ಜು.22ರಂದು ರಾಮ ಮಂದಿರಕ್ಕೆ ಸಿಇಒ ನೇಮಕದ ಬಗ್ಗೆ ಅಂತಿಮ ನಿರ್ಧಾರ : ನೃಪೇಂದ್ರ ಮಿಶ್ರಾ

ನೃಪೇಂದ್ರ ಮಿಶ್ರಾ | Photo Credit : ANI
ಅಯೋಧ್ಯೆ,ಜು.12: ರಾಮಮಂದಿರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ನೇಮಕದ ಕುರಿತು ಅಂತಿಮ ನಿರ್ಧಾರವನ್ನು ಜು.22ರಂದು ನಡೆಯಲಿರುವ ಟ್ರಸ್ಟ್ ಸಭೆಯಲ್ಲಿ ತೆಗೆದುಕೊಳ್ಳಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ರವಿವಾರ ತಿಳಿಸಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಿಶ್ರಾ, ಸಿಇಒ ನೇಮಕಗೊಂಡರೆ ಅವರು ಟ್ರಸ್ಟ್ನ ಮೇಲ್ವಿಚಾರಣೆಯಡಿ ಕಾರ್ಯ ನಿರ್ವಹಿಸಲಿದ್ದಾರೆ. ಅವರು ಟ್ರಸ್ಟ್ನ ಉಸ್ತುವಾರಿಯಡಿ ತನ್ನ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಿದ್ದಾರೆ ಮತ್ತು ಆಡಳಿತಾತ್ಮಕ ಹಾಗೂ ಆರ್ಥಿಕ ವ್ಯವಸ್ಥೆಗಳನ್ನು ನೋಡಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಭಕ್ತರ ವಿಶ್ವಾಸವನ್ನು ಉಳಿಸಿಕೊಳ್ಳುವುದು ಸಿಇಒ ಪ್ರಾಥಮಿಕ ಜವಾಬ್ದಾರಿಗಳಲ್ಲಿ ಒಂದಾಗಿರುತ್ತದೆ ಎಂದು ಹೇಳಿದ ಮಿಶ್ರಾ, ಹೊಸದಾಗಿ ನೇಮಕಗೊಳ್ಳುವ ಅಧಿಕಾರಿಯ ಕಾರ್ಯ ನಿರ್ವಹಣೆಯಲ್ಲಿ ಸರಕಾರದ ಯಾವುದೇ ಹಸ್ತಕ್ಷೇಪ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಲ್ಲ ಮೂಲಗಳ ಪ್ರಕಾರ, ಸಿಇಒ ಆಯ್ಕೆಯು ಆಡಳಿತಾತ್ಮಕ ಅನುಭವದೊಂದಿಗೆ ಪ್ರಾಮಾಣಿಕತೆ, ನಾಯಕತ್ವ ಗುಣಗಳು ಮತ್ತು ಧಾರ್ಮಿಕ ನಂಬಿಕೆಯಂತಹ ಅಂಶಗಳ ಮೇಲೆಯೂ ಆಧಾರಿತವಾಗಿರುತ್ತದೆ.
ಆಯ್ಕೆ ಸಮಿತಿಯು 10 ಮುಖ್ಯ ಮಾನದಂಡಗಳನ್ನು ಸಿದ್ಧಪಡಿಸಲಿದ್ದು, ಅದರ ಆಧಾರದ ಮೇಲೆ ಸಿಇಒ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದೂ ಮೂಲಗಳು ತಿಳಿಸಿವೆ.
ಇದೇ ವೇಳೆ, ಕಳೆದ ಕೆಲವು ದಿನಗಳಿಂದ ರಾಮಮಂದಿರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂಬ ವರದಿಗಳನ್ನು ಮಿಶ್ರಾ ತಳ್ಳಿಹಾಕಿದರು.






