ದುಬೈನಲ್ಲಿ ಹುಟ್ಟುಹಬ್ಬ ಆಚರಿಸಲು ನಿರಾಕರಿಸಿದ ಪತಿಯನ್ನು ಹೊಡೆದು ಕೊಂದ ಪತ್ನಿ!
ಸಾಂದರ್ಭಿಕ ಚಿತ್ರ
ಪುಣೆ: ಜನ್ಮದಿನಾಚರಣೆಗಾಗಿ ದುಬೈಗೆ ಕರೆದುಕೊಂಡು ಹೋಗಲು ನಿರಾಕರಿಸಿದ 36 ವರ್ಷದ ತನ್ನ ಪತಿಯ ಮೂಗಿಗೆ ಗುದ್ದಿ, ಆತನನನ್ನು ಮಹಿಳೆಯೊಬ್ಬಳು ಹತ್ಯೆಗೈದಿರುವ ಆಘಾತಕಾರಿ ಘಟನೆಯು ನಡೆದಿದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಘಟನೆಯು ಪುಣೆಯ ವನಾವ್ಡಿ ಪ್ರದೇಶದಲ್ಲಿರುವ ವೈಭವೋಪೇತ ವಸತಿ ಸಮುಚ್ಚಯದಲ್ಲಿರುವ ದಂಪತಿಗಳ ನಿವಾಸದದಲ್ಲಿ ಶುಕ್ರವಾರ ನಡೆದಿದೆ ಎಂದು ವರದಿಯಾಗಿದೆ.
ಮೃತ ವ್ಯಕ್ತಿಯನ್ನು ನಿರ್ಮಾಣ ಉದ್ಯಮದ ಉದ್ಯಮಿ ನಿಖಿಲ್ ಖನ್ನಾ ಎಂದು ಗುರುತಿಸಲಾಗಿದ್ದು, ಅವರು ತಮ್ಮ ಪತ್ನಿ ರೇಣುಕಾ(38)ರನ್ನು ಆರು ವರ್ಷಗಳ ಹಿಂದೆ ವಿವಾಹವಾಗಿದ್ದರು.
ವನಾವ್ಡಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, “ಈ ಘಟನೆಯು ಶುಕ್ರವಾರ ಮಧ್ಯಾಹ್ನ ನಡೆದಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ತನ್ನ ಜನ್ಮದಿನದಂದು ದುಬೈಗೆ ಕರೆದುಕೊಂಡು ಹೋಗಲು ನಿರಾಕರಿಸಿದ್ದಕ್ಕೆ ಹಾಗೂ ತನ್ನ ಜನ್ಮದಿನ ಹಾಗೂ ವಿವಾಹ ವಾರ್ಷಿಕೋತ್ಸವದಂದು ದುಬಾರಿ ಉಡುಗೊರೆ ನೀಡದ ಕಾರಣಕ್ಕೆ ದಂಪತಿಗಳಾದ ನಿಖಿಲ್ ಹಾಗೂ ರೇಣುಕಾ ನಡುವೆ ಜಗಳವಾಗಿರುವುದು ಬಹಿರಂಗಗೊಂಡಿದೆ. ಇದಲ್ಲದೆ ದಿಲ್ಲಿಯಲ್ಲಿನ ತನ್ನ ಕೆಲವು ಸಂಬಂಧಿಕರ ಜನ್ಮದಿನಗಳ ಆಚರಿಸಲು ಅಲ್ಲಿಗೆ ತೆರಳಲು ಅವಕಾಶ ನೀಡದ ನಿಖಿಲ್ ಬಗ್ಗೆ ರೇಣುಕಾ ಅಸಮಾಧಾನಗೊಂಡಿದ್ದರು” ಎಂದು ತಿಳಿಸಿದ್ದಾರೆ.
“ಜಗಳದ ಸಂದರ್ಭದಲ್ಲಿ ರೇಣುಕಾ, ನಿಖಿಲ್ ಅವರ ಮುಖಕ್ಕೆ ಗುದ್ದಿದ್ದಾಳೆ. ಆ ಗುದ್ದು ಎಷ್ಟು ತೀವ್ರವಾಗಿತ್ತೆಂದರೆ, ನಿಖಿಲ್ ಮೂಗು ಹಾಗೂ ಕೆಲವು ಹಲ್ಲುಗಳು ಮುರಿದು ಹೋಗಿವೆ. ಅದರಿಂದಾಗಿರುವ ರಕ್ತಸ್ರಾವದಿಂದ ನಿಖಿಲ್ ಪ್ರಜ್ಞಾಹೀನರಾಗಿದ್ದಾರೆ” ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ನಡುವೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ ಅಡಿ ರೇಣುಕಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆಕೆಯನ್ನು ಹೆಚ್ಚಿನ ವಿಚಾರಣೆಗಾಗಿ ಬಂಧಿಸಿದ್ದಾರೆ.