ರೈಲಿನಲ್ಲಿ ಶೂಟೌಟ್ ಪ್ರಕರಣದ ಪಾತಕಿ ಹಿಂದೆಯೂ ಅಲ್ಪಸಂಖ್ಯಾತರ ಮೇಲೆ ಹಲ್ಲೆ ನಡೆಸಿದ್ದ !

ಚೇತನ್ ಸಿಂಗ್ ಚೌಧರಿ | Photo: NDTV
ಹೊಸದಿಲ್ಲಿ: ಮುಂಬೈ-ಜೈಪುರ ಎಕ್ಸ್ಪ್ರೆಸ್ ರೈಲಿನಲ್ಲಿ ತನ್ನ ಹಿರಿಯ ಅಧಿಕಾರಿ ಹಾಗೂ ಮೂವರು ಮುಸ್ಲಿಂ ಪ್ರಯಾಣಿಕರನ್ನು ಸ್ವಯಂಚಾಲಿತ ಬಂಧೂಕಿನಿಂದ ಹತ್ಯೆಗೈದ ಮೀಸಲು ಪೊಲೀಸ್ ಪಡೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಚೇತನ್ ಸಿಂಗ್ ಚೌಧರಿ ಈ ಹಿಂದೆಯೂ ಮುಸ್ಲಿಮರ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯನ್ನು ಹೊಂದಿದ್ದನೆಂದು ವರದಿಯಾಗಿದೆ.
2006ರಲ್ಲಿ ಚೇತನ್ ಸಿಂಗ್ ಚೌಧರಿ, ಉಜ್ಜಯಿನಿಯಲ್ಲಿ ರೈಲ್ವೆ ರಕ್ಷಣಾ ಪಡೆಯ (RPF) ಕಾನ್ಸ್ಟೇಬಲ್ ಆಗಿದ್ದಾಗ ಮುಸ್ಲಿಂ ಆಟೋ ಚಾಲಕನೊಬ್ಬನನ್ನು ನಿಂದಿಸಿದ್ದ ಹಾಗೂ ಆತನಿಗೆ ಹಲ್ಲೆ ನಡೆಸಿದ್ದನೆಂದು ಆರೋಪಿಸಲಾಗಿದೆ.
2016 ಹಾಗೂ 2017ರ ನಡುವಿನ ಹಲವಾರು ತಿಂಗಳುಗಳಲ್ಲಿ ಚೌಧರಿಯು ಆಟೋ ಚಾಲಕ ವಾಜಿದ್ ಖಾನ್ ಗೆ ಪದೇ ಪದೇ ಬೆದರಿಕೆ ಹಾಕಿದ್ದನೆನ್ನಲಾಗಿದೆ.
ಚೇತನ್ ಸಿಂಗ್ ಉಜ್ಜಯಿನಿ ರೈಲು ನಿಲ್ದಾಣದಿಂದ ತನ್ನ ಆಟೋದಲ್ಲಿ ಪ್ರಯಾಣಿಸುತ್ತಿದ್ದ. ಆಗ ಆತ ಆರ್ಪಿಎಫ್ ನ ಶ್ವಾನದಳದಲ್ಲಿ ಕಾನ್ಸ್ಟೇಬಲ್ ಆಗಿ ನಿಯೋಜಿತರಾಗಿದ್ದ. ದೂರದೂರದ ಸ್ಥಳಗಳಿಗೆ ತನ್ನನ್ನು ಕೊಂಡೊಯ್ಯುವಂತೆ ಆತ ತನ್ನ ಮೇಲೆ ಒತ್ತಡ ಹೇರುತ್ತಿದ್ದ ಹಾಗೂ ಆದರೆ ಆತ ಅದಕ್ಕೆ ಹಣವನ್ನು ಪಾವತಿಸುತ್ತಿರಲಿಲ್ಲವೆಂದು ವರದಿಯಾಗಿದೆ.
