ಭಾರತದ ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್.ಸ್ವಾಮಿನಾಥನ್ ನಿಧನ

ಎಂ.ಎಸ್.ಸ್ವಾಮಿನಾಥನ್ | Photo: NDTV
ಚೆನ್ನೈ: ಪ್ರಖ್ಯಾತ ವಿಜ್ಞಾನಿ ಹಾಗೂ ಭಾರತದ ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್.ಸ್ವಾಮಿನಾಥನ್ ತಮ್ಮ ಚೆನ್ನೈ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು. ಸ್ವಾಮಿನಾಥನ್ ಅವರ ತಳಮಟ್ಟದ ಕೊಡುಗೆಯಿಂದ ಕೃಷಿ ಕ್ರಾಂತಿ ನಡೆದು, ಭಾರತವು ಆಹಾರ ಸ್ವಾವಲಂಬನೆ ಸಾಧಿಸಿ ಜಾಗತಿಕ ಮನ್ನಣೆ ಗಳಿಸಲು ಸಾಧ್ಯವಾಗಿತ್ತು.
ಸ್ವಾಮಿನಾಥನ್ ಅವರು ಪುತ್ರಿಯರಾದ ಸೌಮ್ಯ ಸ್ವಾಮಿನಾಥನ್, ಮಧುರ ಸ್ವಾಮಿನಾಥನ್ ಹಾಗೂ ನಿತ್ಯ ಸ್ವಾಮಿನಾಥನ್ ಅವರನ್ನು ಅಗಲಿದ್ದಾರೆ. ಅವರು ತಮ್ಮ ಜೀವಮಾನವನ್ನೆಲ್ಲ ಸುಸ್ಥಿರ ಕೃಷಿಗಾಗಿಯೇ ಮೀಸಲಿಟ್ಟಿದ್ದರು.
ಸಸ್ಯ ತಳಿ ಶಾಸ್ತ್ರಜ್ಞರಾಗಿ ತಮ್ಮ ವೃತ್ತಿ ಜೀವನ ಪಯಣ ಆರಂಭಿಸಿದ ಡಾ. ಸ್ವಾಮಿನಾಥನ್, ಭಾರತದ ಪರಿವರ್ತನಾ ಯುಗವಾದ ಹಸಿರು ಕ್ರಾಂತಿಗೆ ನಾಂದಿ ಹಾಡಿದರು. ಸುಸ್ಥಿರ ಕೃಷಿ ಪರವಾಗಿನ ಅವರ ನಿಲುವು ಅವರನ್ನು ಸುಸ್ಥಿರ ಆಹಾರ ಭದ್ರತೆಯಲ್ಲಿ ವಿಶ್ವ ನಾಯಕನನ್ನಾಗಿಸಿತು.
ತಮ್ಮ ಮೈಲಿಗಲ್ಲಿನ ಸಾಧನೆಗಳಿಗೆ ಸ್ವಾಮಿನಾಥನ್ ಅವರು ರೇಮನ್ ಮ್ಯಾಗ್ಸಸ್ಸೆ ಪ್ರಶಸ್ತಿ, ವಿಶ್ವ ಆಹಾರ ಪ್ರಶಸ್ತಿಗಳನ್ನು ಪಡೆದಿದ್ದು, 1967ರಲ್ಲಿ ಪದ್ಮಶ್ರೀ, 1972ರಲ್ಲಿ ಪದ್ಮಭೂಷಣ ಹಾಗೂ 1989ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಸ್ವಾಮಿನಾಥನ್ ಅವರು 2007-2013ರ ನಡುವೆ ರಾಜ್ಯಸಭೆಗೂ ನಾಮನಿರ್ದೇಶನಗೊಂಡಿದ್ದರು.







