ಸಂವಿಧಾನ ವಿಸರ್ಜಿಸಿ ಮೋದಿ ಕಿರೀಟ ಹಾಕುವ ಸಮಯ ಬಂದಿದೆ : ಇತಿಹಾಸ ಶಿಕ್ಷಕರ ಹೇಳಿಕೆ ವೈರಲ್

Photocredit : freepressjournal.in
ಹೊಸದಿಲ್ಲಿ: ಪಠ್ಯಕ್ರಮದಲ್ಲಿ ಮೊಘಲ್ ಇತಿಹಾಸಕ್ಕೆ ಕತ್ತರಿ ಹಾಕಿರುವ ಕುರಿತಂತೆ ಪ್ರಸಿದ್ಧ ಇತಿಹಾಸ ಶಿಕ್ಷಕ ಅವಧ್ ಓಜಾ ಅವರು ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಸಂವಿಧಾನವನ್ನು ವಿಸರ್ಜಿಸಿ ಮೋದಿ ಅವರು ಕಿರೀಟವನ್ನು ಧರಿಸುವ ಸಮಯ ಬಂದಿದೆ, ಇನ್ನೂ ಯಾಕೆ ಅವರು ಕಾಯುತ್ತಿದ್ದಾರೆ? ಮೋದಿ ಅವರ ರಾಜವಂಶ ಆರಂಭವಾಗಿದೆ” ಎಂದು ತಮ್ಮ ತರಗತಿಯಲ್ಲಿ ಅವರು ಹೇಳಿರುವ ವೀಡಿಯೊ ಬಹಿರಂಗವಾಗಿದೆ.
ಮೋದಿ ಸರ್ಕಾರದ ವಿರುದ್ಧ ಅವರು ನೀಡಿರುವ ಹೇಳಿಕೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
“ಪಠ್ಯಕ್ರಮದಿಂದ ಮೊಘಲ್ ರಾಜವಂಶವನ್ನು ತೆಗೆದುಹಾಕಲಾಗಿದೆ, ನಾವು ಹೊಸ ರಾಜವಂಶ, ಮೋದಿ ರಾಜವಂಶದ ಬಗ್ಗೆ ಓದುವ ಸಮಯ ಬಂದಿದೆ ಸಂವಿಧಾನವನ್ನು ವಿಸರ್ಜಿಸಿ ಮೋದಿ ಕಿರೀಟ ಹಾಕಿಕೊಳ್ಳಲಿ" ಎಂದು ಅವರು ಹೇಳಿದ್ದಾರೆ.
“ಪ್ರಧಾನಿ ಮೋದಿಗೆ ಮಕ್ಕಳಿಲ್ಲದಿದ್ದರೂ ಸಮಸ್ಯೆಯಲ್ಲ, ಮುಹಮ್ಮದ್ ಘೋರಿಗೆ ಕೂಡಾ ಯಾವುದೇ ವಂಶಾವಳಿ ಇರಲಿಲ್ಲ, ಆತನ ಕಮಾಂಡರ್ಗಳೇ ಆತನಿಗೆ ಮಕ್ಕಳಾಗಿದ್ದರು” ಎಂದು ಓಜಾ ಹೇಳಿದ್ದಾರೆ.
ಅನ್ ಅಕಾಡೆಮಿಯಲ್ಲಿದ್ದ ಓಜಾ ಸದ್ಯ ತಾವೇ ಸ್ವಂತವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಗತಿಗಳನ್ನು ನೀಡುತ್ತಿದ್ದಾರೆ.







