ಬದಲಾದ ರಾಜಕೀಯ ಸನ್ನಿವೇಶ; ಶಾಸಕಾಂಗದಲ್ಲಿ ಕುಸಿಯುತ್ತಿದೆ ಮುಸ್ಲಿಂ ಪ್ರಾತಿನಿಧ್ಯ

ಸಾಂದರ್ಭಿಕ ಚಿತ್ರ (Photo: PTI)
ಹೊಸದಿಲ್ಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ನಿರಂತರವಾಗಿ ಕುಸಿಯುತ್ತಿದೆ. ವಿಶೇಷವಾಗಿ ಕಳೆದ ಒಂದು ದಶಕದಲ್ಲಿ ರಾಜಕೀಯ ಧ್ರುವೀಕರಣ, ಅಭ್ಯರ್ಥಿ ಆಯ್ಕೆಯಲ್ಲಿನ ಬದಲಾದ ರಾಜಕೀಯ ಲೆಕ್ಕಾಚಾರ ಮತ್ತು ಬಹುಸಂಖ್ಯಾತ ರಾಜಕೀಯದ ಪ್ರಭಾವದಿಂದ ಮುಸ್ಲಿಂ ಶಾಸಕರು ಮತ್ತು ಸಂಸದರ ಸಂಖ್ಯೆ ಗಮನಾರ್ಹವಾಗಿ ಇಳಿದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚಿನ ವಿಧಾನಸಭಾ ಚುನಾವಣೆಗಳ ಬಳಿಕ ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ ಮತ್ತು ಪುದುಚೇರಿ ವಿಧಾನಸಭೆಗಳಿಗೆ ಆಯ್ಕೆಯಾದ ಒಟ್ಟು 823 ಶಾಸಕರಲ್ಲಿ ಕೇವಲ 107 ಮಂದಿ ಮಾತ್ರ ಮುಸ್ಲಿಮರು. 2021ರ ಚುನಾವಣೆಯಲ್ಲಿ ಇದೇ ರಾಜ್ಯಗಳಲ್ಲಿ 112 ಮುಸ್ಲಿಂ ಶಾಸಕರು ಆಯ್ಕೆಯಾಗಿದ್ದರು.
ಒಟ್ಟಾರೆ ರಾಜ್ಯ ವಿಧಾನಸಭೆಗಳಲ್ಲಿ ಮುಸ್ಲಿಂ ಶಾಸಕರ ಪ್ರಮಾಣ ಶೇ.13ರಷ್ಟಿದ್ದು, ದೇಶದ ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲಿಗಿಂತ ಸುಮಾರು ಶೇ.1ರಷ್ಟು ಕಡಿಮೆಯಾಗಿದೆ. ವಿಶೇಷವಾಗಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಮುಸ್ಲಿಂ ಶಾಸಕರ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ.
294 ಸದಸ್ಯರ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಮುಸ್ಲಿಂ ಶಾಸಕರ ಸಂಖ್ಯೆ 42ರಿಂದ 40ಕ್ಕೆ ಇಳಿದಿದೆ. 126 ಸದಸ್ಯರ ಅಸ್ಸಾಂ ವಿಧಾನಸಭೆಯಲ್ಲಿ ಈ ಸಂಖ್ಯೆ 31ರಿಂದ 22ಕ್ಕೆ ಕುಸಿದಿದೆ.
ಆದರೆ 140 ಸದಸ್ಯರ ಕೇರಳ ವಿಧಾನಸಭೆಯಲ್ಲಿ ಮುಸ್ಲಿಂ ಶಾಸಕರ ಸಂಖ್ಯೆ 32ರಿಂದ 35ಕ್ಕೆ ಏರಿಕೆಯಾಗಿದೆ. ತಮಿಳುನಾಡಿನ 234 ಸದಸ್ಯರ ಸದನದಲ್ಲಿ ಈ ಸಂಖ್ಯೆ 6ರಿಂದ 9ಕ್ಕೆ ಹೆಚ್ಚಾಗಿದೆ. ಪುದುಚೇರಿಯ 30 ಸದಸ್ಯರ ವಿಧಾನಸಭೆಯಲ್ಲಿ ಹಿಂದಿನಂತೆಯೇ ಒಬ್ಬ ಮುಸ್ಲಿಂ ಶಾಸಕರಿದ್ದಾರೆ.
