Air India ದುರಂತಕ್ಕೆ ವರ್ಷ | ಗಡಿ ದಾಟಿದ ಮನುಷ್ಯತ್ವ; ಲಂಡನ್ ನಿಂದ ಪ್ರತಿದಿನ ಬರುತ್ತದೆ ಒಂದು ಕರೆ...

Photo Credit : indianexpress.com
✍️ indianexpress. com – ರಿತು ಶರ್ಮ, ವರದಿ
ಅಹಮದಾಬಾದ್: ಜೂನ್ 12, 2025ರಂದು ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ತಮ್ಮ ಹಿರಿಯ ಮಗ ಕಮಲೇಶ್ ಹಾಗೂ ಸೊಸೆ ಧಾಪುಬೆನ್ ಅವರನ್ನು ಕಳೆದುಕೊಂಡ ಗುಜರಾತ್ನ ರೈತ ಸವಧನ್ಭಾಯ್ ಚೌಧರಿ ಅವರಿಗೆ ಕಳೆದ ಒಂದು ವರ್ಷದಿಂದ ಪ್ರತಿದಿನ ಒಂದು ಕರೆ ಬರುತ್ತಿದೆ.
ಲಂಡನ್ ನಿಂದ ಬರುವ ಆ ಕರೆಯ ಆರಂಭ ಯಾವಾಗಲೂ ಒಂದೇ ರೀತಿಯದು. ‘ಕೈಸೆ ಹೋ ಆಪ್? ಟೀಕ್ ಹೋ?’ ; ಈ ಪ್ರಶ್ನೆ ಕೇಳುವವರು ಕಮಲೇಶ್ ಅವರ ಪಾಕಿಸ್ತಾನ ಮೂಲದ ಸಹೋದ್ಯೋಗಿ ಉಮರ್ ಅಲಿ.
ಅಹಮದಾಬಾದ್ ನಿಂದ ಲಂಡನ್ ನ ಗ್ಯಾಟ್ವಿಕ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್ ಲೈನರ್ ವಿಮಾನ 2025ರ ಜೂನ್ 12ರಂದು ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಗಿತ್ತು. ವಿಮಾನದಲ್ಲಿದ್ದ 242 ಜನರಲ್ಲಿ 241 ಮಂದಿ ಮೃತಪಟ್ಟಿದ್ದರು. ಮೃತಪಟ್ಟವರಲ್ಲಿ 26 ವರ್ಷದ ಕಮಲೇಶ್ ಚೌಧರಿ ಹಾಗೂ ಅವರ ಪತ್ನಿ ಧಾಪುಬೆನ್ ಕೂಡ ಸೇರಿದ್ದರು.
ದುರಂತದ ನಂತರದ ದಿನಗಳಲ್ಲಿ ಲಂಡನ್ ನಲ್ಲಿದ್ದ ಉಮರ್ ಅಲಿ ಮತ್ತು ಗುಜರಾತ್ ನ ಬನಸ್ಕಾಂತ ಜಿಲ್ಲೆಯ ಥಾವರ್ ಗ್ರಾಮದ ರೈತ ಸವಧನ್ಭಾಯ್ ನಡುವಿನ ಪರಿಚಯ, ಕಾಲಕ್ರಮೇಣ ಅಚ್ಚರಿಯ ಮಾನವೀಯ ಬಾಂಧವ್ಯವಾಗಿ ರೂಪುಗೊಂಡಿದೆ.
ಪ್ರತಿದಿನ ಕೆಲಸಕ್ಕೆ ತೆರಳುವ ಮುನ್ನ ಉಮರ್ ಅಲಿ ಸವಧನ್ಭಾಯ್ ಅವರಿಗೆ ಕರೆ ಮಾಡುತ್ತಾರೆ. ಕೆಲವೊಮ್ಮೆ ಆರೋಗ್ಯದ ಬಗ್ಗೆ, ಕೆಲವೊಮ್ಮೆ ಹವಾಮಾನದ ಬಗ್ಗೆ, ಇನ್ನೊಮ್ಮೆ ಕೃಷಿಯ ಬಗ್ಗೆ ಮಾತನಾಡುತ್ತಾರೆ.
