ಪ್ರಧಾನಿಯಿಂದ ಪಿಎಂ-ಜನಮನ್ ಅಡಿ ಒಂದು ಲಕ್ಷ ಜನರಿಗೆ ಮೊದಲ ಕಂತಿನ ನೆರವು ಬಿಡುಗಡೆ
ನರೇಂದ್ರ ಮೋದಿ | Photo:pmindia.gov.in
ಹೊಸದಿಲ್ಲಿ: ವಿವಿಧ ಕಲ್ಯಾಣ ಯೋಜನೆಗಳ ಲಾಭಗಳು ಎಲ್ಲರಿಗೂ ತಲುಪಿದರೆ ಮಾತ್ರ ದೇಶವು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸೋಮವಾರ ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (ಪಿಎಂ-ಜನಮನ್)ದಡಿ ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯ ಒಂದು ಲಕ್ಷ ಫಲಾನುಭವಿಗಳಿಗೆ ಒಟ್ಟು 540 ಕೋ.ರೂ.ಗಳ ಮೊದಲ ಕಂತನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಬಿಡುಗಡೆಗೊಳಿಸಿದ ಮೋದಿ, ತನ್ನ ಸರಕಾರದ 10 ವರ್ಷಗಳು ಬಡವರಿಗಾಗಿ ಸಮರ್ಪಿತವಾಗಿವೆ ಎಂದು ಹೇಳಿದರು. ಪ್ರತಿಯೊಬ್ಬರೂ, ದೂರ ಪ್ರದೇಶಗಳಲ್ಲಿರುವವರೂ ಈ ಯೋಜನೆಗಳಿಂದ ಲಾಭಗಳನ್ನು ಪಡೆಯುತ್ತಾರೆ ಎನ್ನುವುದು ತನ್ನ ಗ್ಯಾರಂಟಿಯಾಗಿದೆ ಎಂದು ಪ್ರತಿಪಾದಿಸಿದರು.
ಕಳೆದ 10 ವರ್ಷಗಳಲ್ಲಿ ಪರಿಶಿಷ್ಟ ಪಂಗಡಗಳಿಗಾಗಿ ಹೆಚ್ಚಿನ ಕಲ್ಯಾಣ ಯೋಜನೆಗಳಿಗೆ ಬಜೆಟ್ ಹಂಚಿಕೆಯನ್ನು ಐದು ಪಟ್ಟುಗಳಷ್ಟು ಮತ್ತು ಬುಡಕಟ್ಟು ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ವೇತನವನ್ನು ಎರಡೂವರೆ ಪಟ್ಟಿನಷ್ಟು ಹೆಚ್ಚಿಸಲಾಗಿದೆ. ಅವರಿಗಾಗಿ 500ಕ್ಕೂ ಅಧಿಕ ಏಕಲವ್ಯ ಮಾದರಿ ಶಾಲೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಈ ಮೊದಲು ಇಂತಹ ಕೇವಲ 90 ಶಾಲೆಗಳಿದ್ದವು ಎಂದು ಹೇಳಿದ ಪ್ರಧಾನಿ, ಬುಡಕಟ್ಟು ಸಮುದಾಯಗಳಲ್ಲಿ ಅತ್ಯಂತ ಹಿಂದುಳಿದವರು ತನ್ನ ಪ್ರತಿಯೊಂದು ಯೋಜನೆಯ ಲಾಭವನ್ನು ಪಡೆದುಕೊಳ್ಳುವಂತಾಗಲು ಸರಕಾರವು ತನ್ನ ಪೂರ್ಣ ಶಕ್ತಿಯನ್ನು ಬಳಸಿಕೊಂಡಿದೆ ಎಂದರು.
ಪಿಎಂ-ಜನಮನ್ ಯೋಜನೆಗೆ ಭಾರತದ ಮೊದಲ ಬುಡಕಟ್ಟು ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮಾರ್ಗದರ್ಶನವನ್ನು ಸ್ಮರಿಸಿಕೊಂಡ ಮೋದಿ, ಬುಡಕಟ್ಟು ಹಿನ್ನೆಲೆಯಿಂದ ಬಂದಿರುವ ಅವರು ತನ್ನೊಂದಿಗೆ ಸಂವಾದಗಳ ಸಂದರ್ಭದಲ್ಲಿ ಸಮುದಾಯವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಆಗಾಗ್ಗೆ ಮಾತನಾಡುತ್ತಿದ್ದರು ಎಂದು ತಿಳಿಸಿದರು.