►ಲೋಕಸಭೆಯಲ್ಲೂ ಇಳಿಮುಖ
1952ರ ಮೊದಲ ಲೋಕಸಭಾ ಚುನಾವಣೆಯಲ್ಲಿ 25 ಮುಸ್ಲಿಂ ಸಂಸದರು ಆಯ್ಕೆಯಾಗಿದ್ದರು. ಅದು ಒಟ್ಟು ಸದಸ್ಯರ ಶೇ.5.11ರಷ್ಟಾಗಿತ್ತು. 1957ರಲ್ಲಿ ಈ ಸಂಖ್ಯೆ 23ಕ್ಕೆ ಇಳಿಯಿತು. ಸಾಮಾನ್ಯವಾಗಿ ಲೋಕಸಭೆಯಲ್ಲಿ ಮುಸ್ಲಿಂ ಸದಸ್ಯರ ಪ್ರಮಾಣ ಶೇ.4ರಿಂದ 6ರ ನಡುವೆ ಉಳಿದಿದ್ದು, 1980 ಮತ್ತು 1984ರಲ್ಲಿ ಮಾತ್ರ ಏರಿಕೆಯಾಗಿತ್ತು.
1980ರಲ್ಲಿ ದಾಖಲೆಯ 49 ಮುಸ್ಲಿಂ ಸಂಸದರು ಆಯ್ಕೆಯಾಗಿದ್ದು, ಅದು ಲೋಕಸಭೆಯ ಶೇ.9.04ರಷ್ಟಾಗಿತ್ತು. 1984ರಲ್ಲಿ 45 ಮುಸ್ಲಿಂ ಸದಸ್ಯರು ಆಯ್ಕೆಯಾಗಿದ್ದರು. ಆದರೆ ಪ್ರಸ್ತುತ ಲೋಕಸಭೆಯಲ್ಲಿ ಕೇವಲ 24 ಮುಸ್ಲಿಂ ಸದಸ್ಯರಿದ್ದು, ಅದು ಒಟ್ಟು ಸದಸ್ಯರ ಶೇ.4.42ರಷ್ಟಾಗಿದೆ.
2011ರ ಜನಗಣತಿಯ ಪ್ರಕಾರ ದೇಶದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಪ್ರಮಾಣ ಶೇ.14.2ರಷ್ಟಿದೆ.
►ರಾಜಕೀಯ ಪಕ್ಷಗಳ ನಿಲುವು ಕಾರಣ?
ಇಕ್ಬಾಲ್ ಎ. ಅನ್ಸಾರಿ ಅವರ Political Representation of Muslims in India, 1952-2004 ಕೃತಿಯಲ್ಲಿ, ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿಯೇ ರಾಜಕೀಯ ಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್, ಮುಸ್ಲಿಂ ಅಭ್ಯರ್ಥಿಗಳಿಗೆ ಕಡಿಮೆ ಟಿಕೆಟ್ ನೀಡಿದ್ದರಿಂದ ಸಮುದಾಯದ ಪ್ರಾತಿನಿಧ್ಯ ಕುಸಿತ ಆರಂಭವಾಯಿತು ಎಂದು ವಿಶ್ಲೇಷಿಸಲಾಗಿದೆ.
ಕಾಂಗ್ರೆಸ್ ಕಣಕ್ಕಿಳಿಸಿದ್ದ 479 ಅಭ್ಯರ್ಥಿಗಳಲ್ಲಿ ಕೇವಲ 21 ಮಂದಿ ಮಾತ್ರ ಮುಸ್ಲಿಮರಾಗಿದ್ದರು ಎಂದು ಅವರು ಉಲ್ಲೇಖಿಸಿದ್ದಾರೆ. ನಂತರವೂ ಗಣನೀಯ ಮುಸ್ಲಿಂ ಮತದಾರರಿರುವ ಕ್ಷೇತ್ರಗಳಲ್ಲಿ ಮಾತ್ರ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಪ್ರವೃತ್ತಿ ಮುಂದುವರಿದಿತು ಎಂದು ಅವರು ಹೇಳಿದ್ದಾರೆ.