‘ನನ್ನ ಕಾಲ್ಬೆರಳ ಉಗುರಿನಲ್ಲಿ ಸ್ವಲ್ಪ ನೋವಿದ್ದರೂ ಉಮರ್ ಕರೆ ಮಾಡಿ ವಿಚಾರಿಸುತ್ತಾರೆ. ಅವರ ಮನೆಯಲ್ಲೂ ಯಾರಿಗಾದರೂ ಜ್ವರ ಬಂದರೂ ನಮಗೆ ಗೊತ್ತಾಗುತ್ತದೆ’ ಎಂದು ಸವಧನ್ಭಾಯ್ ಹೇಳುತ್ತಾರೆ.
ಲಂಡನ್ ನಿಂದ ಮಾತನಾಡಿದ ಉಮರ್, ‘ದೇವರು ಈ ಸಂಬಂಧವನ್ನು ಸಾಧ್ಯವಾಗಿಸಿದ್ದಾನೆ. ಕಮಲೇಶ್ ಕೇವಲ ಮಾಧ್ಯಮ. ಈ ಕುಟುಂಬದೊಂದಿಗೆ ಇಷ್ಟು ಹತ್ತಿರವಾಗುತ್ತೇನೆ ಎಂದು ಎಂದಿಗೂ ಭಾವಿಸಿರಲಿಲ್ಲ. ಅವರೊಂದಿಗೆ ಮಾತನಾಡಿದಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ’ ಎಂದು ಹೇಳುತ್ತಾರೆ.
►ವಿಮಾನ ನಿಲ್ದಾಣದ ಕೊನೆಯ ವೀಡಿಯೋ
ದುರಂತದ ದಿನ ಸವಧನ್ಭಾಯ್ ಮತ್ತು ಅವರ ಪತ್ನಿ ರತ್ನಿಬೆನ್ ಮಗ ಮತ್ತು ಸೊಸೆಯನ್ನು ಬೀಳ್ಕೊಡಲು ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಹೋಗಿದ್ದರು. ಆ ದಿನ ತೆಗೆದ 30 ಸೆಕೆಂಡುಗಳ ವೀಡಿಯೋ ಈಗ ಕುಟುಂಬದ ಅಮೂಲ್ಯ ನೆನಪು. ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಬಳಿ ಸಾಂಪ್ರದಾಯಿಕ ಉಡುಗೆಯಲ್ಲಿ, ಗುಲಾಬಿ ಬಣ್ಣದ ಓಢಣಿಯಿಂದ ತಲೆ ಮತ್ತು ಮುಖ ಮುಚ್ಚಿಕೊಂಡಿದ್ದ ಧಾಪುಬೆನ್ ಹಾಗೂ ಟಿ–ಶರ್ಟ್, ಜೀನ್ಸ್ ಧರಿಸಿದ್ದ ಕಮಲೇಶ್ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.
‘ನಾನು ಸಾಮಾನ್ಯವಾಗಿ ವೀಡಿಯೋ ತೆಗೆದುಕೊಳ್ಳುವುದಿಲ್ಲ. ಆದರೆ ಅಂದು ಏಕೆ ತೆಗೆದೆ ಎಂಬುದು ಇಂದಿಗೂ ಅರ್ಥವಾಗಿಲ್ಲ. ಬಹುಶಃ ಅವರ ಮೊದಲ ವಿಮಾನ ಪ್ರಯಾಣವನ್ನು ದಾಖಲಿಸಬೇಕು ಎಂದು ಅನಿಸಿರಬಹುದು’ ಎಂದು ಸವಧನ್ಭಾಯ್ ಹೇಳುತ್ತಾರೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬ ಅಹಮದಾಬಾದ್ ಗೆ ಧಾವಿಸಿತ್ತು. ಆದರೆ ವಿಮಾನವು ಬಿ.ಜೆ. ವೈದ್ಯಕೀಯ ಕಾಲೇಜಿನ ಮೆಸ್ ಕಟ್ಟಡಕ್ಕೆ ಡಿಕ್ಕಿ ಹೊಡೆದು ಬೆಂಕಿಗಾಹುತಿಯಾಗಿತ್ತು.
