವರನ್ನು ಭೇಟಿ ಮಾಡಲು ಆಟೋ ರಿಕ್ಷಾ ಬಳಿಗೇ ಬಂದಿದ್ದಾರೆ.
ಯಾರು ಊಹಿಸದ ಹೃದಯಸ್ಪರ್ಶಿ ನಡೆಯಲ್ಲಿ, ನ್ಯಾಯಾಧೀಶರು ಸ್ಥಳದಲ್ಲೇ ಪ್ರಕರಣದ ವಿವರಗಳನ್ನು ವಿಚಾರಿಸಿದರು. ಎರಡೂ ಕಡೆಯವರನ್ನು ಆಲಿಸಿ, ವೃದ್ಧ ದಂಪತಿಗಳು ಯಾವುದೇ ತಪ್ಪನ್ನು ಮಾಡಿಲ್ಲ ಎಂಬ ನಿರ್ಧಾರಕ್ಕೆ ಬಂದ ಅವರು ಪ್ರಕರಣವನ್ನು ವಜಾಗೊಳಿಸಿದ್ದಾರೆ.
ಈ ಎಲ್ಲಾ ಅಚ್ಚರಿಗೆ ನ್ಯಾಯಾಲಯದ ಆವರಣದಲ್ಲಿದ್ದ ಹಲವರು ಸಾಕ್ಷಿಯಾದರು. ನ್ಯಾಯಾಧೀಶರ ಸೂಕ್ಷ್ಮತೆ ಮತ್ತು ಮಾನವೀಯ ಮನೋಭಾವವಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ವೃದ್ಧ ದಂಪತಿಗಳು ಭಾವುಕರಾಗಿ ಕೈ ಸನ್ನೆಯ ಮೂಲಕವೇ ತಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದು, ಮನ ಕಲಕುವಂತಿತ್ತು.