►ಉತ್ತರ ಪ್ರದೇಶ, ಗುಜರಾತ್ ನಲ್ಲಿ ಅಲ್ಪ ಪ್ರಾತಿನಿಧ್ಯ
ಮೊಹಮ್ಮದ್ ಅಬ್ದುಲ್ ಮನ್ನನ್ ಅವರ At the Bottom of the Ladder: State of Indian Muslims ಕೃತಿಯ ಪ್ರಕಾರ, ಉತ್ತರ ಪ್ರದೇಶದಲ್ಲಿ 2022ರವರೆಗೆ ಆಯ್ಕೆಯಾದ ಒಟ್ಟು 7,389 ಶಾಸಕರಲ್ಲಿ ಕೇವಲ 628 ಮಂದಿ ಮಾತ್ರ ಮುಸ್ಲಿಮರಾಗಿದ್ದಾರೆ. ಅದು ಶೇ.8.49ರಷ್ಟು ಮಾತ್ರ.
ಬಿಹಾರದಲ್ಲಿ 5,146 ಶಾಸಕರಲ್ಲಿ 326 ಮಂದಿ ಮುಸ್ಲಿಮರಾಗಿದ್ದು, ಅದು ಶೇ.6.3ರಷ್ಟು. ಗುಜರಾತ್ನಲ್ಲಿ 2017ರವರೆಗೆ ಆಯ್ಕೆಯಾದ 2,296 ಶಾಸಕರಲ್ಲಿ ಕೇವಲ 39 ಮಂದಿ ಮಾತ್ರ ಮುಸ್ಲಿಮರು. ಅದು ಒಟ್ಟು ಪ್ರಾತಿನಿಧ್ಯದ ಶೇ.1.69ರಷ್ಟು. ರಾಜ್ಯದ ಜನಸಂಖ್ಯೆಯಲ್ಲಿ ಮುಸ್ಲಿಮರ ಪ್ರಮಾಣ ಶೇ.8.6ರಷ್ಟಿದ್ದರೂ, ಶಾಸಕಾಂಗದಲ್ಲಿ ಅವರ ಪ್ರಾತಿನಿಧ್ಯ ಅತ್ಯಲ್ಪವಾಗಿದೆ.
►‘ರಾಜಕೀಯ ಧ್ರುವೀಕರಣದಿಂದ ಮುಸ್ಲಿಂ ಪ್ರಾತಿನಿಧ್ಯಕ್ಕೆ ಹೊಡೆತ’
ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕ ಮಿರ್ಜಾ ಅಸ್ಮರ್ ಬೇಗ್ ಅವರ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ದೇಶದ ರಾಜಕೀಯ ವಾತಾವರಣದಲ್ಲಿ ಉಂಟಾದ ಬದಲಾವಣೆಗಳು ಮುಸ್ಲಿಂ ಪ್ರಾತಿನಿಧ್ಯದ ಮೇಲೆ ನೇರ ಪರಿಣಾಮ ಬೀರಿವೆ.
ಬಿಜೆಪಿ ಮುಸ್ಲಿಂ ಅಭ್ಯರ್ಥಿಗಳಿಗೆ ಸಾಮಾನ್ಯವಾಗಿ ಟಿಕೆಟ್ ನೀಡುವುದಿಲ್ಲ. ಮತ್ತೊಂದೆಡೆ, ಇತರ ರಾಜಕೀಯ ಪಕ್ಷಗಳೂ ‘ಅಲ್ಪಸಂಖ್ಯಾತರ ಓಲೈಕೆ’ ಆರೋಪಕ್ಕೆ ಗುರಿಯಾಗುವ ಭಯದಿಂದ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಹಿಂದೇಟು ಹಾಕುತ್ತಿವೆ ಎಂದು ಅವರು ಹೇಳಿದ್ದಾರೆ.
‘ರಾಜಕೀಯ ಧ್ರುವೀಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳ ಗೆಲುವಿನ ಸಾಧ್ಯತೆ ಕಡಿಮೆಯಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಹಲವು ಪಕ್ಷಗಳು ಮುಸ್ಲಿಂ ಮತಗಳನ್ನು ಬಯಸುತ್ತಿವೆಯೇ ಹೊರತು, ಮುಸ್ಲಿಂ ನಾಯಕತ್ವವನ್ನು ಬೆಳೆಸಲು ಮುಂದೆ ಬರುತ್ತಿಲ್ಲ’ ಎಂದು ಬೇಗ್ ಅಭಿಪ್ರಾಯಪಟ್ಟಿದ್ದಾರೆ.