►ಲಂಡನ್ ಕನಸು
2022ರ ಸೆಪ್ಟೆಂಬರ್ನಿಂದ ಕಮಲೇಶ್ ಲಂಡನ್ ನಲ್ಲಿ ಕೆಲಸ ಮಾಡುತ್ತಿದ್ದರು. 2024ರ ನವೆಂಬರ್ನಲ್ಲಿ ಮದುವೆಗಾಗಿ ಭಾರತಕ್ಕೆ ಬಂದ ಅವರು, ಕೆಲ ತಿಂಗಳ ಬಳಿಕ ಧಾಪುಬೆನ್ ಅವರನ್ನು ಕರೆದುಕೊಂಡು ಹೋಗಲು ಮತ್ತೆ ಭಾರತಕ್ಕೆ ಆಗಮಿಸಿದ್ದರು.
ಐದು ವರ್ಷಗಳಲ್ಲಿ ಸ್ವಂತ ಉದ್ಯಮ ಆರಂಭಿಸುವ ಕನಸು ಅವರದ್ದಾಗಿತ್ತು. Agricultural business management ನಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದ ತಮ್ಮ ಕಿರಿಯ ಸಹೋದರ ಹಿತೇಶ್ ಅವರನ್ನು ಕೂಡ ಲಂಡನ್ ಗೆ ಕರೆಸಿಕೊಳ್ಳುವ ಯೋಜನೆ ಹೊಂದಿದ್ದರು.‘ಈಗ ಆ ವಿಚಾರವನ್ನೇ ನೆನೆಸಿಕೊಂಡರೂ ಮೈ ನಡುಗುತ್ತದೆ’ ಎಂದು ಕುಟುಂಬದ ಸದಸ್ಯ ದೇವ್ಕರನ್ ಚೌಧರಿ ಹೇಳುತ್ತಾರೆ.
►ಸುಟ್ಟ ನೆನಪುಗಳ ಹಸ್ತಾಂತರ
ಈ ವರ್ಷದ ಜನವರಿಯಲ್ಲಿ ಸವಧನ್ಭಾಯ್ ಅಹಮದಾಬಾದ್ ಗೆ ತೆರಳಿ, ಏರ್ ಇಂಡಿಯಾ ಸ್ಥಾಪಿಸಿದ್ದ ‘ಫ್ಯಾಮಿಲಿ ರಿಟರ್ನ್ಸ್ ಸೆಂಟರ್’ನಲ್ಲಿ ಮಗ ಮತ್ತು ಸೊಸೆಯ ವೈಯಕ್ತಿಕ ವಸ್ತುಗಳನ್ನು ಪಡೆದುಕೊಂಡರು.
ಸುಟ್ಟುಹೋದ ಮದುವೆ ಆಲ್ಬಮ್, ನವದಂಪತಿಯ ಚಿತ್ರಗಳಿದ್ದ ಮೇಜಿನ ಕ್ಯಾಲೆಂಡರ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಮದುವೆ ಪ್ರಮಾಣಪತ್ರ ಸೇರಿದಂತೆ ಹಲವು ದಾಖಲೆಗಳು ಅವರಿಗೆ ಸಿಕ್ಕಿದವು.