ಕೆಲವೊಮ್ಮೆ ವೈಯಕ್ತಿಕ ತೊಂದರೆಗಳಿಂದಾಗಿ ಚೌಧರಿ ಅವರನ್ನು ಕೊಂಡೊಯ್ಯಲು ತನಗೆ ಸಾಧ್ಯವಾಗದೆ ಇದ್ದಾಗ ಆತ ತನ್ನನ್ನು ನಿಂದಿಸುತ್ತಿದ್ದ. ತನ್ನನ್ನು ದೇಶದ್ರೋಹಿ ಹಾಗೂ ಭಯೋತ್ಪಾದಕನೆಂದು ಮೂದಲಿಸುತ್ತಿದ್ದ. ಅಲ್ಲದೆ ಮುಸ್ಲಿಮರನ್ನು ಜೈಲಿನಲ್ಲಿರಬೇಕಾದವರು ಎಂದು ವ್ಯಂಗ್ಯವಾಡುತ್ತಿದ್ದ ಎಂದು ಹೇಳುತ್ತಿದ್ದಾಗಿ ವಾಜಿದ್ ಖಾನ್ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗೆ ತಿಳಿಸಿದ್ದಾರೆ.
ಚೌಧರಿ ಅವರ ನಡವಳಿಕೆ ಬಗ್ಗೆ 2017ರ ಫೆಬ್ರವರಿಯಲ್ಲಿ ಆರ್ಪಿಎಫ್ ಅಧಿಕಾರಿಗಳಿಗೆ ದೂರು ನೀಡಿದ್ದರು. ಇದರಿಂದ ರೋಷಗೊಂಡ ಚೌಧರಿ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದನೆಂದು ಆಟೋ ಚಾಲಕ ಆರೋಪಿಸಿದ್ದಾರೆ.
ಹಿರಿಯ ಅಧಿಕಾರಿಯೊಬ್ಬರ ಕನ್ನಡಕಗಳನ್ನು ನೀಡಲು ತಾನು ರೈಲುನಿಲ್ದಾಣಕ್ಕೆ ಬಂದಿದ್ದಾಗ ಚೇತನ್ ಸಿಂಗ್ ಅವರು ತನ್ನನ್ನು ತಾಸುಗಳ ಕಾಲ ನಿಲ್ದಾಣದಲ್ಲಿ ಕೂಡಿಹಾಕಿದ್ದ. ಫ್ಲ್ಯಾಟ್ಫಾರಂ ಟಿಕೆಟ್ ಇಲ್ಲದೆ ರೈಲು ನಿಲ್ದಾಣದಲ್ಲಿ ಅಲೆದಾಡುತ್ತಿದ್ದನೆಂದು ಆತ ತನ್ನ ಮೇಲೆ ದೂರು ನೀಡಿದ್ದನೆಂದು ಖಾನ್ ಆಪಾದಿಸಿದ್ದಾರೆ. ವಾಸ್ತವಿಕವಾಗಿ ತಾನು ವ ಅವರಿಗೆ ಫ್ಲ್ಯಾಟ್ಫಾರಂ ಟಿಕೆಟ್ ತೋರಿಸಿದಾಗ ಆತ ಅದನ್ನು ಹರಿದುಹಾಕಿದ್ದನೆಂದು ಎಂದು ಖಾನ್ ಹೇಳುತ್ತಾರೆ.
ತನ್ನನ್ನು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ ಆತ ತನ್ನನ್ನು ಥಳಿಸಿದ್ದನೆಂದು ಖಾನ್ ನೆನಪಿಸಿಕೊಳುತ್ತಾರೆ.
ತಾನು ನೀಡಿದ ದೂರಿನ ಹಿನ್ನೆಲೆಯಲ್ಲಿ ಚೌಧುರಿ ವಿರುದ್ಧ ತನಿಖೆಯನ್ನು ಆರಂಭಿಸಲಾಗಿತ್ತು ಹಾಗೂ ಆತ ತಪ್ಪಿತಸ್ಥನೆಂದು ದೃಢಪಟ್ಟಿತ್ತು. ಆ ಬಳಿಕ ಆತನನ್ನು ಕೇರಳಕ್ಕೆ ಕಳುಹಿಸಲಾಗಿತ್ತು. ಆನಂತರ ಗುಜರಾತ್ ನ ಭಾವನಗರಕ್ಕೆ ವರ್ಗಾವಣೆಗೊಳಿಸಲಾಗಿತ್ತು.
ಚೇತನ್ ಸಿಂಗ್ ಈ ಹಿಂದೆ ಶಿಸ್ತು ಉಲ್ಲಂಘನೆಯ ಕನಿಷ್ಠ ಮೂರು ಪ್ರಕರಣಗಳಲ್ಲಿ ಶಾಮೀಲಾಗಿದ್ದನೆಂದು ಆರ್ಪಿಎಫ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ಮೂಲಗಳು ತಿಳಿಸಿವೆ.