ಅವರ ಪ್ರಕಾರ, ಕ್ಷೇತ್ರ ಪುನರ್ವಿಂಗಡಣೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ವಿಸ್ತರಣೆ, ಹಾಗೂ ಬಹುಮತದ ಮತಗಳ ಪ್ರತಿ-ಧ್ರುವೀಕರಣವೂ ಮುಸ್ಲಿಂ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡುತ್ತಿದೆ.
ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯ ಜಾವೇದ್ ಅಲಿ ಖಾನ್ ಅವರ ಪ್ರಕಾರ, 1992ರ ಬಾಬರಿ ಮಸೀದಿ ಧ್ವಂಸದ ಬಳಿಕ ದೇಶದಲ್ಲಿ ಉಂಟಾದ ಕೋಮುವಾದಿ ವಾತಾವರಣವು ಮುಸ್ಲಿಂ ಪ್ರಾತಿನಿಧ್ಯದ ಕುಸಿತಕ್ಕೆ ಕಾರಣವಾಯಿತು.
‘1993ರ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಒಬ್ಬ ಮುಸ್ಲಿಂ ಶಾಸಕರೂ ಆಯ್ಕೆಯಾಗಿರಲಿಲ್ಲ. ಅದಕ್ಕೂ ಮೊದಲು ವಿಧಾನಸಭೆಯಲ್ಲಿ ಮುಸ್ಲಿಂ ಸಮುದಾಯದ ಪ್ರತಿನಿಧಿಗಳಿದ್ದರು. ಹಿಂದುತ್ವ ರಾಜಕೀಯದ ಏರಿಕೆಗೆ ಅನುಗುಣವಾಗಿ ಮುಸ್ಲಿಂ ಶಾಸಕರ ಸಂಖ್ಯೆ ಕಡಿಮೆಯಾಗತೊಡಗಿತು’ ಎಂದು ಅವರು ಹೇಳಿದ್ದಾರೆ.
ಮೌಲಾನಾ ಆಝಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕ ಅಫ್ರೋಝ್ ಆಲಂ ಅವರ ಪ್ರಕಾರ, ಹೆಚ್ಚಿನ ರಾಜಕೀಯ ಪಕ್ಷಗಳು ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಿದರೂ, ಅಭ್ಯರ್ಥಿ ಆಯ್ಕೆ ವೇಳೆ ‘ಗೆಲ್ಲುವ ಸಾಧ್ಯತೆ’ ಎಂಬ ಅಂಶಕ್ಕೆ ಹೆಚ್ಚು ಒತ್ತು ನೀಡುತ್ತವೆ.
‘ಹಲವು ಸಂದರ್ಭಗಳಲ್ಲಿ ಇದೇ ತರ್ಕವು ಮುಸ್ಲಿಂ ಸಮುದಾಯವನ್ನು ವ್ಯವಸ್ಥಿತವಾಗಿ ಹೊರಗಿಡುವ ಸಾಧನವಾಗುತ್ತದೆ. ಪಕ್ಷಗಳು ಮುಸ್ಲಿಮರನ್ನು ಮತದಾರರಾಗಿ ಪರಿಗಣಿಸುತ್ತಿವೆಯೇ ಹೊರತು, ಅಧಿಕಾರದ ಪಾಲುದಾರರಾಗಿ ಕಾಣುತ್ತಿಲ್ಲ’ ಎಂದು ಅವರು ಹೇಳಿದ್ದಾರೆ.
‘ಜನರು ಮತಹಕ್ಕು ಕಳೆದುಕೊಂಡಾಗ ಮಾತ್ರ ಪ್ರಜಾಪ್ರಭುತ್ವ ದುರ್ಬಲವಾಗುವುದಿಲ್ಲ. ಅಧಿಕಾರದಲ್ಲಿ ತಮ್ಮ ಧ್ವನಿಗೆ ಪ್ರತಿನಿಧಿಯೇ ಇಲ್ಲ ಎಂಬ ಭಾವನೆ ಮೂಡಿದಾಗಲೂ ಅದು ಕುಸಿಯುತ್ತದೆ’ ಅಫ್ರೋಝ್ ಆಲಂ ಅವರು ಹೇಳಿದ್ದಾರೆ.