‘ಕಮಲೇಶ್ ಮುಟ್ಟಿದ ಕೊನೆಯ ವಸ್ತುಗಳು ಇವು. ಇವುಗಳನ್ನು ಜೀವನಪೂರ್ತಿ ನನ್ನ ಬಳಿಯೇ ಇಟ್ಟುಕೊಳ್ಳುತ್ತೇನೆ’ ಎಂದು ಅವರು ಎದೆಗವುಚಿಕೊಳ್ಳುತ್ತಾರೆ. ಧಾಪುಬೆನ್ ಅವರ ಕಾಲಿನ ಚೈನ್ ಕಿವಿಯೋಲೆ ಹಾಗೂ ಕಮಲೇಶ್ ಅವರ ಟಿ–ಶರ್ಟ್ನ ಕೆಲವು ಭಾಗಗಳನ್ನೂ ಕುಟುಂಬಕ್ಕೆ ಹಸ್ತಾಂತರಿಸಲಾಗಿತ್ತು.
►ಒಂದು ಕರೆ, ಒಂದು ಸಂಬಂಧ
ಕಮಲೇಶ್ ಅವರ ಉದ್ಯೋಗದಾತ ಅಂಗತ್ ಸಿಂಗ್ ಅಲಿಯಾಸ್ ‘ತನ್ನಿಭಾಯ್’ ಅವರ ಸೂಚನೆಯಂತೆ ಉಮರ್ ಅಲಿ ಮೊದಲ ಬಾರಿಗೆ ಸವಧನ್ಭಾಯ್ ಅವರಿಗೆ ಕರೆ ಮಾಡಿದ್ದರು. ‘ಮೇರಾ ಬೇಟಾ ಚಲಾ ಗಯಾ’ ಎಂದು ಅಳುತ್ತಿದ್ದ ಸವಧನ್ಭಾಯ್ ಅವರ ಮಾತುಗಳು ಇಂದಿಗೂ ನೆನಪಿವೆ ಎಂದು ಉಮರ್ ಹೇಳುತ್ತಾರೆ.
ಅದಾದ ನಂತರ ಕರೆಗಳು ನಿಲ್ಲಲಿಲ್ಲ. ಆರಂಭದಲ್ಲಿ ಕೆಲವೇ ನಿಮಿಷಗಳ ಮಾತುಕತೆ ನಡೆಯುತ್ತಿತ್ತು. ಬಳಿಕ ಸಂಬಂಧ ಗಟ್ಟಿಯಾಯಿತು. ಈಗ ಇಬ್ಬರೂ ತಮ್ಮ ಕುಟುಂಬದ ಪ್ರತಿಯೊಂದು ವಿಷಯವನ್ನೂ ಹಂಚಿಕೊಳ್ಳುತ್ತಾರೆ. ಉಮರ್ ತಮ್ಮ ಪತ್ನಿ ಸಮೀನಾ ಮತ್ತು ಇಬ್ಬರು ಮಕ್ಕಳ ಫೋಟೊಗಳನ್ನು ಕಳುಹಿಸುತ್ತಾರೆ. ಸವಧನ್ಭಾಯ್ ತಮ್ಮ ಹೊಲಗಳಲ್ಲಿ ಬೆಳೆದ ಕಸ್ತೂರಿ ಕಲ್ಲಂಗಡಿ, ಮೆಣಸಿನಕಾಯಿ, ಬೆಂಡೆಕಾಯಿ ಬೆಳೆಗಳ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ.
ಮಾರ್ಚ್ನಲ್ಲಿ ಗಡ್ಡ ಬೋಳಿಸಿಕೊಂಡ ಬಳಿಕ ಉಮರ್ ವೀಡಿಯೋ ಕರೆ ಮಾಡಿದಾಗ, ‘ನೀವು ತುಂಬಾ ಚೆನ್ನಾಗಿ ಕಾಣುತ್ತಿದ್ದೀರಿ; ಯಾರ ಕಣ್ಣೂ ಬೀಳದಿರಲಿ’ ಎಂದು ಸವಧನ್ಭಾಯ್ ಆಶೀರ್ವದಿಸಿದ್ದಾರಂತೆ.