ತನ್ನ ಸರಕಾರವು ಬಡವರಿಗಾಗಿ ನಾಲ್ಕು ಕೋಟಿಗೂ ಅಧಿಕ ಪಕ್ಕಾ ಮನೆಗಳನ್ನು ನಿರ್ಮಿಸಿದೆ ಎಂದ ಅವರು, ಈ ಹಿಂದೆ ಯಾವಾಗಲೂ ಕಡೆಗಣಿಸಲ್ಪಟ್ಟವರನ್ನು ತಾನು ತಲುಪಿದ್ದು ಮಾತ್ರವಲ್ಲ, ಅವರಿಗೆ ಗೌರವವನ್ನೂ ಸಲ್ಲಿಸಿದ್ದೇನೆ ಎಂದು ಒತ್ತಿ ಹೇಳಿದರು.
ಮೋದಿ ವೀಡಿಯೊ ಕಾನ್ಫರೆನ್ಸಿಂಗ್ ನಲ್ಲಿ ಕೆಲವು ಫಲಾನುಭವಿಗಳೊಂದಿಗೆ ಸಂವಾದವನ್ನು ನಡೆಸಿದರು. ಸರಕಾರದ ಯೋಜನೆಗಳ ಲಾಭಗಳನ್ನು ಪಡೆದುಕೊಂಡ ಬಳಿಕ ತಮ್ಮ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಗಳಾಗಿವೆ ಎಂದು ಈ ಫಲಾನುಭವಿಗಳು ಹೇಳಿದರು.
‘ಕಲ್ಯಾಣ ಯೋಜನೆಗಳಿಂದ ಯಾರೂ ಹೊರಗುಳಿಯಬಾರದು ಎನ್ನುವುದು ನಮ್ಮ ಸರಕಾರದ ಪ್ರಯತ್ನವಾಗಿದೆ ’ಎಂದು ಮೋದಿ ಹೇಳಿದರು.
ನ.15ರಂದು ಜನಜಾತೀಯ ಗೌರವ ದಿವಸ್ ಸಂದರ್ಭದಲ್ಲಿ ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳ ಸಾಮಾಜಿಕ-ಆರ್ಥಿಕ ಕಲ್ಯಾಣಕ್ಕಾಗಿ ಪಿಎಂ-ಜನಮನ್ ಗೆ ಚಾಲನೆ ನೀಡಲಾಗಿತ್ತು.
ಪಿಎಂ-ಜನಮನ್ ಸುಮಾರು 24,000 ಕೋ,ರೂ.ಗಳ ಬಜೆಟ್ನೊಂದಿಗೆ ಒಂಭತ್ತು ಸಚಿವಾಲಯಗಳ ಮೂಲಕ 11 ನಿರ್ಣಾಯಕ ಕ್ಷೇತ್ರಗಳ ಮೇಲೆ ಗಮನವನ್ನು ಕೇಂದ್ರೀಕರಿಸಿದೆ. ತನ್ಮೂಲಕ ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳ ಸಾಮಾಜಿಕ-ಆರ್ಥಿಕ ಕಲ್ಯಾಣದ ಗುರಿಯನ್ನು ಹೊಂದಿದೆ.
ಅಯೋಧ್ಯೆಯಲ್ಲಿ ಶ್ರೀರಾಮನ ವಿಗ್ರಹದ ಪ್ರಾಣಪ್ರತಿಷ್ಠಾಪನೆಗೆ ಪೂರ್ವಭಾವಿಯಾಗಿ ಅಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತಿದೆ. ತಮ್ಮ ಸ್ವಂತ ಮನೆಗಳ ನಿರ್ಮಾಣಕ್ಕಾಗಿ ಮೊದಲ ಕಂತಿನ ಹಣವನ್ನು ಪಡೆದಿರುವವರ ಈ ಒಂದು ಲಕ್ಷ ಕುಟುಂಬಗಳ ಮನೆಗಳಲ್ಲಿಯೂ ಹಬ್ಬವನ್ನು ಆಚರಿಸಲಾಗುತ್ತಿದೆ. ಇದು ಅವರಿಗೆ ಭಾರೀ ಸಂತೋಷದ ವಿಷಯವಾಗಿದೆ.
- ಪ್ರಧಾನಿ ನರೇಂದ್ರ ಮೋದಿ