►ಅಸ್ಸಾಂನಲ್ಲಿ ಬದಲಾಗಿದೆ ರಾಜಕೀಯ ಚಿತ್ರಣ
ಐತಿಹಾಸಿಕವಾಗಿ ಮುಸ್ಲಿಂ ಪ್ರಾತಿನಿಧ್ಯ ಹೆಚ್ಚಿದ್ದ ಅಸ್ಸಾಂ ರಾಜ್ಯದಲ್ಲೂ ಬಿಜೆಪಿ ಆಡಳಿತದ ಬಳಿಕ ಪರಿಸ್ಥಿತಿ ಬದಲಾಗಿದೆ. 126 ಸದಸ್ಯರ ವಿಧಾನಸಭೆಯಲ್ಲಿ 92 ಸ್ಥಾನಗಳನ್ನು ಗೆದ್ದ ಬಿಜೆಪಿ ಒಬ್ಬ ಮುಸ್ಲಿಂ ಅಭ್ಯರ್ಥಿಗೂ ಟಿಕೆಟ್ ನೀಡಿರಲಿಲ್ಲ.
ಕಾಂಗ್ರೆಸ್ ಗೆದ್ದ 19 ಸ್ಥಾನಗಳಲ್ಲಿ 18 ಸ್ಥಾನಗಳನ್ನು ಮುಸ್ಲಿಂ ಅಭ್ಯರ್ಥಿಗಳು ಗೆದ್ದಿದ್ದರು. ಇದನ್ನು ಬಿಜೆಪಿ ‘ಮುಸ್ಲಿಂ ಲೀಗ್ ರಾಜಕೀಯ’ ಎಂದು ಟೀಕಿಸಿತ್ತು.
►ರಾಜ್ಯಗಳಲ್ಲಿ ವೇಗವಾದ ಕುಸಿತ
2013ರಲ್ಲಿ ರಾಜ್ಯ ವಿಧಾನಸಭೆಗಳಲ್ಲಿ ಸುಮಾರು 339 ಮುಸ್ಲಿಂ ಶಾಸಕರಿದ್ದರೆ, ಇತ್ತೀಚಿನ ಚುನಾವಣೆಗಳ ಬಳಿಕ ಈ ಸಂಖ್ಯೆ ಸುಮಾರು 260ಕ್ಕೆ ಇಳಿದಿದೆ.
ಉತ್ತರ ಪ್ರದೇಶದಲ್ಲಿ ಈ ಸಂಖ್ಯೆ 63ರಿಂದ 31ಕ್ಕೆ, ಪಶ್ಚಿಮ ಬಂಗಾಳದಲ್ಲಿ 59ರಿಂದ 40ಕ್ಕೆ ಮತ್ತು ಬಿಹಾರದಲ್ಲಿ 19ರಿಂದ 11ಕ್ಕೆ ಕುಸಿದಿದೆ. ರಾಜಸ್ಥಾನದಲ್ಲಿ 11ರಿಂದ 6ಕ್ಕೆ ಇಳಿಕೆಯಾಗಿದೆ.
230 ಸದಸ್ಯರ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಪ್ರಸ್ತುತ ಕೇವಲ ಇಬ್ಬರು ಮುಸ್ಲಿಂ ಶಾಸಕರು ಇದ್ದಾರೆ. 90 ಸದಸ್ಯರ ಛತ್ತೀಸ್ಗಢ ವಿಧಾನಸಭೆಯಲ್ಲಿ ಒಬ್ಬರೂ ಮುಸ್ಲಿಂ ಶಾಸಕರಿಲ್ಲ. ಮಹಾರಾಷ್ಟ್ರದಲ್ಲಿ 10 ಮಂದಿ ಹಾಗೂ ಕರ್ನಾಟಕದಲ್ಲಿ 9 ಮಂದಿ ಮುಸ್ಲಿಂ ಶಾಸಕರು ಇದ್ದಾರೆ.
119 ಸದಸ್ಯರ ತೆಲಂಗಾಣ ವಿಧಾನಸಭೆಯಲ್ಲಿ 7 ಮಂದಿ ಮುಸ್ಲಿಂ ಶಾಸಕರಿದ್ದು, ಅವರೆಲ್ಲರೂ AIMIM ಪಕ್ಷಕ್ಕೆ ಸೇರಿದವರು.
ಸೌಜನ್ಯ: frontline.thehindu.com