►ಪರಿಹಾರ ಹಣದಿಂದ ಕಾರು
ಕಮಲೇಶ್ ಸಾವಿನ ನಂತರ ಕುಟುಂಬಕ್ಕೆ ಮಧ್ಯಂತರ ಪರಿಹಾರವಾಗಿ 25 ಲಕ್ಷ ರೂ., ಟಾಟಾ ಟ್ರಸ್ಟ್ನಿಂದ 1 ಕೋಟಿ ರೂ. ಹಾಗೂ ಗುಜರಾತ್ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 4 ಲಕ್ಷ ರೂ. ದೊರೆತಿದೆ. ಅದರ ಒಂದು ಭಾಗವನ್ನು ಕಮಲೇಶ್ ಅವರನ್ನು ಲಂಡನ್ ಗೆ ಕಳುಹಿಸಲು ಪಡೆದಿದ್ದ 55 ಲಕ್ಷ ರೂ. ಸಾಲ ಮರುಪಾವತಿಸಲು ಬಳಸಲಾಗಿದೆ.
ದೀಪಾವಳಿಗೆ ಕಾರು ಕೊಡುತ್ತೇನೆ ಎಂದು ಕಮಲೇಶ್ ಭರವಸೆ ನೀಡಿದ್ದರು. ಆ ಆಸೆಯನ್ನು ನೆನಪಿಸಿಕೊಂಡು ಕುಟುಂಬವು ಪರಿಹಾರದ ಹಣದಿಂದ ಬಿಳಿ ಬಣ್ಣದ SUV ಖರೀದಿಸಿದೆ.
►ಕೃಷಿಯಲ್ಲಿ ಹೊಸ ಪ್ರಯೋಗ
ಕಮಲೇಶ್ ಯಾವಾಗಲೂ ಹೊಸದಾಗಿ ಯೋಚಿಸಬೇಕು ಎಂದು ಹೇಳುತ್ತಿದ್ದರು ಎಂದು ಸವಧನ್ಭಾಯ್ ನೆನಪಿಸಿಕೊಳ್ಳುತ್ತಾರೆ. ಅದರಿಂದ ಪ್ರೇರಿತರಾಗಿ ಅವರು ಕಸ್ತೂರಿ ಕಲ್ಲಂಗಡಿ, ಕೆಂಪು ಮೆಣಸಿನಕಾಯಿ ಸೇರಿದಂತೆ ಹೊಸ ಬೆಳೆಗಳನ್ನು ಬೆಳೆಯಲು ಆರಂಭಿಸಿದ್ದಾರೆ. ಐದು ಎಮ್ಮೆಗಳಲ್ಲಿ ಮೂರು ಮತ್ತು ಹತ್ತು ಹಸುಗಳಲ್ಲಿ ಒಂಭತ್ತು ಹಸುಗಳನ್ನು ಮಾರಾಟ ಮಾಡಿದ್ದಾರೆ.
ಪ್ರತಿಯೊಂದು ನಿರ್ಧಾರವನ್ನೂ ಮೊದಲು ಉಮರ್ ಅವರೊಂದಿಗೆ ಚರ್ಚಿಸುತ್ತಾರೆ. ‘ಕೃಷಿಯ ಬಗ್ಗೆ ಅವರಿಗೆ ಹೆಚ್ಚು ತಿಳಿದಿಲ್ಲ. ಆದರೂ “ಮುಂದುವರಿಯಿರಿ, ದೇವರು ಒಳಿತು ಮಾಡುತ್ತಾನೆ” ಎಂದು ಧೈರ್ಯ ತುಂಬುತ್ತಾರೆ’ ಎಂದು ಸವಧನ್ಭಾಯ್ ಹೇಳುತ್ತಾರೆ.
