ಮುಂಬೈ ಸಿದ್ಧಿವಿನಾಯಕ ದೇವಾಲಯದ ದೇಣಿಗೆಯಿಂದ 18 ಕೋಟಿ ರೂ.ಕಳ್ಳತನ : ರಾಜ್ ಠಾಕ್ರೆ ಆರೋಪ

Photo | hindustantimes
ಮುಂಬೈ: ಅಯೋಧ್ಯೆಯಲ್ಲಿನ ರಾಮಮಂದಿರದ ದೇಣಿಗೆ ಕಳವು ಪ್ರಕರಣದ ಬಳಿಕ, ಪರ್ಭಾದೇವಿಯಲ್ಲಿರುವ ಪ್ರಖ್ಯಾತ ಸಿದ್ಧಿವಿನಾಯಕ ದೇವಾಲಯದ ದೇಣಿಗೆ ಹುಂಡಿಯಿಂದ 18 ಕೋಟಿ ರೂ. ಕಳವಾಗಿದೆ ಎಂದು ದೇವಾಲಯದ ಟ್ರಸ್ಟಿಗಳು ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಪತ್ರ ಬರೆದಿದ್ದಾರೆ ಎಂದು ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಆರೋಪಿಸಿದ್ದಾರೆ. ಆದರೆ, ಈ ಆರೋಪಗಳನ್ನು ಅಲ್ಲಗಳೆದಿರುವ ಟ್ರಸ್ಟ್ ಅಧ್ಯಕ್ಷ ಸದಾ ಸಾರ್ವಂಕರ್, ರಾಜ್ ಠಾಕ್ರೆ ಅವರು ಪತ್ರವನ್ನು ತಪ್ಪಾಗಿ ವ್ಯಾಖ್ಯಾನಿಸಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.
ನವನಿರ್ಮಾಣ ಸೇನೆಯ ವಿದ್ಯಾರ್ಥಿ ಘಟಕದ 20ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ರಾಜ್ ಠಾಕ್ರೆ, ದೇವಾಲಯದ ಟ್ರಸ್ಟ್ ನ 11 ಮಂದಿ ಸದಸ್ಯರ ಪೈಕಿ ಶಿವಸೇನೆ ಸದಸ್ಯ ರಾಹುಲ್ ಲೊಂಧೆ ಮತ್ತು ಮೀನಾ ಕಾಂಬ್ಳಿ ಹಾಗೂ ಟ್ರಸ್ಟ್ ನ ಅಧ್ಯಕ್ಷ ಸದಾ ಸಾರ್ವಂಕರ್ ಸೇರಿದಂತೆ ಎಂಟು ಸದಸ್ಯರು ಬರೆದಿರುವ ಪತ್ರವನ್ನು ಓದಿದರು. “ಈ ದೇಶದ ವಿಚಲಿತರಾದ ಯುವಜನತೆ ದೇವಾಲಯಕ್ಕೆ ತೆರಳಿದರೆ, ದೇವಾಲಯಗಳಲ್ಲೂ ಕಳ್ಳತನವನ್ನು ನೋಡುತ್ತಿದ್ದಾರೆ” ಎಂದು ಟೀಕಿಸಿದರು.
ಪ್ರಾಥಮಿಕ ಅಂದಾಜಿನ ಪ್ರಕಾರ, ಅಯೋಧ್ಯೆಯಲ್ಲಿನ ರಾಮಮಮಂದಿರದಲ್ಲಿನ ದೇಣಿಗೆ ಕಳ್ಳತನದ ಪ್ರಮಾಣ ಸುಮಾರು 1,400 ಕೋಟಿ ಆಗಿರಬಹುದು ಎಂದು ಹೇಳಲಾಗಿದೆ. ಈ ಕಳವು ಪ್ರಕರಣದ ಕುರಿತು ಬಿಜೆಪಿ ಸರಕಾರದ ಪ್ರತಿಯೊಬ್ಬರೂ ಮೌನವಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
“ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದ ಪದ್ಧತಿಗಳನ್ನು ಏಕಾಂಗಿಯಾಗಿ ನಿರ್ವಹಿಸಿದ ಪ್ರಧಾನಿ ನರೇಂದ್ರ ಮೋದಿ, ಈವರೆಗೆ ಈ ಕುರಿತು ಒಂದೇ ಒಂದು ಮಾತನ್ನೂ ಹೇಳಿಲ್ಲ” ಎಂದು ಅವರು ಹೇಳಿದರು. “ಅದೇ ರೀತಿ, ಸಿದ್ಧಿವಿನಾಯಕ ದೇವಾಲಯದ ಟ್ರಸ್ಟಿಗಳು ದೇವಾಲಯದ ದೇಣಿಗೆ ಲೂಟಿಯ ಕುರಿತು ತನಿಖೆಗೆ ಆಗ್ರಹಿಸಿ ಉಪ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರಿಗೆ ಪತ್ರ ಬರೆದಿದ್ದಾರೆ” ಎಂದು ಅವರು ಹೇಳಿದರು.
ಆದರೆ, ಈ ಕುರಿತು ಸ್ಪಷ್ಟೀಕರಣ ನೀಡಿರುವ ದೇವಾಲಯದ ಟ್ರಸ್ಟಿ ರಾಹುಲ್ ಲೊಂಧೆ, “ಉದ್ಧವ್ ಠಾಕ್ರೆ ಅವಧಿಯ ದೇವಾಲಯದ ಲೆಕ್ಕ ಪರಿಶೋಧನೆ ನಡೆಸಬೇಕು ಎಂದು ಮಹಾಯುತಿ ಮೈತ್ರಿಕೂಟಕ್ಕೆ ಸೇರಿರುವ ಎಲ್ಲ ಟ್ರಸ್ಟಿಗಳು ಆಗ್ರಹಿಸಿದ್ದಾರೆ” ಎಂದು ತಿಳಿಸಿದ್ದಾರೆ.
“ಪರಿಶೀಲನಾ ಸಭೆಯಲ್ಲಿ ದೀರ್ಘಕಾಲೀನ ನೌಕರರಿಂದ ಅಕ್ರಮಗಳು ನಡೆಯುತ್ತಿವೆ ಎಂಬುದು ನಮಗೆ ಮನವರಿಕೆಯಾಯಿತು. ಈ ಪೈಕಿ ಒಂಬತ್ತು ನೌಕರರ ಮೇಲೆ ನಿಗಾ ವಹಿಸಿ ಸೆರೆ ಹಿಡಿಯಲಾಯಿತು. ಇದರರ್ಥ, ಹಿಂದಿನ ಸರಕಾರದಲ್ಲಿ ಇದೇ ನೌಕರರು ದೇಣಿಗೆ ಪೆಟ್ಟಿಗೆಯಿಂದ ಕದಿಯುತ್ತಿದ್ದರಬಹುದು ಎಂದಾಗಿದೆ. ಹೀಗಾಗಿ, ನಾವು ಡಿಸಿಎಂ ಏಕನಾಥ್ ಶಿಂಧೆಗೆ ಪತ್ರ ಬರೆದು, ದೇವಾಲಯದ ಲೆಕ್ಕ ಪರಿಶೋಧನೆಗೆ ಬೇಡಿಕೆ ಇಟ್ಟಿದ್ದೇವೆ” ಎಂದು ಹೇಳಿದ್ದಾರೆ.