►ಗಡಿ ದಾಟಿದ ಮನುಷ್ಯತ್ವ
ಕಳೆದ ತಿಂಗಳು ಸವಧನ್ಭಾಯ್ ಲಂಡನ್ ನಲ್ಲಿರುವ ಉಮರ್ ಕುಟುಂಬಕ್ಕೆ ಮನೆಯಲ್ಲಿ ತಯಾರಿಸಿದ ತುಪ್ಪ, ಚೂರ್ಣ ಹಾಗೂ ಒಣ ಕಚೋರಿ ಕಳುಹಿಸಿದ್ದರು. ‘ಕೊರಿಯರ್ಗೆ ಎಷ್ಟು ಖರ್ಚಾಯಿತು?’ ಎಂದು ಉಮರ್ ಕೇಳಿದಾಗ, ‘ನಮ್ಮ ಸಂಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವೇ?’ ಎಂದು ಸವಧನ್ಭಾಯ್ ಉತ್ತರಿಸಿದರು.
ಉಮರ್ ಕೂಡ ಹಿತೇಶ್ ಗೆ ಬ್ಲೇಸರ್ ಮತ್ತು ಶರ್ಟ್, ರತ್ನಿಬೆನ್ ಅವರಿಗೆ ಸ್ವೆಟರ್ ಕಳುಹಿಸಿದ್ದರು. ಇದಕ್ಕೂ ಮೀರಿ, ಕಮಲೇಶ್ ಅವರ ಉದ್ಯೋಗದಾತ ತನ್ನಿಭಾಯ್ ಕಳೆದ 12 ತಿಂಗಳಿಂದ ಪ್ರತಿ ತಿಂಗಳು 50 ಸಾವಿರ ರೂ.ವನ್ನು ಸವಧನ್ಭಾಯ್ ಅವರ ಖಾತೆಗೆ ಜಮೆ ಮಾಡುತ್ತಿದ್ದಾರೆ. ಕುಟುಂಬ ಮತ್ತು ಸ್ನೇಹಿತರಿಂದ 3,57,191 ರೂ.ಸಂಗ್ರಹಿಸಿರುವುದಾಗಿಯೂ ಅವರು ತಿಳಿಸಿದ್ದಾರೆ.
ಜೂನ್ 12ರಂದು ದುರಂತಕ್ಕೆ ಮೊದಲ ವರ್ಷವಾಗುತ್ತಿರುವುದಿಂದ ಸವಧನ್ಭಾಯ್ ಕುಟುಂಬ ಅಹಮದಾಬಾದ್ ನ ಅಪಘಾತ ಸ್ಥಳಕ್ಕೆ ಭೇಟಿ ನೀಡಲಿದೆ.
‘ನಾವು ರೈತರು. ನಮ್ಮ ಮಗ ವಿದೇಶಕ್ಕೆ ಹೋಗುತ್ತಾನೆ ಎಂದು ಎಂದಿಗೂ ಭಾವಿಸಿರಲಿಲ್ಲ. ಒಮ್ಮೆ ನಮ್ಮನ್ನು ಲಂಡನ್ ಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದ. ಈಗ ಆ ಕನಸುಗಳು ಮುರಿದು ಬಿದ್ದಿವೆ’ ಎಂದು ಸವಧನ್ಭಾಯ್ ಹೇಳುತ್ತಾರೆ. ಆದರೆ ಆ ಮುರಿದ ಕನಸುಗಳ ನಡುವೆ, ಲಂಡನ್ ನಿಂದ ಪ್ರತಿದಿನ ಬರುವ ಒಂದು ಕರೆ ಅವರಿಗೆ ಬದುಕನ್ನು ಮುಂದುವರಿಸುವ ಧೈರ್ಯ ನೀಡುತ್ತಿದೆ.
ಸೌಜನ್ಯ : indianexpress. com






